

ಮೈಸೂರು: ಪ್ರಸ್ತುತ ಅಲ್ಪಸಂಖ್ಯಾತರು, ದಲಿತರು, ಆದಿವಾಸಿ ಸಮುದಾಯ ಸೇರಿದಂತೆ ಅಶಕ್ತರಿಗೆ ಸ್ವಾತಂತ್ರ್ಯ, ಸಮಾನತೆ ಸಿಗುತ್ತಿಲ್ಲ. ಇದಕ್ಕೆ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಕಾರಣವಾಗಿವೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷ ವಿ.ಎಸ್.ಕಾಂಬ್ಳೆ ದೂರಿದರು.
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ(ಎಸ್‌ಡಿಪಿಐ) ವತಿಯಿಂದ ನಗರದ ಮಣಿಪಾಲ್ ಆಸ್ಪತ್ರೆ ಬಳಿಯ ವೈಟ್ ಪ್ಯಾಲೇಸ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ 6ನೇ ರಾಜ್ಯ ಪ್ರತಿನಿಧಿ ಸಭೆ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಪ್ರಾಣ ತೆತ್ತ ಮುಸಲ್ಮಾನರು, ದಲಿತರು, ಆದಿವಾಸಿಗಳು ಮತ್ತು ಅನೇಕ ಹಿಂದುಳಿದ ವರ್ಗದ ಹೋರಾಟಗಾರರ ಹೆಸರನ್ನು ಕಡೆಗಣಿಸಲಾಗಿದೆ. ಆದರೆ, ಹೋರಾಟದಲ್ಲಿ ಭಾಗವಹಿಸದ ಹಲವಾರು ಮೇಲ್ವರ್ಗದ ಜನರು ದೇಶದ ಆಡಳಿತ ಚುಕ್ಕಾಣಿ ಹಿಡಿದು ಆಡಳಿತ ನಡೆಸುತ್ತಿರುವುದು ದುರ್ದೈವ ಎಂದರು.
ಭಾರತ ಶ್ರೇಷ್ಠ ಸಂವಿಧಾನ ಹೊಂದಿದೆಯಾದರೂ ಇಲ್ಲಿನ ದಲಿತರು, ಅಲ್ಪಸಂಖ್ಯಾತರು ಮತ್ತು ಆದಿವಾಸಿಗಳಿಗೆ ಇನ್ನೂ ಸ್ವಾತಂತ್ರ್ಯ ದೊರಕಿಲ್ಲ. ಭಯದ ನೆರಳಲ್ಲೇ ಅವರು ಬದುಕುವಂತಾಗಿದೆ. ಇದು ಹೀಗೆ ಮುಂದುವರಿದರೆ ವರ್ತಮಾನ ಮತ್ತಷ್ಟು ಭಯಂಕರವಾಗಲಿದೆ. ಸಂವಿಧಾನದ ಪೀಠಿಕೆಯಲ್ಲಿ ಭಾರತ ದೇಶದ ಎಲ್ಲ ಪ್ರಜೆಗಳಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ, ನ್ಯಾಯ ಸಮಾನತೆ ತಿಳಿಸಲಾಗಿದೆ.
ಅಲ್ಲದೆ ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರೃ ನೀಡಲಾಗಿದೆ. ಆದರೆ ಪ್ರಸ್ತುತ ಅಲ್ಪಸಂಖ್ಯಾತರು, ದಲಿತರು ಮತ್ತು ಆದಿವಾಸಿ ಸಮುದಾಯ ಸೇರಿದಂತೆ ಅಶಕ್ತರಿಗೆ ಸ್ವಾತಂತ್ರ್ಯ, ಸಮಾನತೆ ಸಿಗುತ್ತಿಲ್ಲ. ಅವರ ಹಕ್ಕುಗಳನ್ನು ನಿರಾಕರಣೆ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸುವ ಧೈರ್ಯ ಆಶಕ್ತ ಸಮುದಾಯಕ್ಕೆ ಇಲ್ಲ.
ಸಂವಿಧಾನ ಎಲ್ಲ ಹಕ್ಕುಗಳನ್ನು ನೀಡಿದ್ದರೂ ಇಂದಿಗೂ ತುಳಿತಕ್ಕೆ ಒಳಗಾದ ಸಮುದಾಯದವರು ಭಯದಿಂದಲೇ ಬದುಕುತ್ತಿದ್ದಾರೆ. ಎಸ್‌ಡಿಪಿಐ ಅಶಕ್ತ ಸಮುದಾಯದ ಹಕ್ಕುಗಳನ್ನು ಅವರಿಗೆ ಕೊಡಿಸಲು ಅವಿರತವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಧರ್ಮ, ಜಾತಿ, ಭಾಷೆ ಹೆಸರಲ್ಲಿ ಜನರ ಮಧ್ಯೆ ವಿಷ ಬಿತ್ತುವುದರ ಮೂಲಕ ಬಿಜೆಪಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಕಾಂಗ್ರೆಸ್ ಇದರ ಹೊರತಾಗಿಲ್ಲ. ದೇಶವನ್ನು ಒಗ್ಗೂಡಿಸುವ ಪ್ರಯತ್ನವನ್ನು ಯಾರೂ ಮಾಡುತ್ತಿಲ್ಲ. ಸಣ್ಣ ವಿಚಾರಕ್ಕೂ ದಲಿತರು, ಅಲ್ಪಸಂಖ್ಯಾತರನ್ನು ಹತ್ಯೆ ಮಾಡಲಾಗುತ್ತಿದೆ.
ಈ ವಿಚಾರದಲ್ಲಿ ಸಂವಿಧಾನದ ಪೀಠಿಕೆಯಲ್ಲಿ ತಿಳಿಸಿರುವಂತೆ ಸಮಾನತೆ ಕಾಣಲಾಗುತ್ತಿಲ್ಲ. ವರ್ತಮಾನವು ಮತ್ತಷ್ಟು ಭಯಂಕರವಾಗಿದ್ದು, ನಮ್ಮ ರಾಜಕೀಯ ಪಕ್ಷಗಳ ಆಯ್ಕೆಯನ್ನು ನಾವು ಬದಲಾಯಿಸಿಕೊಳ್ಳುವುದರ ಬಗ್ಗೆ ಮರುಚಿಂತನೆ ನಡೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಎಸ್‌ಡಿಪಿಐ 6ನೇ ರಾಜ್ಯ ಪ್ರತಿನಿಧಿಗಳ ಸಭೆಗೆ ಚಾಲನೆ:
ಎರಡು ದಿನಗಳ ಎಸ್‌ಡಿಪಿಐ 6ನೇ ರಾಜ್ಯ ಪ್ರತಿನಿಧಿಗಳ ಸಭೆಗೆ ಚಾಲನೆ ದೊರೆಯಿತು.
ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಧ್ವಜಾರೋಹಣ ನೆರವೇರಿಸಿದರು. ರಾಜ್ಯ ಉಸ್ತುವಾರಿ ಅಬ್ದುಲ್ ಮಜೀದ್ ಫೈಜಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲಿಯಾಸ್ ಮಹಮ್ಮದ್, ರಾಷ್ಟ್ರೀಯ ಕಾರ್ಯದರ್ಶಿ ಆಲ್ಫೋನ್ಸೊ ಫ್ರಾಂಕೋ, ರಾಜ್ಯ ಘಟಕದ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಸೇರಿದಂತೆ ಹಲವು ಮುಖಂಡರು ವಿಷಯಗಳನ್ನು ಮಂಡಿಸಿದರು.
ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಮುಂಬರುವ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷ ರಫತ್ ಖಾನ್, ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್, ಜಿಲ್ಲಾ ಘಟಕದ ಕಾರ್ಯದರ್ಶಿ ಫರ್ದೀನ್, ಜಿಲ್ಲಾ ಘಟಕದ ಉಪಾಧ್ಯಕ್ಷ ಎಸ್.ಸ್ವಾಮಿ ಇದ್ದರು.