

ಕೊಪ್ಪಳ:ಕನಕಗಿರಿ ಪಟ್ಟಣದಲ್ಲಿ ಅಪ್ರಾಪ್ತ ಬಾಲಕಿಯರ ಬಗ್ಗೆ ಅಶ್ಲೀಲವಾಗಿ ಗೋಡೆ ಬರಹ ಬರೆಯುತ್ತಿದ್ದವನನ್ನು ಕೊನೆಗೂ ಪೊಲೀಸರು ಬಂಧಿಸಿದ್ದು, ಎರಡು ವರ್ಷ ಸವಲಾಗಿದ್ದ ಪ್ರಕರಣ ಅಂತ್ಯವಾದಂತಾಗಿದೆ.
ಕನಕಗಿರಿ ಪಟ್ಟಣದ ಮೆಹೆಬೂಬ್ ಸಿಕಲಗಾರ (27) ಬಂಧಿತ. ಇಬ್ಬರು ಬಾಲಕಿಯರ ಪೈಕಿ ಒಬ್ಬಳನ್ನು ಈತ 2 ವರ್ಷದಿಂದ ಪ್ರೀತಿಸುತ್ತಿದ್ದ. ಬಾಲಕಿಯ ಸಂಬಂಧಿಯೂ ಹೌದು. ಬಾಲಕಿ ತನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದಾಗ ಅಶ್ಲೀಲ ಬರಹ ಬರೆಯುತ್ತಿದ್ದ. ಈ ವಿಷಯವಾಗಿ ಬಾಲಕಿ ಇತನೊಂದಿಗೆ ಮತ್ತೆ ಮಾತನಾಡುತ್ತಿದ್ದಳು. ಯಾರೋ ತನ್ನ ಬಗ್ಗೆ ಅಶ್ಲೀಲವಾಗಿ ಬರೆಯುತ್ತಿದ್ದಾರೆಂದು ಚರ್ಚಿಸುತ್ತಿದ್ದಳು. ಇನ್ನೋರ್ವ ಬಾಲಕಿಗೂ ಇವರ ಪ್ರೀತಿ ಬಗ್ಗೆ ಗೊತ್ತಿತ್ತು. ಇತ್ತೀಚೆಗೆ ತನಗೆ ಸರ್ಕಾರಿ ನೌಕರಿ ಇರುವವರೊಂದಿಗೆ ಮದುವೆ ಮಾಡುತ್ತಾರೆ. ನೀನು ಬಡವನಿದ್ದೀಯ ಎಂದು ಬಾಲಕಿ ಆರೋಪಿಯನ್ನು ದೂರ ಮಾಡಿದ್ದಳು. ಬಾಲಕಿಯನ್ನು ಯಾರೂ ಮದುವೆ ಆಗಬಾರದೆಂಬ ಉದ್ದೇಶದಿಂದ ಮತ್ತೆ ಗೋಡೆ ಬರಹ ಶುರುವಿಟ್ಟುಕೊಂಡಿದ್ದ. ಇನ್‌ಸ್ಟಾಗ್ರಾಂನಲ್ಲಿ ನಕಲಿ ಖಾತೆ ತೆರೆದು ಬಾಲಕಿಯರ ಬಗ್ಗೆ ಅಸಹ್ಯವಾಗಿ ಸಂದೇಶ ಕಳಿಸಿದ್ದ ಎಂದು ಎಸ್ಪಿ ಯಶೋದಾ ವಂಟಗೋಡಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಾಲಕಿ ಕುಟುಂಬದೊಂದಿಗೆ ಸಂಪರ್ಕ ಹೊಂದಿದ್ದ ಆರೋಪಿ, ಅವರ ಮನೆಗೂ ಹೋಗುತ್ತಿದ್ದ. ಪಟ್ಟಣದಲ್ಲಿ ಈತನ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಆರಂಭದಲ್ಲಿ ಅನುಮಾನಗಳಿದ್ದರೂ, ಖಚಿತವಾಗುವವರೆಗೆ ವಶಕ್ಕೆ ಪಡೆದಿರಲಿಲ್ಲ. ಘಟನೆ ಸಂಬಂಧ ಎರಡು ಪ್ರಕರಣಗಳು ದಾಖಲಾಗಿದ್ದು, ತನಿಖೆಗಾಗಿ ಎರಡು ತಂಡಗಳನ್ನು ರಚಿಸಲಾಗಿತ್ತು. ಅಧಿಕಾರಿಗಳು ತಂತ್ರಜ್ಞಾನ ಬಳಸಿ ಆರೋಪಿ ಪತ್ತೆ ಮಾಡಿದ್ದು, ಆರೋಪಿ ಎಲ್ಲ ತಪ್ಪುಗಳನ್ನು ಒಪ್ಪಿಕೊಂಡಿದ್ದಾನೆ. ಹುಡುಗಿಯರು ಅಪ್ರಾಪ್ತರಾಗಿದ್ದು, ಪೋಕ್ಸೊ ಪ್ರಕರಣ ದಾಖಲಿಸುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು.
ಗಂಭೀರ ಸ್ವರೂಪ ಪಡೆದಿದ್ದ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಅಧಿಕಾರಿಗಳಿಗೆ ಬಹುಮಾನ ಘೋಷಿಸಲಾಗುವುದೆಂದು ಮಾಹಿತಿ ನೀಡಿದರು. ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಸೆನ್ ಠಾಣೆ ಪಿಐ ಅಮರೇಶ ಹುಬ್ಬಳ್ಳಿ, ಕನಕಗಿರಿ ಪಿಐ ಜಗದೀಶ ಕೆ.ಜಿ., ಸಿಬ್ಬಂದಿ ಗವಿಸಿದ್ದಯ್ಯ, ಗವಿಕುಮಾರ, ಬಸವರಾಜ, ದಸ್ತಗಿರಿ, ಬಸವರಾಜ ಸಜ್ಜನ್ ಇತರರಿದ್ದರು.