ಅಷ್ಟಾವರಣ ಅರಿವು ಅಗತ್ಯ

27 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾಧನೆಯಲ್ಲಿ ಸಾಮರಸ್ಯ ಪಡೆಯುವುದಕ್ಕೆ ನಮ್ಮಲ್ಲಿ ಅಷ್ಟಾವರಣ ಅರಿವು ಅವಶ್ಯಕವಾಗಿದ್ದು, ಶರೀರದಲ್ಲಿ ಸೂಪ್ತವಾದ ಜ್ಯೋತಿಯನ್ನು ಜಾಗೃತಗೊಳಿಸಲು ವಚನ ಸಾಹಿತ್ಯವು ಪೂರಕವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ಹೇಳಿದರು.
ನಗರದ ಬಸವ ಕೇಂದ್ರದ ವತಿಯಿಂದ ಆರ್.ಎಲ್.ಎಸ್ ಮಹಾವಿದ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ವಚನ ಲೇಖನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಸಹಜ ರೀತಿಯಲ್ಲಿ ನೈಸರ್ಗಿಕ, ವೈಚಾರಿಕತೆಯ ಅನುಭಾವವು ವಚನ ಮೂಲಕ ಮನದಾಳ ಸೇರಲಿದೆ. ಅನುಭಾವವು ಯಾವುದೇ ಜಾತಿ ಮತಗಳಿಗೆ ಸಂಬಂಧಿಸಿಲ್ಲ. ಅದು ಅಖಂಡ ಮಾನವ ಜನಾಂಗದ ಸಕಲ ಜೀವಾತ್ಮರ ಲೇಸಿಗಾಗಿ ಉದಯವಾಗಿದೆ. ಬಸವಾದಿ ಶರಣರು ಅನುಭಾವದ ಜ್ಞಾನವನ್ನು ಲೋಕಾನುಭವಿಗಳಿಗೆ ದೀಕ್ಷೆ ಮೂಲಕ ಅನುಗ್ರಹಿಸಿದ ಕಾರಣ ಈ ಜಗತ್ತಿನಲ್ಲಿ ಶರಣರ, ಅನುಭಾವಿಗಳ ಸಂಖ್ಯೆ ಹೆಚ್ಚಾಯಿತು. ಅವರು ರಚಿಸಿದ ವಚನಗಳು ಹೆಚ್ಚು ಪ್ರಚಲಿತಗೊಂಡವು. ಅವುಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡು ಜೀವನದ ಮೌಲ್ಯ ವೃದ್ದಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬಸವ ಕೇಂದ್ರದ ಅಧ್ಯಕ್ಷ ಸಿದ್ದರಾಮಣ್ಣ ನಡಕಟ್ಟಿ ಮಾತನಾಡಿ, ವಚನ ಸಾಹಿತ್ಯ ಮಾನವನನ್ನು ವಿಶ್ವ ಮಾನವನನ್ನಾಗಿಸುವ ಹಾಗೂ ಸಂಸ್ಕೃತಿಯನ್ನು ತಮ್ಮೊಳಗೆ ಕಾಪಾಡಿಕೊಂಡಿರುವ ಶಬ್ದಾರ್ಥ, ಲಕ್ಷಣಾರ್ಥ, ತತ್ವಾರ್ಥ ಮತ್ತು ಸದಾ ಹೊಸತನ ಮೂಡಿಸಲಿದೆ. ಹೀಗಾಗಿ ವಚನಗಳ ಅಧ್ಯಯನವು ಮಕ್ಕಳಿಗೆ ಅವಶ್ಯಕ ಎಂದರು.
ಜೀವನ ಮೌಲ್ಯ ವಚನ ಪುಸ್ತಕ ಬಿಡುಗಡೆಗೊಳಿಸಲಾಯಿತು. ಸಿ.ಎಂ. ಅಡವೇರ, ಬಸವಂತ ತೋಟದ, ಶಿವಣ್ಣ ಶರಣ್ಣನವರ, ಉಮೇಶ ಕಟಗಿ, ಶಕುಂತಲಾ ಮನ್ನಂಗಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net