ಅಸಮತೋಲನ ನಿವಾರಣೆಗೆ ಹಲವು ಸಲಹೆ

12rajesh2
Published on

ಚಾಮರಾಜನಗರ: ಜಿಲ್ಲೆಯ ಕಾಡಂಚಿನ ಗ್ರಾಮಗಳ ಅಭಿವೃದ್ಧಿ, ಮಕ್ಕಳಿಗೆ ಉತ್ತಮ ಶಿಕ್ಷಣ, ನಿರುದ್ಯೋಗಿ ಯುವಕರಿಗೆ ಉದ್ಯೋಗ, ನೀರಾವರಿ ಯೋಜನೆಗಳಿಗೆ ಆದ್ಯತೆ, ಕೃಷಿ ಹಾಗೂ ಕೈಗಾರಿಕೆಗಳಿಗೆ ವಿಶೇಷ ಕಾಳಜಿ ನೀಡುವಂತೆ ಒತ್ತಾಯ ಕೇಳಿಬಂದಿತು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಪಂಚಾಯಿತಿ ನೂತನ ಕೆಡಿಪಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣ ಸಮಿತಿಯ ಜಿಲ್ಲಾ ಮಟ್ಟದ ಸಂವಾದ ಸಭೆಯಲ್ಲಿ ಶಾಸಕದ್ವಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಮಾತನಾಡಿ ಅನೇಕ ಸಲಹೆಗಳನ್ನು ನೀಡಿದರು.

ಹನೂರು ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ನಂಜುಂಡಪ್ಪ ವರದಿಯ ಅನುಸಾರ ಹನೂರು ತಾಲೂಕನ್ನು ಅತ್ಯಂತ ಹಿಂದುಳಿದ ತಾಲೂಕು ಎಂದು ಗುರುತಿಸಲಾಗಿದೆ. ಈ ಭಾಗದಲ್ಲಿ ಹೆಚ್ಚಾಗಿ ಸೋಲಿಗರು ಮತ್ತು ಇನ್ನಿತರೆ ಬುಡಕಟ್ಟು ಸಮುದಾಯಗಳ ಜನರು ವಾಸ ಮಾಡುತ್ತಿದ್ದು, ಅವರ ಅಭಿವೃದ್ಧಿಗೆ ಒತ್ತು ನೀಡುವ ವಿಶೇಷ ಯೋಜನೆಗಳನ್ನು ಹಾಕಿಕೊಳ್ಳಬೇಕು. ಕಾಡಂಚಿನ ಗ್ರಾಮಗಳ ರೈತರಿಗೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಚೈನ್‌ಲಿಂಕ್ ಬೇಲಿ ಅಳವಡಿಕೆಗೆ ಸಬ್ಸಿಡಿ ನೀಡುವ ಯೋಜನೆ ಜಾರಿಗೊಳಿಸಬೇಕು. ಈ ಭಾಗದ ಯುವಕರಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಉನ್ನತ ಶಿಕ್ಷಣದ ಶುಲ್ಕ ವಿನಾಯಿತಿ ನೀಡಬೇಕು ಎಂದರು.

ಹನೂರು ಭಾಗದಲ್ಲಿ 40,000 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಕೇವಲ 10-12 ಸಾವಿರ ಎಕರೆ ಪ್ರದೇಶಕ್ಕೆ ಮಾತ್ರ ನೀರು ದೊರೆಯುತ್ತಿದೆ. ಈ ನಿಟ್ಟಿನಲ್ಲಿ ನೀರು ಮತ್ತು ವಿದ್ಯುತ್ ಸಮರ್ಪಕವಾಗಿ ದೊರೆಯುವ ಸಮಗ್ರ ಯೋಜನೆ ಜಾರಿಯಾಗಬೇಕು. ಹನೂರು ಭಾಗದ ಶೇ. 35-40 ರಷ್ಟು ಜನರು ಉದ್ಯೋಗ ಅರಸಿ ಬೇರಡೆ ವಲಸೆ ಹೋಗುತ್ತಿದ್ದಾರೆ. ಆಗಾಗಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ಯೋಜನೆಗಳು ಜಾರಿಯಾಗಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ವಿತ್ತೀಯ ಸುಧಾರಣೆ ಮತ್ತು ಯೋಜನಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಆರ್.ವಿಶಾಲ್, ನಿರ್ದೇಶಕ ಚಂದ್ರಶೇಖರ್, ಸದಸ್ಯ ಡಾ.ಸೂರ್ಯನಾರಾಯಣವ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾರೋತ್, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಹಾಗೂ ಇತರರು ಉಪಸ್ಥಿತರಿದ್ದರು.

