ಅವ್ಯವಸ್ಥೆ ಆಗರವಾದ ಹಣ್ಣಿನ ಮಾರುಕಟ್ಟೆ!

00000
Published on

ವಿಜಯವಾಣಿ ಸುದ್ದಿಜಾಲ ಆನೇಕಲ್
ಬೆಂಗಳೂರಿನಿಂದ ಬೃಹತ್ ಹಣ್ಣಿನ ಮಾರುಕಟ್ಟೆಯನ್ನು ತಾಲೂಕಿನ ಸಿಂಗೇನ ಅಗ್ರಹಾರಕ್ಕೆ ವರ್ಗಾವಣೆ ಮಾಡಿ ಹಲವು ವರ್ಷ ಕಳೆದರೂ ಸೂಕ್ತ ಸೌಲಭ್ಯ ಕಲ್ಪಿಸದ ಕಾರಣ ಈ ಮಾರುಕಟ್ಟೆ ಅವ್ಯವಸ್ಥೆಯ ಆಗರವಾಗಿದೆ. ಮೂರು ದಿನಗಳಿಂದ ಭರ್ಜರಿ ಮಳೆಯಾಗುತ್ತಿದ್ದು, ಸಿಂಗೇನ ಅಗ್ರಹಾರದ ಹಣ್ಣಿನ ಮಾರುಕಟ್ಟೆ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ವಾಹನ ಸವಾರರು ಹಾಗೂ ಹಣ್ಣು ಖರೀದಿಗೆ ಬರುವವರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಪ್ರತಿದಿನ ಮಾರುಕಟ್ಟೆಗೆ ದೇಶ- ವಿದೇಶದಿಂದ ಬೃಹತ್ ಟ್ರಕ್ ಹಾಗೂ ಕಂಟೇನರ್ ಗಳಲ್ಲಿ ಹಣ್ಣುಗಳು ಬರುತ್ತವೆ. ಆದರೆ, ಮಾರುಕಟ್ಟೆಯ ಅವ್ಯವಸ್ಥೆ ನೋಡಿದರೆ ಇಲ್ಲಿ ಕಾಲಿಡಲೂ ಸಾಧ್ಯವಾಗದ ಸ್ಥಿತಿ ಇದೆ. ಪ್ರತಿದಿನ ಮಾರುಕಟ್ಟೆಗೆ ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಿಂದ ಹಣ್ಣು ಖರೀದಿಗೆ ಬರುವವರು ಗಬ್ಬುನಾರುತ್ತಿರುವ ಆವರಣದಲ್ಲೇ ವಹಿವಾಟು ಮಾಡಬೇಕಾಗಿದೆ. ಪ್ರತಿದಿನ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ. ಸರ್ಕಾರಕ್ಕೂ ಈ ಮಾರುಕಟ್ಟೆಯಿಂದ ಕೋಟಿಗಟ್ಟಲೇ ಲಾಭ ಹರಿದು ಬರುತ್ತಿದೆ. ಆದರೆ, ಮಾರುಕಟ್ಟೆ ನಿರ್ವಹಣೆಯ ಹೊಣೆಹೊತ್ತ ಅಧಿಕಾರಿಗಳು ಮಾತ್ರ ನಿದ್ದೆಯಿಂದ ಎದ್ದಂತೆ ಕಾಣುತ್ತಿಲ್ಲ.

ಸ್ವಚ್ಛತೆ ಮರೀಚಿಕೆ: ಮಾರುಕಟ್ಟೆಯಲ್ಲಿ ಕೊಳೆತ ಹಣ್ಣು ಹಾಗೂ ಇನ್ನಿತರ ತ್ಯಾಜ್ಯಗಳನ್ನು ಎಲ್ಲೆಂದರಲ್ಲೇ ಹಾಕಲಾಗುತ್ತಿದ್ದು, ಇದನ್ನು ನಿರ್ವಹಣೆ ಮಾಡಬೇಕಾದ ಟೆಂಡರ್‌ದಾರರು ಬೇಜವಾಬ್ದಾರಿ ತೋರುತ್ತಿದ್ದಾರೆ. ಇದರಿಂದ ಇಡೀ ಮಾರುಕಟ್ಟೆ ಗಬ್ಬುನಾರುತ್ತಿದೆ. ಸಿಂಗೇನ ಅಗ್ರಹಾರ ಹಣ್ಣಿನ ಮಾರುಕಟ್ಟೆಯ ಅವ್ಯವಸ್ಥೆ ಇಂದು, ನಿನ್ನೆಯದಲ್ಲ. ಪ್ರತಿಬಾರಿ ಇಲ್ಲಿಗೆ ಜನಪ್ರತಿನಿಧಿಗಳು ಬರುತ್ತಾರೆ. ಆದರೆ ಯಾವುದೇ ಸಮಸ್ಯೆಗೂ ಪರಿಹಾರ ಸಿಕ್ಕಿಲ್ಲ. ಅಧಿಕಾರಿಗಳೂ ಸಮಸ್ಯೆ ಸರಿಪಡಿಸುವ ಕೆಲಸ ಮಾಡುತ್ತಿಲ್ಲ.ಬಾಬು ಹಣ್ಣು ಅಂಗಡಿ ಮಾಲೀಕ

