ಅಶೋಕ್ ಹಾರನಹಳ್ಳಿ ಅವರಿಗೆ "ಅಶೋಕಾಭಿನಂದನಾ'

3web
Published on

ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಾರ್ಯ ಈಗ ಚುರುಕುಗೊಳಿಸಲಾಗಿದ್ದು, ದೇಶ, ವಿದೇಶದಲ್ಲಿರುವ ವಿಪ್ರ ಸಮುದಾಯದವರನ್ನು ಸಂಪರ್ಕಿಸಿ ಆರ್ಥಿಕ ನೆರವು ಒಗ್ಗೂಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ದೇಣಿಗೆ ಪಡೆಯಲು ಅನುಕೂಲವಾಗುವಂತೆ ಅನುಮತಿ ನೀಡುವಂತೆ ಆರ್‌ಬಿಐ ಅನ್ನು ಕೋರಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಹೇಳಿದರು.
ಮಂದಗೆರೆ ಮಂಜುನಾಥ್ ಅಭಿಮಾನಿ ಬಳಗ, ಮೈಸೂರು ನಗರ, ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಹೊಯ್ಸಳ ಕರ್ನಾಟಕ ಸಂಘದಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಅಶೋಕಾಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಈಗಾಗಲೇ ವೈದ್ಯಕೀಯ ಮತ್ತು ಕಾನೂನು ನೆರವಿನ ಸೌಲಭ್ಯ ಆರಂಭವಾಗಿದೆ. ಸಮುದಾಯದಲ್ಲಿ ಆರ್ಥಿಕ ತೊಂದರೆಯಲ್ಲಿರುವವರು ಇದ್ದು, ಅವರಿಗೆ ನೆರವು ನೀಡಲು ಮಹಾಸಭಾ ಪ್ರಯತ್ನ ನಡೆಸಿದ್ದು, ವಿದ್ಯಾರ್ಥಿಗಳಿಗೆ ನೆರವು ನೀಡುವ ಪ್ರಕ್ರಿಯೆ ಒಂದೆರಡು ತಿಂಗಳಲ್ಲಿ ಜಾರಿಯಾಗಲಿದೆ. ಆಕ್ಟೋಬರ್‌ನಲ್ಲಿ ಸಮುದಾಯದ 500ಕ್ಕೂ ಹೆಚ್ಚು ಪ್ರತಿಭಾವಂತರನ್ನು ಪುರಸ್ಕರಿಸಲಾಗುವುದು ಎಂದು ತಿಳಿಸಿದರು.
ಆರ್ಥಿಕ ಸಂಪನ್ಮೂಲ ಕ್ರೂಢೀಕರಣಕ್ಕೆ ಒತ್ತು ನೀಡಲಾಗಿದ್ದು, ವಿಪ್ರ ಆಂಗ್ಲ ಪತ್ರಿಕೆ ಮೂಲಕ ಮಹಾಸಭಾದ ಚಟುವಟಿಕೆ, ಕೋರಿಕೆಯನ್ನು ಪ್ರಚಾರ ಮಾಡಲಾಗವುದು. ಇದರ ಜೊತೆಗೆ ಕೈಗಾರಿಕಾ ಕ್ಷೇತ್ರದಲ್ಲಿರುವ ವಿಪ್ರರನ್ನು ಸಂಪರ್ಕಿಸಲಾಗಿದ್ದು ರಿಯಾಯಿತಿ ದರದಲ್ಲಿ ಉತ್ಪನ್ನಗಳ ಮಾರಾಟ ಮಾಡಲು ಮನವೊಲಿಸಲಾಗಿದೆ. ವ್ಯಾಪಾರ ವ್ಯವಹಾರದಲ್ಲಿಯೂ ಸಹಾಯ ಒದಗಿಸಲು ಈ ಕ್ಷೇತ್ರದಲ್ಲಿನ ಉದ್ದಿಮೆದಾರರನ್ನು ಕೋರಲಾಗಿದೆ ಹೇಳಿದರು.
