

ದಾವಣಗೆರೆ: ನವೀಕೃತ ಖಾಸಗಿ ಬಸ್ ನಿಲ್ದಾಣವನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಭಾರತ್ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು.
ಪಕ್ಷದ ಜಿಲ್ಲಾ ಕಚೇರಿಯಿಂದ ಮೆರವಣಿಗೆ ನಡೆಸಿ, ಬಸ್ ನಿಲ್ದಾಣ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ನವೀಕೃತ ಬಸ್ ನಿಲ್ದಾಣದಲ್ಲಿ 10 ಬಸ್‌ಗಳು ಕೂಡ ನಿಲ್ಲಲು ಅವಕಾಶವಿಲ್ಲವಾಗಿದೆ. ನಿತ್ಯ 100ಕ್ಕೂ ಹೆಚ್ಚು ಬಸ್‌ಗಳು ಈ ನಿಲ್ದಾಣಕ್ಕೆ ಬಂದು ಹೋಗಲಿವೆ. ಆದರೆ ಬಸ್‌ಗಳು ಬಂದು ಹೋಗಲು, ತೊಂದರೆಯಾಗಲಿದೆ. ನಿಲ್ದಾಣ ಎದುರೇ ಪಿಬಿ ರಸ್ತೆ ಇರುವ ಕಾರಣಕ್ಕೆ ಬಸ್‌ಗಳು ಒಳಹೋಗಲು, ಹೊರಬರುವ ವೇಳೆ ಸಂಚಾರ ದಟ್ಟಣೆ ಆಗಲಿದೆ ಎಂದು ಪ್ರತಿಭಟನಾನಿರತರು ಆಕ್ಷೇಪಿಸಿದರು.
ದಾವಣಗೆರೆ ಮಹಾನಗರದ ಈ ನೂತನ ಬಸ್ ನಿಲ್ದಾಣಕ್ಕೆ ಪ್ರತಿದಿನ 100ಕ್ಕೂ ಹೆಚ್ಚು ಪ್ರಯಾಣಿಕರ ಬಸ್‌ಗಳು ಬಂದು ಹೋಗುವುದರಿಂದ, ಈಗ ನಿರ್ಮಿಸಿರುವ ಬಸ್ ನಿಲ್ದಾಣವನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದರಿಂದ ಬಸ್‌ಗಳು ಬಂದು ಹೋಗಲು ತುಂಬಾ ತೊಂದರೆಯಾಗುತ್ತದೆ. ಬಸ್ ನಿಲ್ದಾಣದ ಮುಂದೆ ಮುಖ್ಯ ರಸ್ತೆ ಇರುವುದರಿಂದ ಬಸ್‌ಗಳು ಒಳಹೋಗುವ ಹಾಗೂ ಹೊರಬರುವುದರಿಂದ ಸಂಚಾರ ದಟ್ಟಣಿ ಉಂಟಾಗಿ ಜನರಿಗೆ ಮತ್ತು ವಾಹನಗಳಿಗೂ ತೊಂದರೆಯಾಗುತ್ತದೆ.
ಬಸ್ ನಿಲ್ದಾಣದ ನಿರ್ಮಾಣ ಸಂದರ್ಭದಲ್ಲಿ ರಸ್ತೆ ಮಾರ್ಗವಾಗಿ ಸುಮಾರು 20 ಅಡಿ ಎತ್ತರದ ಜಂಕ್ ಶೀಟ್‌ಗಳನ್ನು ಅಡ್ಡಗಟ್ಟಿದ್ದರಿಂದ ನಿಲ್ದಾಣ ನಿರ್ಮಾಣದ ರೂಪರೇಷೆ ಸಾರ್ವಜನಿಕರಿಗೆ ತಿಳಿಯದಂತಾಗಿದೆ. ಕೂಡಲೇ ಇದನ್ನು ನಗರ ಸಾರಿಗೆ ಬಸ್ ನಿಲ್ದಾಣವನ್ನಾಗಿ ಪರಿವರ್ತಿಸಬೇಕು. ನಗರದಲ್ಲಿ ಬೇರೊಂದು ಸೂಕ್ತ ಜಾಗ ಗುರುತಿಸಿ ವಿಶಾಲ ಬಸ್ ನಿಲ್ದಾಣ ನಿರ್ಮಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಮಂಡಳಿ ಕಾರ್ಯದರ್ಶಿ ಆವರಗೆರೆ ಚಂದ್ರು, ಸಹ ಕಾರ್ಯದರ್ಶಿ ಆವರಗೆರೆ ವಾಸು, ಟಿ.ಎಸ್. ನಾಗರಾಜ್, ಐರಣಿ ಚಂದ್ರು, ಚಿನ್ನಪ್ಪ, ಚಮನ್‌ಸಾಬ್, ಗದಿಗೇಶ್, ಕೃಷ್ಣಪ್ಪ, ನರೇಗಾ ರಂಗನಾಥ್, ಯರಗುಂಟೆ ಸುರೇಶ್ ಇತರರಿದ್ದರು.