

ಭಾಲ್ಕಿ: ತಾಲೂಕು ಸೇರಿ ಪಟ್ಟಣದ ಪ್ರತಿಷ್ಠಿತ ಕುಟುಂಬಗಳ ಮನೆಗಳಲ್ಲಿ ಚೌತಿಯ ನಾಲ್ಕನೇ ದಿನವಾದ ಬುಧವಾರ ಅಷ್ಟಲಕ್ಷ್ಮೀಯ ಪೂಜೆ ಸಂಭ್ರಮದಿಂದ ಮಾಡಲಾಯಿತು. ಭವ್ಯವಾದ ಮಂಟಪದಲ್ಲಿ ಅಷ್ಟಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ಅಲಂಕರಿಸಿ ಪೂಜೆ ಮಾಡುವುದರಿಂದ, ಮನೆತನಕ್ಕೆ ದಾರಿದ್ರ್ಯ ಉಂಟಾಗುವುದಿಲ್ಲ ಎನ್ನುವ ಪ್ರತೀತಿ ಇದೆ. ಆದ್ದರಿಂದ ತಲೆ, ತಲಾಂತರದಿಂದ ಹಲವು ಮನೆತನದವರು ಸುಂದರವಾದ ಮಂಟಪದಲ್ಲಿ ಅಷ್ಟಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ಪೂಜೆ ನಡೆಸುವ ವಾಡಿಕೆ ಇದೆ.
ಪಟ್ಟಣದ ದೇಶಮುಖ ಮನೆತನದವರು, ಖಂಡ್ರೆ, ಕಲ್ಯಾಣೆ, ಮಾಶೆಟ್ಟೆ, ಕುಡತೆ, ಬಳತೆ, ದಾಬಶೆಟ್ಟೆ, ಜೋಳದಾಪಕೆ ಸೇರಿ ವಿವಿಧ ಪ್ರತಿಷ್ಠಿತ ಮನೆತನದವರು ಬುಧವಾರ ಮಂಟಪದಲ್ಲಿ ಅಲಂಕರಿಸಿದ ಲಕ್ಷ್ಮೀಯನ್ನು ಸಾರ್ವಜನಿಕರು ನೋಡಿ, ದರ್ಶನ ಪಡೆದರು. ತಾಲೂಕಿನ ನಾವದಗಿ, ಮಾವಿನ ಹಳ್ಳಿ, ಹಲಬರ್ಗಾ, ಖಟಕಚಿಂಚೋಳಿ, ಸಾಯಿಗಾಂವ, ಮೆಹಕರ, ನಿಟ್ಟೂರ(ಬಿ), ಧನ್ನೂರ(ಎಸ್) ಗ್ರಾಮ ಸೇರಿ ವಿವಿಧ ಗ್ರಾಮಗಳ ಪ್ರತಿಷ್ಠಿತ ಮನೆತನದವರು ಸುಂದರ ಮಂಟಪವನ್ನು ನಿರ್ಮಿಸಿ, ಅಷ್ಟಲಕ್ಷ್ಮೀಯ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಪೂಜೆ ನಂತರ ಮನೆಗೆ ಆಗಮಿಸಿದ ಎಲ್ಲ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಮಾಡಿದರು.