

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ನಗರದ ಅಶೋಕಪುರಂ ರೈಲ್ವೆ ಯಾರ್ಡ್ ಇದೀಗ ಹೊಸ ನಿಲ್ದಾಣವಾಗಿ ರೂಪಾಂತರಗೊಂಡಿದ್ದು, ಪ್ರಯಾಣಿಕರಿಗೆ ಸೇವೆ ನೀಡಲು ಸನ್ನದ್ಧವಾಗಿದೆ.
ಮೇಲ್ದರ್ಜೆಗೇರುವ ಮೂಲಕ ಮೈಸೂರಿನ 2ನೇ ದೊಡ್ಡ ರೈಲ್ವೆ ನಿಲ್ದಾಣ ಎಂಬ ಹಿರಿಮೆಗೆ ಭಾಜನವಾಗಲಿದೆ. ನಗರ ವ್ಯಾಪ್ತಿಯಲ್ಲಿ ಮೈಸೂರಿನ ಮುಖ್ಯ ರೈಲ್ವೆ ನಿಲ್ದಾಣ ದೊಡ್ಡ ಜಂಕ್ಷನ್ ಆಗಿದ್ದು, ಚಾಮರಾಜಪುರಂ ಚಿಕ್ಕ ನಿಲ್ದಾಣವಾಗಿದೆ. ಹೊಸ ರೂಪ, ವಿನ್ಯಾಸ, ವಿಸ್ತರಣೆಯೊಂದಿಗೆ ನವೀಕೃತಗೊಂಡಿರುವ ಅಶೋಕಪುರಂ ನಿಲ್ದಾಣ ಪ್ರಯಾಣಿಕರ ಬಳಕೆಗೆ ಶೀಘ್ರದಲ್ಲೇ ಮುಕ್ತವಾಗಲಿದೆ.
ಮೇಲ್ಸೇತುವೆ ಕೆಲಸ ಬಾಕಿ:
ಮೈಸೂರು ಮುಖ್ಯ ರೈಲ್ವೆ ನಿಲ್ದಾಣದ ಮೇಲಿರುವ ಒತ್ತಡವನ್ನು ಕಡಿಮೆ ಮಾಡಲು ಅಶೋಕಪುರಂ ರೈಲ್ವೆ ಯಾರ್ಡ್ ಅನ್ನು ಹೊಸ ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಬಹುತೇಕ ಸಿವಿಲ್, ಇಂಜಿನಿಯರಿಂಗ್ ಕೆಲಸ ಪೂರ್ಣಗೊಂಡಿದೆ. ನಿಲ್ದಾಣದಲ್ಲಿ ಒಂದು ಪ್ಲಾಟ್‌ಫಾರ್ಮ್‌ನಿಂದ ಇನ್ನೊಂದು ಪ್ಲಾಟ್‌ಫಾರ್ಮ್‌ಗೆ ಪ್ರಯಾಣಿಕರು ತೆರಳಲು ಅನುಕೂಲ ಕಲ್ಪಿಸಿಕೊಡುವ ಮೇಲ್ಸೇತುವೆ ಕೆಲಸ ಮಾತ್ರ ಬಾಕಿಯಿದ್ದು, ತ್ವರಿತಗತಿಯಲ್ಲಿ ಸಾಗುತ್ತಿದೆ. ಉಳಿದಂತೆ ಸಣ್ಣಪುಟ್ಟ ಕೆಲಸಗಳೆಲ್ಲ ಆ. 15ರೊಳಗೆ ಪೂರ್ಣಗೊಳ್ಳಲಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಅನುಮತಿ ಬಳಿಕ ಸಂಚಾರ ಶುರು:
ಈ ನಿಲ್ದಾಣದಿಂದ ರೈಲು ಸೇವೆ ಪ್ರಾರಂಭಿಸಲು ಕೇಂದ್ರೀಯ ರೈಲ್ವೆ ಮಂಡಳಿಯಿಂದ ಅನುಮೋದನೆ ಬೇಕಾಗಿದ್ದು, ಸೆಪ್ಟೆಂಬರ್ 15ರೊಳಗೆ ದೊರೆಯುವ ನಿರೀಕ್ಷೆ ಇದೆ. ನಂತರವೇ ಇಲ್ಲಿಂದ ರೈಲುಗಳ ಸಂಚಾರ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ.
ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ ಸುಮಾರು 30 ಕೋಟಿ ರೂ. ಅನುದಾನದಲ್ಲಿ ಕೈಗೊಂಡಿರುವ ಅಶೋಕಪುರಂ ರೈಲ್ವೆ ನಿಲ್ದಾಣದ ಉನ್ನತೀಕರಣ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ಪ್ಲಾಟ್‌ಫಾರ್ಮ್ ಮರುವಿನ್ಯಾಸ ಕೆಲಸ ಮುಗಿದಿದೆ. ಈಗಾಗಲೇ ಹೊಸ ಲೈನ್, ಪ್ಲಾಟ್‌ಫಾರ್ಮ್ ಕಾಮಗಾರಿ ಸಹ ಮುಕ್ತಾಯಗೊಂಡಿದೆ.
