ಅಶೋಕಪುರಂನಲ್ಲಿ ಹೊಸದಾಗಿ ಎರಡು ಪ್ಲಾಟ್‌ಫಾರ್ಮ್ ನಿರ್ಮಾಣ: ಸಂಸದ ಪ್ರತಾಪ್ ಸಿಂಹ

Indian-Railway
Published on

ಮೈಸೂರು: ಮೈಸೂರು ರೈಲ್ವೆ ನಿಲ್ದಾಣದಲ್ಲಿ ರೈಲುಗಳ ನಿಲುಗಡೆಯಲ್ಲಿ ಪ್ರಸ್ತುತ ಉಂಟಾಗುತ್ತಿರುವ ಒತ್ತಡ ಕಡಿಮೆ ಮಾಡುವ ಸಲುವಾಗಿ ಅಶೋಕಪುರಂನಲ್ಲಿ ಹೊಸದಾಗಿ ತಲಾ ಎರಡು ಪ್ಲಾಟ್‌ಫಾರ್ಮ್ ಹಾಗೂ ಹಳಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಅಶೋಕಪುರಂ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಶನಿವಾರ ಪರಿಶೀಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೆಚ್ಚುವರಿ ಪ್ಲಾಟ್‌ಫಾರ್ಮ್ ಹಾಗೂ ಹಳಿಗಳ ನಿರ್ಮಾಣಕ್ಕೆ ಒಟ್ಟು 28.78 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ನಾಲ್ಕೈದು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಹೊಂದಲಾಗಿದೆ ಎಂದರು.

ಹೆಚ್ಚುವರಿ ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಈ ಹಿಂದೆ ಇದ್ದ ಗೂಡ್ಸ್‌ಶೆಡ್ ಜಾಗವನ್ನು ಬಳಸಿಕೊಳ್ಳಲಾಗಿದೆ. ಪ್ರಸ್ತುತ ಅಶೋಕಪುರಂನಲ್ಲಿ ಒಟ್ಟು 3 ಪ್ಲಾಟ್‌ಫಾರ್ಮ್ ಇದ್ದು, ಹೆಚ್ಚುವರಿಯಾಗಿ ಮತ್ತೆರಡು ಪ್ಲಾಟ್‌ಫಾರ್ಮ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಮೈಸೂರು ರೈಲ್ವೆ ನಿಲ್ದಾಣದ ಮೇಲಿನ ಒತ್ತಡ ಕಡಿಮೆಯಾಗುವುದು ಮಾತ್ರವಲ್ಲದೆ ಅಶೋಕಪುರಂ ಭಾಗದ ಪ್ರಯಾಣಿಕರಿಗೂ ಅನುಕೂಲವಾಗಲಿದೆ. ಹೆಚ್ಚುವರಿ ಹಳಿಗಳ ನಿರ್ಮಾಣದಿಂದ ಅಲ್ಲಿ ರೈಲುಗಳನ್ನು ತೊಳೆಯುವುದಕ್ಕೆ ಹಾಗೂ ನಿರ್ವಹಣೆ ಮಾಡಲು ಸಹಕಾರಿಯಾಗಲಿದೆ. ನಿಲ್ದಾಣದ ಹಿಂಬದಿಯಿಂದಲೂ (ಚಿಕ್ಕಹರದನಹಳ್ಳಿ ಕಡೆಯಿಂದ) ಪ್ರಯಾಣಿಕರ ಪ್ರವೇಶಕ್ಕೆ ಅವಕಾಶ ಕೊಡಲಾಗುವುದು ಎಂದರು.

ಕಾಮಗಾರಿಯನ್ನು ಎರಡು ಹಂತದಲ್ಲಿ ಕೈಗೊಳ್ಳಲಾಗುತ್ತಿದ್ದು, ಮೊದಲ ಹಂತದಲ್ಲಿ 15.25 ಕೋಟಿ ರೂ., 2ನೇ ಹಂತದಲ್ಲಿ 13.50 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು. ಅಶೋಕಪುರಂ ನಿಲ್ದಾಣದಿಂದ ಚಿಕ್ಕಹರದನಹಳ್ಳಿ ಕಡೆಗೆ ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗುವುದು. ಈ ಮೇಲ್ಸೇತುವೆ ನಿರ್ಮಾಣದಿಂದ ಚಿಕ್ಕಹರದನಹಳ್ಳಿ, ಶ್ರೀರಾಂಪುರ 2ನೇ ಹಂತ, ಜೆ.ಪಿ.ನಗರ, ಜಯನಗರದ ಕಡೆಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು.

ಅಶೋಕಪುರಂ ನಿಲ್ದಾಣದ ಬಳಿ ಇದ್ದ 5 ಸಾವಿರ ಚ.ಮೀ. ಸರ್ಕಾರಿ ಜಾವನ್ನು ಈ ಹಿಂದೆ ನಗರ ಪಾಲಿಕೆಗೆ ನೀಡಲಾಗಿತ್ತು. ಆದರೆ ಆ ಜಾಗವನ್ನು ಪಾಲಿಕೆ ಯಾವುದೇ ಕಾರ್ಯಕ್ಕೆ ಇದುವರೆಗೆ ಬಳಸಲಿಲ್ಲ. ಹಾಗಾಗಿ ಅಭಿವೃದ್ಧಿ ಉದ್ದೇಶಕೋಸ್ಕರ ಜಾಗವನ್ನು ವಾಪಾಸ್ ಪಡೆಯಲಾಗಿದೆ. ಒಟ್ಟು 318 ಚ.ಮೀ. ಜಾಗವನ್ನು ಖಾಸಗಿಯವರಿಂದ ಖರೀದಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net