

ಬೆಳಗಾವಿ: ತಾಲೂಕಿನ ರಾಜಹಂಸಗಡದ ಸಿದ್ದೇಶ್ವರ ದೇವಸ್ಥಾನ ಮತ್ತು ಕಿಲ್ಲಾ ಅಭಿವೃದ್ಧಿ ಕಮಿಟಿಯಲ್ಲಿ ನಡೆದಿರುವ ಅವ್ಯವಹಾರದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಕೊಳ್ಳುವಂತೆ ಆಗ್ರಹಿಸಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಮಿತಿ ಸದಸ್ಯರು, ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಅಧ್ಯಕ್ಷ ಸಿದ್ದಪ್ಪ ದೇಮಣ್ಣ ಛತ್ರೆ, ಕಾರ್ಯದರ್ಶಿ ಬಾವುರಾವ ಜ್ಯೋತಿಬಾ ಪವಾರ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅವ್ಯವಹಾರ ನಡೆಸಿದ್ದಾರೆ. ಅನುದಾನ ಬಳಕೆ, ಅಭಿವೃದ್ಧಿ ಕೆಲಸಗಳು ಸೇರಿದಂತೆ ಇನ್ನಿತರ ಕೆಲಸಗಳನ್ನು ಕಾನೂನುಬಾಹಿರವಾಗಿ ಕೈಗೊಂಡಿದ್ದಾರೆ. ಮೇಲ್ನೋಟಕ್ಕೆ ಸಾಕಷ್ಟು ಪ್ರಮಾಣದಲ್ಲಿ ಅವ್ಯವಹಾರ ನಡೆದಿರುವುದು ಕಂಡು ಬಂದಿದೆ ಎಂದು ದೂರಿದರು. ಕಳೆದ ಹಲವು ದಿನಗಳಲ್ಲಿ ಕಮಿಟಿ ಸದಸ್ಯರ ಗಮನಕ್ಕೆ ಬಾರದಂತೆ ವ್ಯವಹಾರ ನಡೆಸುತ್ತಿದ್ದಾರೆ. ಅಲ್ಲದೆ, ಕಾನೂನು ಬಾಹಿರ ಕೆಲಸಗಳನ್ನು ಮುಚ್ಚಿಹಾಕಲು ತಪ್ಪು ದಾರಿ ಹಿಡಿದಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಅಧ್ಯಕ್ಷ, ಕಾರ್ಯದರ್ಶಿಯನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಪ್ರತಿಭಟನಾಕರರು ಒತ್ತಾಯಿಸಿದರು.
ಸಿದ್ದಪ್ಪ ಪವಾರ, ಮಧು ನಾರಾಯಣ ಥೋರವತ, ರಾಮಚಂದ್ರ ಥೋರವತ, ನಾರಾಯಣ ಹವಳ, ಮಾರುತಿ ಸಿದ್ದಪ್ಪ ತಾವಶೆ ಮತ್ತಿತರರು ಉಪಸ್ಥಿತರಿದ್ದರು.