ಒಟ್ಟು 5 ಪ್ಲಾಟ್‌ಫಾರ್ಮ್:
ಮೈಸೂರು ರಾಜರ ಕಾಲದಲ್ಲೇ ಅಶೋಕಪುರಂ ರೈಲ್ವೆ ಯಾರ್ಡ್ ನಿರ್ಮಾಣಗೊಂಡಿತ್ತು. ಇದು ನಗರದ ಹಳೇ ನಿಲ್ದಾಣ ಎನಿಸಿದೆ. ಈವರೆಗೆ 3 ಪ್ಲಾಟ್‌ಫಾರ್ಮ್ ಇದ್ದವು. ಹೆಚ್ಚುವರಿಯಾಗಿ ಈಗ ಎರಡು ರೈಲ್ವೆ ಹಳಿ ಮತ್ತು ಪ್ಲಾಟ್‌ಫಾರ್ಮ್ ನಿರ್ಮಾಣ ಮಾಡಲಾಗಿದೆ. ನಿಲ್ದಾಣಕ್ಕೆ ಹೆಚ್ಚುವರಿ 2 ಹಳಿ ಇರಲಿವೆ. ಹೀಗಾಗಿ ಹಲವು ರೈಲುಗಳ ಸಂಚಾರವನ್ನು ಅಶೋಕಪುರಂ ನಿಲ್ದಾಣದವರೆಗೂ ವಿಸ್ತರಣೆ ಮಾಡಲು ಅವಕಾಶ ದೊರೆತಿದೆ.
ನಿಲುಗಡೆಗೆ ಸಹಕಾರಿ:
ಹೊಸದಾಗಿ ನಿರ್ಮಾಣವಾದ ಹಳಿಗಳನ್ನು ಚಾಮರಾಜನಗರ ಕಡೆಯ ಹಳಿಗೆ ಜೋಡಿಸಲಾಗಿದೆ. ಇದರಿಂದಾಗಿ ಆ ಭಾಗದ ರೈಲುಗಾಡಿಗಳ ಸಂಚಾರಕ್ಕೂ ನೆರವಾಗಲಿದೆ. ಇಲ್ಲಿರುವ ರೈಲ್ವೆ ವರ್ಕ್‌ಶಾಪ್‌ಗೆ ಎರಡು ಹೆಚ್ಚುವರಿ ಹಳಿ ನಿರ್ಮಿಸಲಾಗಿದೆ. ರೈಲುಗಾಡಿಗಳನ್ನು ಹೆಚ್ಚು ಸಮಯದವರೆಗೆ ನಿಲ್ದಾಣದಲ್ಲಿ ನಿಲುಗಡೆ ಮಾಡಲು ಅನುಕೂಲವಾಗುವ ಎರಡು ಸ್ಟಾಬ್ಲಿಂಗ್ ಲೈನ್ ಸಹ ರೂಪಿಸಲಾಗಿದೆ.
24 ಕೋಚ್‌ಗಳ ಗಾಡಿಗೆ ಅವಕಾಶ:
ಮರು ವಿನ್ಯಾಸಗೊಂಡಿರುವ ಈ ನಿಲ್ದಾಣದಲ್ಲಿ 24 ಕೋಚ್ ಇರುವ ರೈಲುಗಾಡಿ ನಿಲುಗಡೆ ಮಾಡಬಹುದಾಗಿದೆ. ಅದಕ್ಕಾಗಿ ಉದ್ದನೆಯ ಪ್ಲಾಟ್‌ಫಾರ್ಮ್ ನಿರ್ಮಿಸಲಾಗುತ್ತಿದೆ. ಈ ಮೊದಲು ಇಲ್ಲಿ ಹೆಚ್ಚಿನ ಕೋಚ್‌ಗಳಿರುವ ರೈಲುಗಾಡಿಯನ್ನು ನಿಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ.
ಶೆಲ್ಟರ್ ನಿರ್ಮಾಣ:
ರೈಲುಗಳ ನಿಲುಗಡೆ, ನೀರಿನ ಸೌಲಭ್ಯಕ್ಕೆ ಬೇಕಾದ ಅಗತ್ಯ ಸೌಲಭ್ಯವನ್ನು ಮಾಡಿಕೊಳ್ಳಲಾಗಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಕುಳಿತು ಬಿಸಿಲು, ಮಳೆಯಿಂದ ಆಶ್ರಯ ಪಡೆದುಕೊಳ್ಳಲು ಶೆಲ್ಟರ್ ಸಹ ನಿರ್ಮಾಣ ಮಾಡಲಾಗಿದೆ. ಸಿಗ್ನಲಿಂಗ್, ಹೊಸ ಲೈನ್‌ಗಳ ವಿದ್ಯುದೀಕರಣ ಕಾಮಗಾರಿಗಳು ಅಂತಿಮ ಹಂತದಲ್ಲಿವೆ.
