ಅವ್ಯವಹಾರ ಆರೋಪ ಸತ್ಯಕ್ಕೆ ದೂರ

kallayyajja
Published on

ಗದಗ: ವೀರೇಶ್ವರ ಪುಣ್ಯಾಶ್ರಮದ ಹಣಕಾಸಿನ ವ್ಯವಹಾರಗಳು ಅತ್ಯಂತ ಪಾರದರ್ಶಕವಾಗಿವೆ. ಭಕ್ತರು ನೀಡಿರುವ ಧನಸಹಾಯವನ್ನು ಅಂಧ-ಅನಾಥರ ಅಭಿವೃದ್ಧಿಗಾಗಿ ವಿನಿಯೋಗ ಮಾಡಲಾಗುತ್ತಿದೆ. ಪುಣ್ಯಾಶ್ರಮದ ಚಿನ್ನಾಭರಣಗಳು ಮಾಯವಾಗಿವೆ ಎಂದು ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಇದು ಸತ್ಯಕ್ಕೆ ದೂರವಾದ ಸಂಗತಿ ಎಂದು ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜ ಸ್ಪಷ್ಟನೆ ನೀಡಿದರು.

ನಗರದ ಪುಣ್ಯಾಶ್ರಮದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಾನಗಲ್ ಕುಮಾರಸ್ವಾಮಿಗಳು, ಪಂಚಾಕ್ಷರಿ ಗವಾಯಿಗಳು, ಗುರು ಪುಟ್ಟರಾಜರು ಹಾಕಿಕೊಟ್ಟ ಮಾರ್ಗದಲ್ಲಿ ಆಶ್ರಮವನ್ನು ಮುನ್ನಡೆಸಿಕೊಂಡು ಹೋಗಲಾಗುತ್ತಿದೆ. ಅಂಧ-ಅನಾಥ, ಅಂಗವಿಕಲ ಹಾಗೂ ಹಿಂದುಳಿದ ವರ್ಗಗಳ ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸಲಾಗುತ್ತಿದೆ ಎಂದರು.

ಆಶ್ರಮಕ್ಕೆ ಸಂಬಂಧಿಸಿದ ಒಂದು ಕೆಜಿ ಚಿನ್ನದ ಕಿರೀಟ, 250 ಗ್ರಾಂ ಬಿನ್ನವತ್ತಳಿಕೆಗಳನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್​ನ ಸೇಫ್ ಲಾಕರ್​ನಲ್ಲಿ ಇಡಲಾಗಿದೆ. ಅವುಗಳನ್ನು ಲಿಂ. ಗವಾಯಿಗಳ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ತಂದು ಪೂಜೆ ಸಲ್ಲಿಸಿ ಸಾರ್ವಜನಿಕ ಪ್ರದರ್ಶನದ ನಂತರ ಮತ್ತೆ ಬ್ಯಾಂಕಿನಲ್ಲಿ ಇಡಲಾಗುತ್ತಿದೆ. ಆಶ್ರಮದ ಇನ್ನೋವಾ ಕಾರಿನ ಬಾಕಿ ಹಣ 12 ಲಕ್ಷ ರೂ. ಪಾವತಿಸಲಾಗಿದ್ದು, 6 ಲಕ್ಷ ರೂ. ಅವಶ್ಯಕ ಖರ್ಚು- ವೆಚ್ಚ ಮಾಡಲಾಗಿದೆ ಎಂದರು.

