

ಚಿತ್ರದುರ್ಗ: ಅಸಂಘಟಿತ ಕಾರ್ಮಿಕರಿಗೆ ಜೀವನ ಭದ್ರತೆ ಒದಗಿಸುವ ದೃಷ್ಟಿಯಿಂದ ಬೆಂಗಳೂರಿಂದ ಕಲಬುರಗಿವರೆಗೆ ಕರ್ನಾಟಕ ಶ್ರಮಿಕ್‌ಸಮ್ಮಾನ್ ಯಾತ್ರೆ ಹೊರಟಿದೆ ಎಂದು ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘದ ಕಾರ್ಯದರ್ಶಿ ಲೀಲಾವತಿ ಹೇಳಿದರು. ಬೆಂಗಳೂರಿಂದ ಬುಧವಾರ ಹೊರಟ ಈ ಯಾತ್ರೆ ಗುರುವಾರ ಚಿತ್ರದುರ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ನಗರದ ಬಾಲಭವನದ ಬಳಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು.
ಅಸಂಘಟಿತ ಕಾರ್ಮಿಕರಿಗೆ ಪಿಎಫ್, ಇಎಸ್‌ಐ ಸೇರಿ ನಿವೇಶನ ವಿತರಣೆ, ಮನೆ ಕಟ್ಟಿಸಿಕೊಡುವುದು. ಕೈಗಾರಿಕಾ ಅಭಿವೃದ್ದಿ ವಲಯಗ ಳಲ್ಲಿ ಕಾರ್ಮಿಕರ ವಸತಿಗೆ ಭೂಮಿ ಕಾಯ್ದಿರಿಸುವ ಬೇಡಿಕೆಗಳೆಡೆ ಅಸಂಘಟಿತ ಕಾರ್ಮಿಕರನ್ನು ಯಾತ್ರೆ ಜಾಗೃತಿಗೊಳಿಸಲಿದೆ. ದೇಶದ 11 ರಾಜ್ಯಗಳಲ್ಲಿ ನಡೆಯಲಿರುವ ಯಾತ್ರೆ ಫೆ.25 ರಂದು ಹೊಸದಿಲ್ಲಿ ತಲುಪಲಿದೆ. ಅಂದು ಅಲ್ಲಿಯ ಜಂತರ್‌ಮಂತರ್‌ನಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಅಧ್ಯಕ್ಷ ಟಿಪ್ಪುಖಾಸಿಂ ಆಲಿ ಮಾತನಾಡಿ, ಅಸಂಘಟಿತ ಕಾರ್ಮಿಕರ ಸಮಸ್ಯೆಗಳನ್ನು ಸರ್ಕಾರಗಳ ಗಮನಕ್ಕೆ ತರುವ ಉದ್ದೇಶದೊಂದಿಗೆ ಹೊರಟಿರುವ ಈ ಯಾತ್ರೆ ನಿಜಕ್ಕೂ ಕಾರ್ಮಿಕರಲ್ಲಿ ಶಕ್ತಿ ತುಂಬಲಿದೆ ಎಂದರು.
ರಾಜ್ಯ ಅಸಂಘಟಿತ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷ ಗಣೇಶ್ ಮಾತನಾಡಿ, ಸರ್ಕಾರಗಳು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯಶ್ರಮಿಕ ಸಂಘದ ಗೌರವಾಧ್ಯಕ್ಷೆ ನಳಿನಾ, ಉಪಾಧ್ಯಕ್ಷ ಕೃಷ್ಣ, ಜಿಲ್ಲಾ ಬಡಗಿ ಕೆಲಸಗಾರರ ಸಂಘದ ಅಧ್ಯಕ್ಷ ಎ. ಜಾಕಿರ್‌ಹುಸೇನ್, ಟೈಲರ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ಟಿ. ಶಫಿವುಲ್ಲಾ, ರಂಗಸ್ವಾಮಿ, ಮೈಲಾರಪ್ಪ, ಸಬೀನಾ, ಇಮಾಂಸಾಬ್, ಮಲ್ಲೇಶ್, ಮಚ್ಚಂದ್ರಪ್ಪ, ಸಿದ್ದಲಿಂಗಪ್ಪ, ನಾಗರಾಜ್, ಶಫಿ, ಪ್ರಸನ್ನ ಮತ್ತಿತರರು ಇದ್ದರು.