ಶಿಕ್ಷಕರ ಕೊರತೆ ನೀಗಿಸಿ:

ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳ ಲಿತಾಂಶವನ್ನು ಗಮನಿಸಿದರೇ, ಲಿತಾಂಶ ಕುಸಿದಿರುವುದು ಕಂಡುಬರುತ್ತದೆ. ಗ್ರಾಮೀಣ ಭಾಗದಲ್ಲಿ ಸೂಕ್ತ ರೀತಿಯಲ್ಲಿ ಶಾಲಾ ಕೊಠಡಿಗಳು ಇಲ್ಲದೇ ಇರುವುದು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಈ ನಿಟ್ಟಿನಲ್ಲಿ ಬಹುಮುಖ್ಯವಾಗಿ ಉತ್ತಮ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವುದರ ಮೂಲಕ ಕೊರತೆಯನ್ನು ನೀಗಿಸಬೇಕು ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮನವಿ ಮಾಡಿದರು. ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಗಳಿಗೆ 371 ವಿಧಿಯ ಪ್ರಕಾರ ವಿಶೇಷ ಸ್ಥಾನಮಾನಗಳು ದೊರಕಿದೆ. ಅದರಂತೆ ಹಿಂದುಳಿದ ಜಿಲ್ಲೆಯಾದ ಚಾಮರಾಜನಗರದ ಅಭಿವೃದ್ಧಿಗೆ ಹೆಚ್ಚು ಅನುದಾನವನ್ನು ನಿಗದಿ ಮಾಡಬೇಕು. ನಮ್ಮ ಭಾಗದಲ್ಲಿ ಮಳೆಯಾಶ್ರಿತ ಪ್ರದೇಶ ಹೆಚ್ಚಾಗಿದ್ದು, ಕೆರೆ ತುಂಬಿಸುವ ಯೋಜನೆಗೆ ಹೆಚ್ಚಿನ ಆಸಕ್ತಿ ತೋರಿಸಬೇಕು. ಕಬಿನಿ 2ನೇ ಹಂತದ ಯೋಜನೆಗೆ ಮರುಜೀವ ನೀಡಬೇಕು. ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಬೇಕು. ಸೋಲಿಗರು ಮತ್ತು ಬುಡಕಟ್ಟು ಸಮುದಾಯಗಳ ಜನರಿಗೆ ಯೋಗ್ಯವಾದ ಮನೆ ನಿರ್ಮಾಣ ಹಾಗೂ ಕಾಲೋನಿಗಳಲ್ಲಿ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಡಬೇಕು ಎಂದು ತಿಳಿಸಿದರು.

ಕೈಗಾರಿಕಾ ಕ್ಷೇತ್ರ ವಿಸ್ತರಿಸಿ:

ಜಿಲ್ಲೆಯ ಅಭಿವೃದ್ಧಿಯಾಗಬೇಕಾದರೆ ಕೈಗಾರಿಕೆಯಿಂದಲೇ ಮಾತ್ರ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಕೈಗಾರಿಕಾ ಪ್ರದೇಶವನ್ನು ವಿಸ್ತರಣೆ ಮಾಡಬೇಕು ಎಂದು ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ವಿ.ಪ್ರಭಾಕರ್ ಸಲಹೆ ನೀಡಿದರು. ಈಗಾಗಲೇ ಬದನಗುಪ್ಪೆ-ಕೆಲ್ಲಂಬಳ್ಳಿ 2ನೇ ಹಂತದ ಕೈಗಾರಿಕಾ ಪ್ರದೇಶ ವಿಸ್ತೀರ್ಣಗೊಳ್ಳಲಿದೆ. ಅದರಂತೆ ಕೊಳ್ಳೇಗಾಲ-ಹನೂರು, ಗುಂಡ್ಲುಪೇಟೆ ಮತ್ತು ಯಳಂದೂರಿನಲ್ಲೂ ಕೈಗಾರಿಕಾ ಪ್ರದೇಶವನ್ನು ವಿಸ್ತರಿಸಬೇಕಿದೆ. ರೈತರ ಬೆಳೆಗಳ ಸಂರಕ್ಷಣೆ ಮತ್ತು ಮಾರಾಟಕ್ಕೆ ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಬೇಕಿದೆ. ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ತರಬೇತಿ ನೀಡಲು ಗಮನಹರಿಸಬೇಕಿದೆ ಎಂದರು. ಉದ್ಯಮಿ ಜಯಸಿಂಹ ಮಾತಮಾಡಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಬಲನೀಡುವ ನಿಟ್ಟಿನಲ್ಲಿ 5ವರ್ಷ ಜಿಎಸ್‌ಟಿ ವಿನಾಯಿತಿ ನೀಡಬೇಕು. ಆಹಾರ ಉತ್ಪಾದನಾ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕಿದೆ ಎಂದರು.

ತೋಟಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪಿಸಿ:

ಜಿಲ್ಲೆಯಲ್ಲಿ ಬಾಳೆ, ಅರಿಶಿಣ ಹಾಗೂ ಇನ್ನಿತರೆ ತೋಟಗಾರಿಕೆ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ತೋಟಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪನೆಗೆ ಆದ್ಯತೆ ನೀಡಬೇಕು. ಸಿಮ್ಸ್ ಮೆಡಿಕಲ್ ಕಾಲೇಜು, ಇಂಜಿಯರಿಂಗ್ ಕಾಲೇಜು, ಕೃಷಿ ಕಾಲೇಜು ಹಾಗೂ ಇನ್ನಿತರೆ ಕಾಲೇಜುಗಳ ಮೂಲಸೌಕರ್ಯಕ್ಕೆ ಒತ್ತು ನೀಡಬೇಕು ಎಂದು ರೋಟರಿ ಸಂಸ್ಥೆಯ ಅಧ್ಯಕ್ಷ ಗಿರೀಶ್ ದೊಡ್ಡರಾಯಪೇಟೆ ಹೇಳಿದರು. ರೈತ ಮುಖಂಡ ಮಹೇಶ್ ಪ್ರಭು ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಬಹುಮುಖ್ಯವಾಗಿ ಮಾರುಕಟ್ಟೆ ಹಾಗೂ ಬೆಂಬಲ ಬೆಲೆ ದೊರೆಯಬೇಕು. ಮಾರುಕಟ್ಟೆಯಲ್ಲಿ ಕಳಬೆರಕೆ ಪದಾರ್ಥಗಳಿಂದ ಹೆಚ್ಚಿನ ಅಸಮತೋಲನ ಉಂಟಾಗುತ್ತಿದೆ. ಇದನ್ನು ಸರಿದೂಗಿಸುವ ಹಾಗೂ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಮಿತಿ ವಿಶೇಷ ಆದ್ಯತೆಯನ್ನು ನೀಡಬೇಕು ಎಂದು ಹೇಳಿದರು.

ನಂಜುಂಡಪ್ಪ ವರದಿಯ ಅನುಸಾರ ಹಿಂದುಳಿದ ತಾಲೂಕು ಎಷ್ಟು ಮುಂದುವರಿದಿದೆ ಎಂಬುದನ್ನು ಅರಿತು ಅಸಮತೋಲನವನ್ನು ಹೋಗಲಾಡಿಸುವುದೇ ಸಮಿತಿಯ ಉದ್ದೇಶವಾಗಿದೆ. ಈ ವರೆಗೆ ಹಿಂದುಳಿದ ತಾಲೂಕುಗಳು ಯಾವ ರೀತಿಯಲ್ಲಿ ಪ್ರಗತಿಯಾಗಿದೆ ಎಂಬುದನ್ನು ಅಂಕಿಅಂಶಗಳ ಮೂಲಕ ದಾಖಲು ಮಾಡಿ, ಯೋಜನೆಗಳ ಅನುಷ್ಠಾನ ಮಾಡಬೇಕಿದೆ. ಈ ಸಂವಾದದ ಮೂಲಕ ಸಲಹೆಗಳನ್ನು ಸ್ವೀಕರಿಸಲಾಗಿದೆ.

-ಪ್ರೊ.ಎಂ.ಗೋವಿಂದ ರಾವ್, ಆರ್ಥಿಕ ತಜ್ಞ ಮತ್ತು ಅಧ್ಯಕ್ಷ, ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net