ಪುಣ್ಯಾಶ್ರಮದ ನಿತ್ಯ ಆಡಳಿತದಲ್ಲಿ ಹಲವಾರು ಖರ್ಚಿನ ವ್ಯವಹಾರಗಳಿವೆ. ಸುಮಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ 13 ಶಿಕ್ಷಣ ಸಂಸ್ಥೆಗಳ ಖರ್ಚು ಇದರಲ್ಲಿ ಸೇರಿವೆ. ಶಾಲಾ- ಕಾಲೇಜ್​ಗಳು ಅನುದಾನ ರಹಿತವಾಗಿದ್ದು, ಇವುಗಳ ನಿರ್ವಹಣೆ, ಸಿಬ್ಬಂದಿ ವೇತನ, ಆಶ್ರಮದಲ್ಲಿ ಇರುವ ನೂರಾರು ಅಂಧ-ಅನಾಥ ಮಕ್ಕಳಿಗೆ ನಿರಂತರ ದಾಸೋಹ ಕೈಂಕರ್ಯ, ವಾಹನಗಳ ನಿರ್ವಹಣೆ, ಕಟ್ಟಡ ಕಾಮಗಾರಿಗಳ ನಿರ್ವಹಣೆ, ವಿದ್ಯುತ್ ಬಿಲ್, ಪ್ರವಾಸದ ಖರ್ಚು ಮೊದಲಾದ ವೆಚ್ಚ ನೋಡಿಕೊಳ್ಳುತ್ತಿದ್ದ ಆಶ್ರಮದ ಹಿಂದಿನ ವ್ಯವಸ್ಥಾಪಕ ಬಸವರಾಜಸ್ವಾಮಿ ಹಿಡ್ಕಿಮಠ ಅವರು ಶ್ರೀಮಠದಲ್ಲಿದ್ದ ಬಂಗಾರವನ್ನು ಸ್ವಲ್ಪ ಮಾರಾಟ ಮಾಡಿ ಖರ್ಚು ವೆಚ್ಚಗಳನ್ನು ನಿಭಾಯಿಸಿದ್ದಾರೆ. ಅಲ್ಲದೆ, ಕಳೆದ ಹತ್ತು ತಿಂಗಳಿಂದ ಕರೊನಾ ಹಿನ್ನೆಲೆಯಲ್ಲಿ ಆಶ್ರಮವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಧಾರ್ವಿುಕ ಕಾರ್ಯಕ್ರಮಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಹೀಗಾಗಿ, ಆಶ್ರಮಕ್ಕೆ ಬರುವ ಆದಾಯ ಸಂಪೂರ್ಣವಾಗಿ ನಿಂತುಹೋಗಿದೆ. ಆಶ್ರಮದ ನಾಟ್ಯ ಸಂಘದ 30 ಕಲಾವಿದರು ಪ್ರದರ್ಶನವಿಲ್ಲದೆ ತೊಂದರೆಯಲ್ಲಿದ್ದಾಗ ಅವರ ಕುಟುಂಬಕ್ಕೆ ಆಶ್ರಮ ಸಹಾಯಹಸ್ತ ಚಾಚಿದೆ. ಹೀಗೆ ಅನೇಕ ಸಮಾಜಮುಖಿ ಕಾರ್ಯಗಳಿಗೆ ಆಶ್ರಮದ ಹಣವನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಲಿಂಗೈಕ್ಯ ಪುಟ್ಟರಾಜ ಗವಾಯಿಗಳ ಸುವರ್ಣ ತುಲಾಭಾರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಮೂರುಸಾವಿರಮಠ ಶ್ರೀಗಳು ಹಾಗೂ ಬಾಲೇಹೊಸೂರ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ತುಲಾಭಾರ ಸಮಿತಿ ರಚಿಸಲಾಗಿದ್ದು, ತುಲಾಭಾರದಲ್ಲಿ ಭಕ್ತರಿಂದ ಸಂಗ್ರಹಿಸಿದ್ದ 50 ಲಕ್ಷ ರೂ. ಸಮಿತಿ ಹೆಸರಿನಲ್ಲಿ ತೆರೆದಿರುವ ಬ್ಯಾಂಕ್ ಖಾತೆಯಲ್ಲಿದೆ ಎಂದರು.

ಪುಣ್ಯಾಶ್ರಮಕ್ಕೆ ಸಂಗೀತ, ವೈದಿಕ ಅಭ್ಯಾಸಕ್ಕಾಗಿ ನಾಡಿನಾದ್ಯಂತ ಮಕ್ಕಳು ಬರುತ್ತಾರೆ. ಅವರಿಗೆ ವಾಸ್ತವ್ಯದ ಕೊರತೆ ಇದ್ದುದರಿಂದ ಶ್ರೀಮಠದ ದಾಸೋಹ ನಿಲಯದ ಮೇಲೆ 45 ಲಕ್ಷ ರೂ. ವೆಚ್ಚದಲ್ಲಿ ಮೊದಲ ಮಹಡಿ ನಿರ್ವಿುಸಲಾಗಿದೆ. ಭಕ್ತರ ಧನಸಹಾಯದಿಂದ ಯಾತ್ರಿ ನಿವಾಸ ನಿರ್ವಿುಸಲಾಗಿದೆ. ಕಲಾಭವನ ನವೀಕರಿಸಲಾಗಿದೆ. ಮಠದ ಹೊಲದಲ್ಲಿ ದನಕರುಗಳಿಗೆ ಶೆಡ್ ನಿರ್ವಿುಸಲಾಗಿದೆ. ಧಾರ್ವಿುಕ ಕಾರ್ಯಕ್ರಮಗಳಿಗೆ ಅಲಂಕಾರಿಕ ಮೆರವಣಿಗೆ ರಥವನ್ನು ಖರೀದಿಸಲಾಗಿದೆ. ಅಲ್ಲದೆ, ಆಶ್ರಮದ ಪ್ರಸಾದ ವ್ಯವಸ್ಥೆಗೆ ಅಡುಗೆ ಸಾಮಾನುಗಳನ್ನು ಖರೀದಿಸಲಾಗಿದೆ ಎಂದು ಕಲ್ಲಯ್ಯಜ್ಜ ಹೇಳಿದರು.

ವಸ್ತುಸ್ಥಿತಿ ಹೀಗಿರುವಾಗ ಕಳೆದ ದಿನಗಳಿಂದ ಕೆಲವರು ಆಶ್ರಮದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸುತ್ತಿರುವುದರಿಂದ ಭಕ್ತರಲ್ಲಿ ಗೊಂದಲ ಉಂಟಾಗಿದೆ. ಶ್ರೀಮಠದ ಗೌರವಕ್ಕೆ ಧಕ್ಕೆ ತರಲು ಕೆಲವರು ಹುನ್ನಾರ ನಡೆಸಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ವೀರೇಶ್ವರ ಪುಣ್ಯಾಶ್ರಮದ ಸೋಲ್ ಟ್ರಸ್ಟ್ ಅಧ್ಯಕ್ಷ ನಿಂಗಪ್ಪ ಕೆಂಗಾರ, ಪಿ.ಸಿ. ಹಿರೇಮಠ, ವಸಂತಗೌಡ ಪೊಲೀಸಪಾಟೀಲ ಸೇರಿ ಸರ್ವ ಸದಸ್ಯರು ಇದ್ದರು.

ಸರ್ಕಾರದ ಅನುದಾನ ಸದ್ವಿನಿಯೋಗ: ಪುಣ್ಯಾಶ್ರಮಕ್ಕೆ ಸರ್ಕಾರ ನೀಡಿದ್ದ 3 ಕೋಟಿ ರೂ. ಅನುದಾನದಲ್ಲಿ 1.5 ಕೋಟಿ ರೂ ವೆಚ್ಚದಲ್ಲಿ ಆಶ್ರಮದ ಕಲಾ ಮತ್ತು ಶಿಕ್ಷಣ ಕಾಲೇಜ್ ಕಟ್ಟಡಕ್ಕೆ ಎರಡು ಮತ್ತು ಮೂರನೇ ಅಂತಸ್ತಿನ ಕಡ್ಟಡ ನಿರ್ವಿುಸಲಾಗಿದೆ. ಗದಗ ನಗರದ ಭೂಮರಡ್ಡಿ ವೃತ್ತದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಪುಟ್ಟರಾಜರ ಕಂಚಿನ ಪುತ್ಥಳಿ ನಿರ್ವಿುಸಲಾಗಿದೆ. ಹೀಗಾಗಿ, ಸರ್ಕಾರ ನೀಡಿದ ಮೂರು ಕೋಟಿ ರೂ. ಅನುದಾನದಲ್ಲಿ ಇನ್ನೂ 1.32 ಕೋಟಿ ರೂ. ಲೋಕೋಪಯೋಗಿ ಇಲಾಖೆ ಬಳಿ ಇದೆ. ಈ ಹಣದಲ್ಲಿ ನಾವ್ಯಾರು ನಯಾಪೈಸೆ ಬಳಕೆ ಮಾಡಿಲ್ಲ ಎಂದು ಕಲ್ಲಯ್ಯಜ್ಜ ಹೇಳಿದರು.

ಕಳೆದ ಆಗಸ್ಟ್ನಿಂದ ಆಶ್ರಮದ ಸಂಪೂರ್ಣ ಆಡಳಿತವನ್ನು ನಾನೇ ನೋಡಿಕೊಳ್ಳುತ್ತಿದ್ದು, ಖರ್ಚು ಮಾಡಿರುವ ಪ್ರತಿ ರೂ. ಲೆಕ್ಕವನ್ನು ಇಡಲಾಗಿದೆ. ಬಡವರ ಪರ ಕೆಲಸ ಮಾಡುತ್ತಿರುವ ಆಶ್ರಮಕ್ಕೆ ಎಲ್ಲರ ಸಹಕಾರ ಅಗತ್ಯ.| ಕಲ್ಲಯ್ಯಜ್ಜ, ವೀರೇಶ್ವರ ಪುಣ್ಯಾಶ್ರಮ ಪೀಠಾಧಿಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net