

ಪ್ರವಾಸಿನಗರಿ ಮೈಸೂರಿನ 2ನೇ ಪ್ರಮುಖ ರೈಲು ನಿಲ್ದಾಣವಾಗಿರುವ ಅಶೋಕಪುರಂ ರೈಲು ನಿಲ್ದಾಣಕ್ಕೆ ಪ್ರಯಾಣಿಕರು ಬಂದು ಹೋಗಲು ಬಸ್ ಸೌಲಭ್ಯವೇ ಇಲ್ಲ. ಇದರಿಂದಾಗಿ ಆಟೋ, ಟ್ಯಾಕ್ಸಿ, ಕಾರ್ ಸೇರಿದಂತೆ ಖಾಸಗಿ, ಸ್ವಂತ ವಾಹನಗಳನ್ನೇ ಅವಲಂಬಿಸಬೇಕಾಗಿದೆ.
ಇಲ್ಲಿಯಿಂದ ರೈಲುಗಳ ಸೇವೆ ಏನೋ ಶುರುವಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಲು ಬಸ್ ಸೇವೆ ಇಲ್ಲವಾಗಿದೆ. ಇದು ಪ್ರಯಾಣಿಕರಿಗೆ ಅನನುಕೂಲ ಉಂಟು ಮಾಡಿದೆ. ಇಲ್ಲಿಂದ ಬಂದು ಹೋಗಲು ಖಾಸಗಿ ವಾಹನಗಳ ಬಾಡಿಗೆ ಹೊರೆಯಾಗಿ ಪರಿಣಮಿಸಿದೆ.
35.50 ಕೋಟಿ ರೂ. ವೆಚ್ಚದಲ್ಲಿ ಅಶೋಕಪುರಂ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಈ ಮೊದಲು ರೈಲ್ವೆಯ ಗುಜರಿ ಕೇಂದ್ರವಾಗಿತ್ತು. ಈಗ ಈ ನಿಲ್ದಾಣ ಮರುರೂಪ ಪಡೆದುಕೊಂಡಿದೆ. ನವೀಕೃತ ಅಶೋಕಪುರಂ ರೈಲು ನಿಲ್ದಾಣವನ್ನು 2024ರ ಮಾರ್ಚ್ 4ರಂದು ಉದ್ಘಾಟಿಸಲಾಯಿತು.
ಅದಾಗಿ 11 ತಿಂಗಳ ಬಳಿಕ ರೈಲು ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ಬೆಂಗಳೂರು- ಮೈಸೂರು ನಡುವೆ ಸಂಚರಿಸುವ ಮೆಮು ಸೇರಿದಂತೆ 8 ಹೆಚ್ಚುವರಿ ರೈಲುಗಳ ಸೇವೆ ವಿಸ್ತರಣೆಗೆ ಮತ್ತು ಹೊಸ ಟಿಕೆಟ್ ಬುಕ್ಕಿಂಗ್ ಕಚೇರಿಯನ್ನು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಫೆ.15ರಂದು ಉದ್ಘಾಟಿಸಿದ್ದರು. ಆದರೆ, ಬಸ್ ಸೌಲಭ್ಯವಿಲ್ಲದ ಕಾರಣಕ್ಕೆ ರೈಲು ಸೇವೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಅಭಿವೃದ್ಧಿಗೊಂಡಿರುವ ಅಶೋಕಪುರಂ ರೈಲು ನಿಲ್ದಾಣದಿಂದ ಇಷ್ಟು ದಿನ ಚಾಮರಾಜನಗರ ಮತ್ತು ಮೈಸೂರಿನ ನಡುವೆ ಸಂಚರಿಸುವ ರೈಲುಗಳು ಮಾತ್ರ ನಿಲುಗಡೆಯಾಗುತ್ತಿದ್ದವು.
ಇದೀಗ ಹೊಸದಾಗಿ 8 ರೈಲುಗಳು ಸಂಚಾರ ವಿಸ್ತರಣೆಯಿಂದ ಈ ನಿಲ್ದಾಣಕ್ಕೆ ಜೀವಕಳೆ ಬಂದಿದೆ. ಇದೀಗ ರೈಲ್ವೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು, ಇಲ್ಲಿಗೆ ತಂದು ಬಿಡಲು ಬಸ್ ಸೇವೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂಬುದು ರೈಲ್ವೆ ಪ್ರಯಾಣಿಕರ ಆಗ್ರಹ.
ಹೀಗಾಗಿ, ಇದು ರೈಲ್ವೆ ಪ್ರಯಾಣಿಕರಿಗೆ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ಇಲ್ಲಿಗೆ ಬರುವ ರೈಲಿನ ವೇಳಾಪಟ್ಟಿ ಪ್ರಕಾರವೇ ಬಸ್ ಸೇವೆ ಕಲ್ಪಿಸಬೇಕು. ಅವುಗಳು ರೈಲು ನಿಲ್ದಾಣದ ಎದುರಿನ ರಸ್ತೆಯಲ್ಲೇ ಸಂಚರಿಸುವಂತಾಗಬೇಕು ಎಂಬುದು ಪ್ರಯಾಣಿಕರ ಬೇಡಿಕೆಯಾಗಿದೆ.
ಬಸ್ ಸೇವೆ ಒದಗಿಸುವಂತೆ ರೈಲ್ವೆ ಅಧಿಕಾರಿಗಳು ಕೆಎಸ್‌ಆರ್‌ಟಿಸಿ ನಗರ ವಿಭಾಗಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ. ಆದಾಗ್ಯೂ, ಈ ಕುರಿತು ಕ್ರಮ ವಹಿಸಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮುಂದಾಗಿದ್ದಾರೆ. ರೈಲು ವೇಳಾಪಟ್ಟಿ ಅನುಗುಣವಾಗಿ ಬಸ್ ಸಂಚಾರದ ಕಾರ್ಯಾಚರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ನಂಜನಗೂಡು ಸೇರಿದಂತೆ ಚಾಮರಾಜನಗರ ಜಿಲ್ಲೆಯಿಂದ ಸಾವಿರಾರು ಕಾರ್ಮಿಕರು ನಿತ್ಯ ಮೈಸೂರಿಗೆ ರೈಲಿನ ಮೂಲಕವೇ ಆಗಮಿಸುತ್ತಾರೆ. ಕೆಲಸ ಮುಗಿಸಿಕೊಂಡ ಬಳಿಕ ಸಂಜೆ ಇಲ್ಲಿಯಿಂದಲೇ ತಮ್ಮ ಊರುಗಳಿಗೆ ತೆರಳುತ್ತಾರೆ. ಅದರಲ್ಲಿ ಬಹಳಷ್ಟು ಕಾರ್ಮಿಕರು ಅಶೋಕಪುರಂ ರೈಲು ನಿಲ್ದಾಣದಲ್ಲಿ ಇಳಿದು, ಅಲ್ಲಿಯಿಂದ ನಗರದ ಬೇರೆ ಬೇರೆ ಕಡೆಗೆ ಕಾಲ್ನಡಿಗೆಯಲ್ಲೇ ತೆರಳುತ್ತಾರೆ. ಇವರಲ್ಲಿ ಬಹುತೇಕರು ಕಟ್ಟಡ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಹೆಚ್ಚು.
ಬಸ್ ಸೇವೆ ಕಲ್ಪಿಸಿಕೊಟ್ಟರೆ ಇವರಿಗೂ ಅನುಕೂಲವಾಗುತ್ತದೆ. ಈ ಕೆಲಸವನ್ನು ಮೊದಲೇ ಮಾಡಬೇಕಿತ್ತು. ಈಗಲಾದರೂ ಮಾಡಬೇಕು ಎಂದು ಚಾಮರಾಜನಗರದ ಕಟ್ಟಡ ಕಾರ್ಮಿಕ ಮಹದೇವು ಆಗ್ರಹಿಸಿದ್ದಾರೆ.
ಮೈಸೂರಿನ ಕೇಂದ್ರೀಯ ರೈಲ್ವೆ ನಿಲ್ದಾಣದ ಮೇಲೆ ಅತಿಯಾದ ಒತ್ತಡ ಇದೆ. ರೈಲುಗಳ ಸಂಚಾರ ಮತ್ತು ಪ್ರಯಾಣಿಕರ ದಟ್ಟಣೆ ಹೆಚ್ಚು. ಇದನ್ನು ತಗ್ಗಿಸಲು ಅಶೋಕಪುರಂ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಿ ರೈಲು ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ಬಸ್ ಸೌಲಭ್ಯ ಕಲ್ಪಿಸಿಕೊಡದಿದ್ದರೆ ಇದು ಉಪಯೋಗ ಬರಲ್ಲ.
ಈ ನಿಲ್ದಾಣವನ್ನು ಬಿಟ್ಟು ಪ್ರಯಾಣಿಕರು ಮತ್ತೆ ಕೇಂದ್ರೀಯ ರೈಲ್ವೆ ನಿಲ್ದಾಣವನ್ನೇ ಆಶ್ರಯಿಸಬೇಕಾಗುತ್ತದೆ. ಆದ್ದರಿಂದ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಬಡಾವಣೆಗಳಿಂದ ರೈಲು ಹೊರಡುವ ಮತ್ತು ಬರುವಾಗ ಬಸ್‌ಗಳ ವ್ಯವಸ್ಥೆ ಕಲ್ಪಿಸಬೇಕು. ಅದಕ್ಕಾಗಿ ಹಾಲಿ ಇರುವ ಬಸ್‌ಗಳ ವಾರ್ಗಗಳನ್ನು ಪರಿಷ್ಕರಿಸಬೇಕಾಗಿದೆ.
ಅಶೋಕಪುರಂ ರೈಲು ನಿಲ್ದಾಣದಲ್ಲಿ ಆರು ಪ್ಲಾಟ್‌ಫಾರ್ಮ್, ಬುಕ್ಕಿಂಗ್ ಕಚೇರಿಯೊಂದಿಗೆ ಹೊಸ ನಿಲ್ದಾಣದ ಕಟ್ಟಡ, ಪ್ರವೇಶ-1, ಪ್ರವೇಶ-2ರ ಪ್ಲಾಟ್‌ಫಾರ್ಮ್‌ಗಳಿಗೆ ಪಾದಚಾರಿ ಮೇಲ್ಸುತುವೆ, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಹೆಚ್ಚಿನ ರೈಲು ಕಾರ್ಯಾಚರಣೆಗಳನ್ನು ಬೆಂಬಲಿಸಲು ರೈಲು ಹಳಿ 4, 5, 6 ಮತ್ತು 7ರಲ್ಲಿ ಕೋಚ್ ನೀರಿನ ಸೌಲಭ್ಯ ನೀಡಲಾಗಿದೆ. ಇದನ್ನು ಬಳಸಿಕೊಂಡು ಇನ್ನಷ್ಟು ರೈಲುಗಳ ಸೇವೆಯನ್ನು ವಿಸ್ತರಣೆ ಮಾಡಬೇಕು. ಚಾಮರಾಜನಗರ-ತಿರುಪತಿ ನಡುವೆ ಸಂಚರಿಸುವ ರೈಲು ಅಶೋಕಪುರಂ ನಿಲ್ದಾಣದಲ್ಲಿ ನಿಲುಗಡೆಗೆ ಕ್ರಮ ವಹಿಸಬೇಕಿದೆ.
1. ಎಂಜಿಆರ್ ಚೆನ್ನೈ ಸೆಂಟ್ರಲ್- ಮೈಸೂರು ಕಾವೇರಿ ಎಕ್ಸ್‌ಪ್ರೆಸ್(16021/16022 )
2. ಮೈಸೂರು-ಕೆಎಸ್‌ಆರ್ ಬೆಂಗಳೂರು ಸಿಟಿ ಮಾಲ್ಗುಡಿ ಎಕ್ಸ್‌ಪ್ರೆಸ್(20623/ 20624 )
3. ಕಾಚಿಗುಡ-ಮೈಸೂರು ಎಕ್ಸ್‌ಪ್ರೆಸ್(12785/12786 )
4. ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ಎಕ್ಸ್‌ಪ್ರೆಸ್ (12609/ 12610 )
5. ಕೆಎಸ್‌ಆರ್ ಬೆಂಗಳೂರು-ಮೈಸೂರು ಮೆಮು ( 06525/ 06526 )
6. ಕೆಎಸ್‌ಆರ್ ಬೆಂಗಳೂರು-ಮೈಸೂರು ಮೆಮು( 06559/ 06560 )
7. ಕೆಎಸ್‌ಆರ್ ಬೆಂಗಳೂರು-ಮೈಸೂರು ಮೆಮು (06255/ 06256)
8. ಕೆಎಸ್‌ಆರ್ ಬೆಂಗಳೂರು-ಮೈಸೂರು ಮೆಮು( 06257/ 06258 )
ಅಶೋಕಪುರಂ ರೈಲು ನಿಲ್ದಾಣದಿಂದ ಇತ್ತೀಚಿಗಷ್ಟೇ ರೈಲು ಸೇವೆಗಳು ಶುರುವಾಗಿದೆ. ಅಲ್ಲಿಗೆ ಬಂದು-ಹೋಗುವ ರೈಲುಗಳ ವೇಳಾಪಟ್ಟಿ ಪ್ರಕಾರ ಬಸ್ ಸೇವೆ ಕಲ್ಪಿಸಲು ಕ್ರಮ ವಹಿಸಲಾಗುವುದು. ಎಚ್.ಟಿ.ವೀರೇಶ್, ವಿಭಾಗೀಯ ನಿಯಂತ್ರಣಾಧಿಕಾರಿ, ಮೈಸೂರು ನಗರ ವಿಭಾಗ