

ಚಿತ್ರದುರ್ಗ: ಅಶುದ್ಧ ಆಲೋಚನೆಗಳು ಅನಾಹುತ, ಆತಂಕ ಉಂಟು ಮಾಡಿ ಅನಾರೋಗ್ಯಕ್ಕೆ ಮುಖ್ಯ ಕಾರಣವಾಗಲಿದೆ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಶ್ರೀ ಬೇಸರಿಸಿದರು.
ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ ಶನಿವಾರ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆಯ ಸಾನ್ನಿಧ್ಯವಹಿಸಿ ಮಾತನಾಡಿದರು.
ವ್ಯೆದ್ಯಕೀಯ ಮತ್ತು ಅಧ್ಯಾತ್ಮ ಲೋಕದಲ್ಲಿ ಆಶ್ಚರ್ಯಗಳು ನಡೆಯುತ್ತ್ತಿವೆ. ಸಂತರು, ಮಹಾಂತರು ತಾಯಿ ಮತ್ತು ಮಕ್ಕಳನ್ನು ಆರೈಕೆ ಮಾಡುವ ಸಂದರ್ಭ ಎದುರಾಗಬಹುದು. ಕಾಲ ಬದಲಾಗುತ್ತಿದ್ದು, ಗುರು ಶಿಷ್ಯರಿಗೆ ಸನ್ಮಾನ ಮಾಡುವಂತ ಸನ್ನಿವೇಶ ಬರಬಹುದು ಎಂದು ಅಭಿಪ್ರಾಯಪಟ್ಟರು.
ದೇಶ, ಸಮಾಜದ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಶ್ರಮ ಅಧಿಕವಾಗಿದೆ. ವೈದ್ಯರು ಎಷ್ಟೇ ಕಷ್ಟವಿದ್ದರೂ ನಂಬಿ ಬಂದ ರೋಗಿಗೆ ಚಿಕಿತ್ಸೆ ನೀಡುವ ಮೂಲಕ ಆತನ ಆರೈಕೆ ಮಾಡುತ್ತಾರೆ. ಈ ಸೇವೆ ಅವಿಸ್ಮರಣೀಯ ಎಂದರು.
ವೈದ್ಯರ ಕೈಗುಣದಿಂದ ರೋಗ ಬಹುಬೇಗ ಗುಣವಾಯಿತೆಂದು ಹಲವರು ಸ್ಮರಿಸಿಕೊಳ್ಳುತ್ತಾರೆ. ಧೈರ್ಯ ತುಂಬುವ ಕೆಲಸ ಮಾಡುತ್ತಾರೆ. ಶಿವಧ್ಯಾನ, ಯೋಗ, ಪ್ರಾಣಾಯಾಮ ಉತ್ತಮ ಆರೋಗ್ಯಕ್ಕೆ ಪೂರಕವಾಗಿದ್ದು, ಮಾನವರ ಆಲೋಚನೆ ಕೂಡ ಶುದ್ಧವಾಗಿರಬೇಕು ಎಂದು ಸಲಹೆ ನೀಡಿದರು.
ಐಎಂಎ ಅಧ್ಯಕ್ಷ ಡಾ.ಪಿ.ಟಿ.ವಿಜಯಕುಮಾರ್, ಕಾರ್ಯದರ್ಶಿ ಡಾ.ಕೆ.ಎಂ.ಬಸವರಾಜ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ಬಸವೇಶ್ವರ ಆಸ್ಪತ್ರೆಯ ಡಾ.ಸುರೇಶ್ ಭಂಡಾರಿ, ಡಾ.ರಾಜೇಶ್, ಡಾ.ನಾಗೇಂದ್ರಗೌಡ, ಡಾ.ಪ್ರಶಾಂತ್, ಡಾ.ಬಸವಂತಪ್ಪ, ಸಿದ್ದಗಂಗಮ್ಮ, ಹೇಮಲತಾ, ರೂಪಾ ಇತರರಿದ್ದರು.