

ತುಮಕೂರು: ಜಿಲ್ಲಾ ಪಂಚಾಯಿತಿ ಅಧ್ಯಕ್ಷ್ಷೆ ಎಂ.ಲತಾ ವಿರುದ್ಧ ಸದಸ್ಯರು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ,
ಮಂಗಳವಾರ ಜಿಪಂ ಸಭಾಂಗಣದಲ್ಲಿ ಅವಿಶ್ವಾಸ ನಿರ್ಣಯದ ಮುಂದುವರಿದ ಸಭೆ ಕೂಡ ಕೋರಂ ