ಅಶುದ್ಧವಾದ ನೀರಿನ ಘಟಕಗಳು

22 vikram 5
Published on

ವಿಕ್ರಮ ನಾಡಿಗೇರ ಧಾರವಾಡ
ಜನರಿಗೆ ಶುದ್ಧವಾದ ನೀರು ಪೂರೈಸಲು ಹಾಗೂ ಬರ ಎದುರಾದ ಸಮಯದಲ್ಲಿ ನೀರು ಪೂರೈಸಲು ಜಿಲ್ಲೆಯಲ್ಲಿ ಸರ್ಕಾರಿಂದ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ ಸರಿಯಾದ ನಿರ್ವಹಣೆ ಸೇರಿ ಒಂದಿಲ್ಲ ಒಂದು ಕಾರಣಕ್ಕೆ ಬಹುತೇಕ ಘಟಕಗಳು ಬಂದಾಗಿವೆ.
ಘಟಕಗಳ ಸ್ಥಾಪನೆಯಿಂದ ನಗರ ಸೇರಿ ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಿತ್ತು. ಆದರೆ ಸುಮಾರು ಒಂದು ವರ್ಷಗಳಿಂದ ಘಟಕದ ನಿರ್ವಹಣೆಗೆ ಸರಿಯಾಗಿ ಅನುದಾನ ಬರದ ಕಾರಣ ಘಟಕಗಳು ಚಿಂತಾಜನಕ ಸ್ಥಿತಿಗೆ ತಲುಪಿವೆ. ಜನರು ಶುದ್ಧ ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಸಹಕಾರಿ ಸಂಘಗಳು ಹಾಗೂ ಇತರ ಸಂಸ್ಥೆಗಳ ಆಶ್ರಯದಲ್ಲಿ ಜಿಲ್ಲೆಯಲ್ಲಿ ಒಟ್ಟು 469 ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಸದ್ಯ 358 ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಉಳಿದವುಗಳು ಜಲಮೂಲ ಕೊರತೆ, ನಿರ್ವಹಣೆ ಕೊರತೆ ಸೇರಿ ಇತರ ಕಾರಣಗಳಿಂದ ಬಂದಾಗಿವೆ.
ಜಿಲ್ಲೆಯಲ್ಲಿ ಬಂದಾಗಿರುವ 111 ಘಟಕಗಳ ಪೈಕಿ 19 ಘಟಕಗಳು ಜಲಮೂಲ ಕೊರತೆಯಿಂದ ಬಂದಾಗಿದ್ದರೆ, 26 ಘಟಕಗಳು ಏಜೆನ್ಸಿ ಸಮಸ್ಯೆಯಿಂದ, 39 ಘಟಕಗಳು ನಿರ್ವಹಣೆ ಮತ್ತು ದುರಸ್ತಿಯಿಂದ ಸ್ಥಗಿತವಾಗಿದ್ದರೆ, ಉಳಿದವು ಇತರ ಕಾರಣಕ್ಕೆ ಬಂದಾಗಿವೆ.
ಜಿಲ್ಲೆಯ ಬಹುತೇಕ ಜನಪ್ರತಿನಿಧಿಗಳು ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸಿ ನೀರಿನ ಸಮಸ್ಯೆ ಪರಿಹರಿಸಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವು ಹಾಳಾಗಿ ವರ್ಷ ಕಳೆದರೂ ಅದರ ಬಗ್ಗೆ ಯೋಚಿಸಲು ಅವರಲ್ಲಿ ಪುರುಸೊತ್ತಿಲ್ಲ ಎಂಬುದಕ್ಕೆ ಬಂದಾದ ಘಟಕಗಳೇ ನಿದರ್ಶನ.
