

ತೀರ್ಥಹಳ್ಳಿ: ರಸಗೊಬ್ಬರದ ಬೆಲೆ ಏರಿಕೆ ಖಂಡಿಸಿ ಸೋಮವಾರ ತಾಲೂಕು ಯುವ ಕಾಂಗ್ರೆಸ್‌ನಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್ ಮಾತನಾಡಿ, ರೈತರು ಸಂಕಷ್ಟದಲ್ಲಿರುವ ಕಾಲಘಟ್ಟದಲ್ಲಿ ಕೇಂದ್ರ ಸರ್ಕಾರ ಅವೈಜ್ಞಾನಿಕವಾಗಿ ರಸಗೊಬ್ಬರದ ಬೆಲೆ ಏರಿಕೆ ಮಾಡಿ ಗಾಯದ ಬರೆ ಎಳೆದಿದೆ. ಮಳೆ ಅನಿಶ್ಚಿತತೆ, ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಬೆಳೆಹಾನಿ, ಕೃಷಿ ಉತ್ಪನ್ನಗಳ ಧಾರಣೆಯಲ್ಲಿ ಏರಿಳಿತ ಮುಂತಾದ ಕಾರಣಗಳಿಂದ ರೈತರ ಆತ್ಮಹತ್ಯೆಗಳು ನಡೆಯುತ್ತಿವೆ. ಕೇಂದ್ರ ಸರ್ಕಾರ ರಸಗೊಬ್ಬರದ ಬೆಲೆ ಏರಿಕೆ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಶ್ರೇಯಸ್ ರಾವ್, ಪ್ರಧಾನ ಕಾರ್ಯದರ್ಶಿ ಅಶ್ವಲ್ ಗೌಡ, ಪೂರ್ಣೇಶ್, ಫಣಿರಾಜ್, ಎಂ.ನವೀನ್ ಕುಮಾರ್, ಕಿಟ್ಟಪ್ಪ ಮಾಸ್ಟರ್, ಮಂಜುನಾಥ ಶೆಟ್ಟಿ, ಮಹೇಂದ್ರ ಕೆಳಕೆರೆ, ಸುಭಾಷ್ ಕುಲಾಲ್, ಆಸಿಫ್ ಮತ್ತಿತರರಿದ್ದರು.