2 ಕಡೆಗೂ ಪ್ರವೇಶ ದ್ವಾರ:
ಮೈಸೂರಿನ ಮುಖ್ಯ ರೈಲ್ವೆ ನಿಲ್ದಾಣದ ಮಾದರಿಯಲ್ಲಿ ಅಶೋಕಪುರಂ ನಿಲ್ದಾಣದಲ್ಲೂ ಎರಡು ಕಡೆ ಪ್ರವೇಶ ಅವಕಾಶ ಕಲ್ಪಿಸಿಕೊಡಲಾಗಿದೆ. ರೈಲ್ವೆ ನಿಲ್ದಾಣ ಮುಂಭಾಗ(ಮಾನಂದವಾಡಿ ರಸ್ತೆಯಿಂದ) ಮತ್ತು ಹಿಂಭಾಗದಲ್ಲೂ ಪ್ರಯಾಣಿಕರ ನಿರ್ಗಮನ ಮತ್ತು ಪ್ರವೇಶಕ್ಕೆ ಅವಕಾಶ ದೊರೆಯಲಿದೆ. ನಿಲ್ದಾಣದ ಹಿಂಭಾಗದಲ್ಲಿ ಹೊಸದಾಗಿ ಟಿಕೆಟ್ ಕೌಂಟರ್ ಕಟ್ಟಡ ನಿರ್ಮಿಸಲಾಗಿದೆ. ದ್ವಿಚಕ್ರ ವಾಹನಗಳ ಪಾಕಿರ್ಂಗ್ ಕೂಡ ಮಾಡಲಾಗಿದೆ. ಇದರಿಂದ ಈ ಭಾಗದ ಜನರಿಗೆ ಸಾಕಷ್ಟು ಉಪಯೋಗವಾಗಲಿದೆ.
ಕಾರ್ಮಿಕರಿಗೆ ಉಪಯೋಗ
ಚಾಮರಾಜನಗರದ ಕಡೆಗೆ ತೆರಳುವ ರೈಲುಗಳು ಸರಾಗವಾಗಿ ಸಾಗಲು ಈ ನಿಲ್ದಾಣದಿಂದ ಸಹಕಾರಿಯಾಗಲಿದೆ. ಚಾಮರಾಜನಗರದಿಂದ ಮೈಸೂರಿಗೆ ನಿತ್ಯ ರೈಲುಗಳ ಮೂಲಕ ಸಾವಿರಾರು ಕಾರ್ಮಿಕರು, ಉದ್ಯೋಗಿಗಳು ಬರುತ್ತಾರೆ. ಈ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.
ಸೇವೆ ವಿಸ್ತರಣೆ:
ಮೈಸೂರಿಗೆ ಬಂದು ಹೋಗುವ ರೈಲು ಗಾಡಿಗಳ ಸುಲಲಿತ ನಿರ್ವಹಣೆ ಹಾಗೂ ಕಾರ್ಯಾಚರಣೆ ದೃಷ್ಟಿಯಿಂದ ಈ ನಿಲ್ದಾಣ ಸಹಕಾರಿಯಾಗಲಿದೆ. ಮೈಸೂರಿಗೆ ಬರುವ ರೈಲುಗಳ ಸಂಚಾರವನ್ನು ಅಶೋಕಪುರಂ ನಿಲ್ದಾಣದವರೆಗೂ ವಿಸ್ತರಿಸಲು ನೆರವಾಗಲಿದೆ. ಬೆಳಗ್ಗೆ ಹೊತ್ತಿನಲ್ಲಿ ನಗರ ಪ್ರವೇಶಿಸುವ ರೈಲುಗಳನ್ನು ಅಶೋಕಪುರಂನಲ್ಲಿ ನಿಲ್ಲಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಪ್ಯಾಸೆಂಜರ್ ರೈಲುಗಳನ್ನು ಅಶೋಕಪುರಂ ರೈಲು ನಿಲ್ದಾಣದಿಂದಲೇ ಪ್ರಾರಂಭ ಮಾಡಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ವಿಜಯವಾಣಿಗೆ ತಿಳಿಸಿದರು.
ಅಶೋಕಪುರಂ ರೈಲ್ವೆ ನಿಲ್ದಾಣದ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸಗಳು ಮಾತ್ರ ಉಳಿದಿವೆ. ಅದು ಸಹ ನಾಲ್ಕೈದು ದಿನಗಳಲ್ಲೇ ಮುಗಿಯಲಿದೆ.
ಜೆ.ಲೋಹಿತೇಶ್ವರ
ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕ, ಪಿಆರ್‌ಒ, ಮೈಸೂರು ವಿಭಾಗ