ಚುನಾವಣೆಯಲ್ಲಿ ಮತ ಹಾಕುವುದು ವೈಯಕ್ತಿಕ ವಿಚಾರ, ಮತಕೊಡದವರು ವಿರೋಧಿಗಳಲ್ಲ. ಚುನಾವಣೆ ಬಳಿಕ ನಾವೆಲ್ಲರೂ ಒಂದೇ. ಸಮುದಾಯದ ಒಳಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಉತ್ತಮ ಕಾರ‌್ಯಕ್ರಮಗಳನ್ನು ರೂಪಿಸಬೇಕಿದೆ, ಇದಕ್ಕಾಗಿ ಕಾರ‌್ಯಯೋಜನೆಗಳನ್ನು ಜಾರಿಗೆ ತಂದು ಶಕ್ತಿಯುತವಾಗಿ ಮುನ್ನೆಡೆಯಬೇಕಿದೆ. ಇಂತಹ ಒಗ್ಗೂಡುವಿಕೆಯ ಬೆಳವಣಿಗೆ ಸಂತಸ ತಂದಿದೆ ಎಂದರು.
ವಿದುರಾಶ್ವತಕ್ಕೆ ಪಾದಯಾತ್ರೆ:
ರಾಷ್ಟ್ರೀಯತೆಯ ಪರಿಕಲ್ಪನೆಯೊಂದಿಗೆ ದೇಶ ಭಕ್ತಿ ಬಡಿದೆಬ್ಬಿಸಲು ಬ್ರಾಹ್ಮಣ ಮಹಾಸಭಾದಿಂದ ಅಕ್ಟೋಬರ್ 2ರಂದು ಗೌರಿಬಿದನೂರಿನಿಂದ ವಿದುರಾಶ್ವತದವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅಶೋಕ್ ಹಾರನಹಳ್ಳಿ ತಿಳಿಸಿದರು.
ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬ್ರಾಹ್ಮಣ ಸಮುದಾಯದ ಕೊಡುಗೆ ಬಹಳ ದೊಡ್ಡದಿದೆ. ಗೋಪಾಲಕೃಷ್ಣ ಗೋಖಲೆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಗಾಂಧೀಜಿಗೆ ಪ್ರೇರೇಪಿಸಿದ್ದರು. ಬಾಲಗಂಗಾಧರ ತಿಲಕರು ಸೇರಿ ಇನ್ನಿತರ ಮಹನೀಯರು ಇದಕ್ಕಾಗಿ ದುಡಿದಿದ್ದಾರೆ. ಈ ಎಲ್ಲರನ್ನೂ ನೆನಪಿಸಿಕೊಂಡು ಏಳು ಕಿಮೀ ಉದ್ದದ ಯಾತ್ರೆ ಆಯೋಜಿಸಲಾಗಿದೆ. ಮೈಸೂರು ಸೇರಿದಂತೆ ನಾಡಿನ ಎಲ್ಲ ಮೂಲೆಗಳಿಂದ ಬಾಂಧವರು ಆಗಮಿಸಬೇಕು ಎಂದು ಕೋರಿದರು.
ಸಂವಿಧಾನ ತಿದ್ದುಪಡಿ ಮೂಲಕ ಜಾರಿಗೊಂಡಿರುವ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇ. 10ರಷ್ಟು ಮೀಸಲು ಶಿಕ್ಷಣಕ್ಕೆ ಅನ್ವಯಿಸಿಲ್ಲ. ಇದರ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ. ಮೂರು ವರ್ಷದ ಹಿಂದೆ ತಿದ್ದುಪಡಿಯಾದರೂ ರಾಜ್ಯದಲ್ಲಿ ಈ ಸೌಲಭ್ಯ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಶಿಕ್ಷಣ ಸೇರಿದಂತೆ ಎಲ್ಲ್ಲ ಕ್ಷೇತ್ರದಲ್ಲಿಯೂ ಬ್ರಾಹ್ಮಣ ಸಮುದಾಯದ ಕೊಡುಗೆ ದೊಡ್ಡದಿದೆ. ವೈಯಕ್ತಿಕವಾಗಿ ನನ್ನ ಬೆಳವಣಿಗೆಯಲ್ಲೂ ಸಮುದಾಯದ ಮಹನೀಯರ ಪಾತ್ರವಿದೆ ಎಂದು ಬಿಂಬಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net