ಅಶ್ವತ್ಥ ನಾರಾಯಣ ಹೇಳಿಕೆ ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದಲ್ಲ : ಎಸ್.ಎ. ರಾಮದಾಸ್

mla s.a. ramdas
Published on

ಮೈಸೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ನೀಡಿರುವ ಹೇಳಿಕೆ ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಶಾಸಕ ಎಸ್.ಎ. ರಾಮದಾಸ್ ಹೇಳಿದರು.

ಯಾವುದೇ ಪಕ್ಷದವರಾಗಿದ್ದರೂ ವೈಯಕ್ತಿಕ ವಿಚಾರ ಮುಂದಿಟ್ಟುಕೊಂಡು ಟೀಕೆ ಮಾಡುವುದು ಸರಿಯಲ್ಲ. ಅದೇ ರೀತಿ ಒಬ್ಬರನ್ನು ಮತ್ತೊಬ್ಬರಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಈ ರೀತಿ ದಂಡಿಸುವುದು ಸರಿಯಲ್ಲ, ದಂಡಿಸಬೇಕಾಗಿರುವುದು ಜನಸಾಮಾನ್ಯರು. ಯಾರನ್ನು ಉಳಿಸಬೇಕು ಬೆಳೆಸಬೇಕು ಎಂಬುದನ್ನು ಜನರು ತೀರ್ಮಾನ ಮಾಡುತ್ತಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯಕ್ಕೆ ಕಪ್ಪುಚುಕ್ಕೆ ಎಂಬ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಸಂದರ್ಭದಲ್ಲಿ ಇಂತಹ ಟೀಕೆಗಳು ಸಹಜ. ಆದರೆ, ಜನಸಾಮಾನ್ಯರಿಗೆ ಸತ್ಯಾಂಶ ಏನು ಎಂಬುದು ತಿಳಿದಿದೆ. ಕೇಸರಿಬಾತ್ ಕಹಿಯಾಗಿದೆ ಎಂದು ಹೇಳುತ್ತಾರೆ, ಆದರೆ ತಿಂದವರು ಸಿಹಿಯಾಗಿದೆ ಎಂದು ಹೇಳುತ್ತಾರೆ. ವೀರಪ್ಪ ಮೊಯ್ಲಿ ಜ್ಞಾನ ಭಂಡಾರದ ವ್ಯಕ್ತಿ, ಅಂತಹ ಮುತ್ಸದ್ಧಿಯ ಹೇಳಿಕೆಗೆ ಹೆಚ್ಚು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದರು.

ಕೆ.ಅರ್. ಕ್ಷೇತ್ರದ ಜನರು ನನಗೆ ಒಂದು ಪುನರ್ಜನ್ಮ ನೀಡಿದ್ದಾರೆ, ಹಾಗಾಗಿ ಅವರ ಋಣವನ್ನು ತೀರಿಸುವ ಸಲುವಾಗಿ ಕ್ಷೇತ್ರದಲ್ಲಿ ಹತ್ತು ಹಲವು ಪ್ರಥಮಗಳನ್ನು ಮಾಡಿದ್ದೇವೆ. ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ವಿಚಾರದಲ್ಲಿ ನಂ.1ನೇ ಸ್ಥಾನದಲ್ಲಿ ಇದ್ದೇವೆ. ಕ್ಷೇತ್ರದಲ್ಲಿ ಮತದಾರರ ಪಟ್ಟಿಯ 11,102 ಪೇಜ್‌ಗಳು ಇದ್ದು, ಪ್ರತಿಯೊಂದು ಪೇಜ್‌ಗೂ 5 ಜನರ ಸಮಿತಿ ಮಾಡಿದ್ದೇವೆ. ಇದು ದೇಶದಲ್ಲಿಯೇ ಮೊದಲು. 5 ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಆಧಾರದ ಮೇಲೆ ಚುನಾವಣೆ ಎದುರಿಸುತ್ತೇನೆ. ನನಗೆ ತಿ.ನರಸೀಪುರ ಕ್ಷೇತ್ರದ ಉಸ್ತುವಾರಿ ನೀಡಲಾಗಿದ್ದು, ಪಕ್ಷ ಯಾವುದೇ ಅಭ್ಯರ್ಥಿಯನ್ನಾದರೂ ಕಣಕ್ಕಿಳಿಸಿದರೂ ಪಕ್ಷದ ಶಿಸ್ತಿನ ಶಿಪಾಯಿಯಾಗಿ ಅಭ್ಯರ್ಥಿಯನ್ನು ಗೆಲ್ಲಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net