ಎಲ್ಲಿ, ಎಷ್ಟು ಘಟಕ ಬಂದ್?: ಧಾರವಾಡ ತಾಲೂಕಿನಲ್ಲಿ 149 ಘಟಕಗಳನ್ನು ಸ್ಥಾಪಿಸಿದ್ದು, 108 ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದರೆ, 41 ಘಟಕಗಳು ಬಂದಾಗಿವೆ. ಹುಬ್ಬಳ್ಳಿ ತಾಲೂಕಿನಲ್ಲಿ 78 ಸ್ಥಾಪಿಸಿದ್ದು, 58 ಉತ್ತಮ ಸ್ಥಿತಿಯಲ್ಲಿದ್ದರೆ, 20 ಘಟಕಗಳು ಬಂದಾಗಿವೆ. ಕಲಘಟಗಿ ತಾಲೂಕಿನಲ್ಲಿ 88 ಘಟಕಗಳ ಪೈಕಿ 23 ಘಟಕಗಳು ಬಂದಾಗಿವೆ. ಕುಂದಗೋಳ ತಾಲೂಕಿನಲ್ಲಿ 88 ಘಟಕಗಳ ಪೈಕಿ 21 ಘಟಕಗಳು ಬಂದಾಗಿದ್ದರೆ, ನವಲಗುಂದ ತಾಲೂಕಿನಲ್ಲಿ 66 ಘಟಕಗಳಲ್ಲಿ 6 ಘಟಕಗಳು ಮಾತ್ರ ಹಾಳಾಗಿವೆ.
ತುಕ್ಕು ಹಿಡಿಯುತ್ತಿವೆ ಯಂತ್ರಗಳು: ಜಿಲ್ಲೆಯಲ್ಲಿ ಕೆಲ ಘಟಕಗಳು ಬಂದಾಗಿ ವರ್ಷ ಕಳೆಯುತ್ತಿದೆ. ಅವುಗಳ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಘಟಕ ಬಂದಾಗಿದೆ ಎಂದು ಸುಮ್ಮನಾಗಿರುವ ಸ್ಥಳೀಯ ಆಡಳಿತ ಹಾಗೂ ಅಧಿಕಾರಿಗಳು, ಯಂತ್ರಗಳ ದುರಸ್ತಿಗೆ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಯಂತ್ರಗಳು ಹಾಳಾಗುತ್ತಿವೆ. ಇನ್ನು ಕೆಲ ಕಡೆಗಳಲ್ಲಿ ಊರಿನ ಹೊರ ವಲಯದಲ್ಲಿ ಘಟಕ ಸ್ಥಾಪಿಸಲಾಗಿದೆ. ಅಂತಹ ಕಡೆಗಳಲ್ಲಿ ಯಂತ್ರಗಳನ್ನು ಕಳ್ಳತನ ಮಾಡುವ ಸಾಧ್ಯತೆಯೂ ಇದೆ. ಹೀಗಾಗಿ ಸಂಬಂಧಪಟ್ಟವರು ಸೂಕ್ತ ಕ್ರಮಕೈಗೊಳ್ಳಲಿ ಎಂಬುದು ಜನರ ಆಗ್ರಹವಾಗಿದೆ.

ವಿವಿಧ ಕಾರಣಗಳಿಂದ ಜಿಲ್ಲೆಯಲ್ಲಿ ಶುದ್ಧ ನೀರಿನ ಘಟಕಗಳು ಸ್ಥಗಿತವಾಗಿವೆ. ಕೆಲ ಕಡೆಗಳಲ್ಲಿ ಯಂತ್ರಗಳು ಹಾಳಾಗಿವೆ. ಹೀಗಾಗಿ ಅವುಗಳ ದುರಸ್ತಿಗಾಗಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತಿದೆ. ಅನುದಾನ ಬಂದ ತಕ್ಷಣವೇ ಘಟಕಗಳ ದುರಸ್ತಿ ಕಾರ್ಯ ನಡೆಸಲಾಗುವುದು.*ಆರ್.ಎಂ. ಸೊಪ್ಪಿನಮಠ, ಕಾರ್ಯಪಾಲಕ ಇಂಜಿನಿಯರ್, ಕುಡಿಯುವ ನೀರು ನೀರು ಮತ್ತು ನೈರ್ಮಲ್ಯ ಇಲಾಖೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net