ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿರುವ ಪ್ರಲ್ಹಾದ ಜೋಶಿ ಅವರ ಕ್ಷೇತ್ರ ಹುಬ್ಬಳ್ಳಿಯಲ್ಲಿ ಅವೈಜ್ಞಾನಿಕವಾಗಿ ಫ್ಲೈ ಓವರ್ ನಿರ್ಮಾಣ ಮಾಡಲಾಗಿದೆ. ಇದನ್ನು ನೋಡಿಯೂ ಜನ ಯಾಕೆ ಸುಮ್ಮನಿದ್ದಾರೆ ಎಂಬುದು ನನಗೆ ತಿಳಿಯದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅಭಿಪ್ರಾಯಿಸಿದರು.
ಇಲ್ಲಿಯ ಕಾರವಾರ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಹೊಸೂರು ವೃತ್ತದಿಂದ ಗೋಕುಲ ರಸ್ತೆಯಲ್ಲಿ ಇಷ್ಟು ಕಿರಿದಾಗಿ ಫ್ಲೈ ಓವರ್ ನಿರ್ಮಾಣ ಮಾಡಿರುವುದನ್ನು ನಾನೆಲ್ಲೋ ನೋಡಿಲ್ಲ. ಮಾರ್ಗದಲ್ಲಿ ಒಂದು ಬಸ್ ಕೆಟ್ಟು ನಿಂತರೆ, ಫ್ಲೈ ಓವರ್ ಮೇಲೆ ಸಂಚಾರ ಬಂದ್ ಆಗುತ್ತದೆ ಎಂದು ಹೇಳಿದರು.
ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿತ್ತು ಎಂದು ಬಿಜೆಪಿಯವರು ಆರೋಪ ಮಾಡುತ್ತಿರುತ್ತಾರೆ. ನನ್ನ ಸೋಲಿಗೆ ಸಾವರಕರ್ ಹಾಗೂ ಡಾಂಗೆ ಕಾರಣ ಎಂದು 1952ರ ಜನೆವರಿ 18ರಂದು ತಮ್ಮ ಸ್ನೇಹಿತ ಕಮಲಕಾಂತ ಅವರಿಗೆ ಬರೆದ ಪತ್ರದಲ್ಲಿ ಸ್ವತಃ ಅಂಬೇಡ್ಕರ್ ಅವರೇ ಉಲ್ಲೇಖಿಸಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲವಾಗಿದ್ದರೆ ಸಂವಿಧಾನ ರಚನೆ ಮಾಡಲು ಸಾಧ್ಯವೇ ಇರಲಿಲ್ಲ ಎಂದು ಸಹ ಅಂಬೇಡ್ಕರ್ ಹೇಳಿದ್ದರು ಎಂದರು.
ಗಾಂಧೀಯವರಿಗೆ ಮಹಾತ್ಮ, ಬೋಸ್ ಅವರಿಗೆ ನೇತಾಜಿ ಎಂದು ಬಿರುದು ಕೊಟ್ಟವರು ಜನರು. ಸಾವರಕರ ಅವರಿಗೆ ವೀರ ಎಂದು ಬಿರುದು ಕೊಟ್ಟವರು ಯಾರು ಎಂದು ಬಿಜೆಪಿಯವರನ್ನು ಕೇಳಿ ನೋಡಿ. ಸ್ವಯಂ ಘೊಷಿತ ವೀರ ಅವರು. ಅಂಡಮಾನ್ ನಿಕೋಬಾರ್ ಜೈಲಿಯಲ್ಲಿ ಸೆರೆವಾಸದಲ್ಲಿದ್ದ ಸಾವಿರಾರು ಜನರಲ್ಲಿ ಸಾವರಕರ ಸೇರಿ ಮೂವರು ಮಾತ್ರ ಕ್ಷಮಾಪಣೆ ಪತ್ರ ಬರೆದುಕೊಟ್ಟವರು ಎಂದು ಹೇಳಿದರು.
ಸದನದಲ್ಲಿ ದೊಡ್ಡ ಧ್ವನಿ
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಪ್ರಿಯಾಂಕ ಖರ್ಗೆ ಅವರು ಸದನದಲ್ಲಿ ಕಾಂಗ್ರೆಸ್ ಪಕ್ಷದ ದೊಡ್ಡ ಧ್ವನಿಯಾಗಿದ್ದಾರೆ. ರಾಜಕೀಯ ಪ್ರಜ್ಞೆಯುಳ್ಳ ಅವರು ವಿರೋಧ ಪಕ್ಷಗಳಿಗೆ ತಕ್ಕ ಉತ್ತರ ನೀಡುವ ಸಾಮರ್ಥ್ಯವುಳ್ಳವರು ಎಂದು ಹೇಳಿದರು.
ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಂಸದ ಐ.ಜಿ. ಸನದಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ರಾಜಶೇಖರ ಕಮತಿ, ಅಲ್ತಾಫ್ ಹಳ್ಳೂರ, ಅನಿಲಕುಮಾರ ಪಾಟೀಲ, ಅನ್ವರ ಮುಧೋಳ, ವಸಂತ ಲದವಾ, ಪಾರಸಮಲ್ ಜೈನ್, ಇತರರು ಇದ್ದರು.