ಕಿಮೀ ಗಟ್ಟಲೇ ಟ್ರಾಫಿಕ್ ಜಾಮ್: ಮಾರುಕಟ್ಟೆಯಲ್ಲಿ ಪ್ರತಿ ವಾಹನಗಳಿಂದಲೂ ಶುಲ್ಕ ಪಡೆಯಲಾಗುತ್ತದೆ. ಆದರೆ ಟ್ರಾಫಿಕ್‌ಜಾಮ್ ಉಂಟಾದಾಗ ಅದನ್ನು ನಿರ್ವಹಣೆ ಮಾಡಲು ಯಾವ ಅಧಿಕಾರಿಯೂ ಇಲ್ಲ. ಇದರಿಂದ ಹಣ್ಣು ಹೊತ್ತು ಬರುವ ವಾಹನಗಳು ಗಂಟೆಗಟ್ಟಲೇ ನಿಂತಲ್ಲೇ ನಿಲ್ಲುವುದರಿಂದ ಕಿಲೋ ಮೀಟರ್‌ವರೆಗೆ ಟ್ರಾಫಿಕ್ ಜಾಮ್ ಆಗುವುದು ಸಾಮಾನ್ಯವಾಗಿದೆ. ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಹಣ್ಣಿನ ವಾಹನಗಳ ಆಗಮನ ಹೆಚ್ಚಾಗಿದ್ದು, ಮೂರು ದಿನಗಳಿಂದ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ವಾಹನಗಳೇ ತುಂಬಿದ್ದು, ಟ್ರಾಫಿಕ್‌ಜಾಮ್‌ನಿಂದ ಚಾಲಕರು ಪರದಾಡುವಂತಾಗಿದೆ.

ಸೌಕರ್ಯ ಕೊರತೆ: ಸಾವಿರಾರು ಮಳಿಗೆಗಳು ಇರುವ ಹಣ್ಣಿನ ಮಾರುಕಟ್ಟೆಗೆ ಬರುವ ಲಾರಿ ಚಾಲಕರು ಹಾಗೂ ಗ್ರಾಹಕರಿಗೆ ಕುಡಿಯುವ ನೀರು, ಶೌಚಗೃಹದಂತಹ ಕನಿಷ್ಠ ಮೂಲಸೌಕರ್ಯ ಕಲ್ಪಿಸದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸಚಿವರು ಬಂದರೂ ಪ್ರಯೋಜವಿಲ್ಲ: ಪ್ರತಿ ಸರ್ಕಾರಗಳು ಬದಲಾದಾಗ ಮಾರುಕಟ್ಟೆಗೆ ಸಚಿವರು ಭೇಟಿ ನೀಡುತ್ತಾರೆ. ಎಲ್ಲವನ್ನೂ ಸರಿಪಡಿಸುವ ಸಲುವಾಗಿ ಸಭೆಗಳನ್ನು ನಡೆಸಿ, ಭರವಸೆ ಕೊಟ್ಟು ಹೋದವರು ಮತ್ತೆ ಇತ್ತ ತಲೆ ಹಾಕುವುದಿಲ್ಲ. ಇದು ಕೂಡ ಮಾರುಕಟ್ಟೆ ಅವ್ಯವಸ್ಥೆಗೆ ಕಾರಣ ಎಂದು ಇಲ್ಲಿನ ಅಂಗಡಿ ಮಾಲೀಕರು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net