ಅಷ್ಟೋತ್ತರ, ಕುಂಕುಮಾರ್ಚನೆ

bhr pooja
Published on

ಬಾಳೆಹೊನ್ನೂರು: ಹೋಬಳಿಯಾದ್ಯಂತ ಮಹಿಳೆಯರು ವರಮಹಾಲಕ್ಷ್ಮೀ ವ್ರತವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ, ಕಲಶ ಪ್ರತಿಷ್ಠಾಪಿಸಿ ಲಕ್ಷ್ಮೀಯನ್ನು ಪ್ರಾರ್ಥಿಸಿದರು. ಹಬ್ಬಕ್ಕೆಂದು ತಯಾರಿಸಿದ ವಿವಿಧ ಖಾದ್ಯಗಳನ್ನು ದೇವರಿಗೆ ನೈವೇದ್ಯ ಮಾಡಿದರು. ಮುತ್ತೈದೆಯರನ್ನು ಮನೆಗೆ ಆಹ್ವಾನಿಸಿದ ನಾರಿಯರು ಅರಿಶಿಣ, ಕುಂಕುಮ, ಹೂ, ಬಳೆಗಳನ್ನು ನೀಡಿ ಸತ್ಕರಿಸಿದರು.

ರಂಭಾಪುರಿ ಪೀಠದ ಶಕ್ತಿಮಾತೆ ಚೌಡೇಶ್ವರಿ ಅಮ್ಮನವರ ಸನ್ನಿಧಿ, ಭದ್ರಕಾಳಿ ಅಮ್ಮನವರು ಹಾಗೂ ಪಾರ್ವತಿದೇವಿ ಸನ್ನಿಧಿಯಲ್ಲಿ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ವಿಶೇಷ ಪೂಜೆ ನೆರವೇರಿಸಿ ಅಷ್ಟೋತ್ತರ, ಕುಂಕುಮಾರ್ಚನೆ ಹಾಗೂ ಮಹಾಮಂಗಳಾರತಿ ನೆರವೇರಿಸಿದರು. ರಂಭಾಪುರಿ ಪೀಠದ ಶಿವಾನಂದ ಎಸ್ಟೇಟ್‌ನಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಕೆರೆಗೆ ಬಾಗಿನ ಸಲ್ಲಿಸಿದರು.

ಪಟ್ಟಣದ ಮೃತ್ಯುಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಕೆ.ಎಸ್.ಪ್ರಕಾಶ್ ಭಟ್ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿತು. ಎನ್.ಆರ್.ಪುರ ರಸ್ತೆಯ ಚೌಡೇಶ್ವರಿ ದೇವಸ್ಥಾನ, ಅಕ್ಷರನಗರದ ಗುರಿಕಟ್ಟೆಬೈಲು ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ಸುತ್ತಮುತ್ತಲಿನ ವಿವಿಧ ಅಮ್ಮನವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು. ಬೆಳಗ್ಗೆಯಿಂದಲೇ ಮಹಿಳೆಯರು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net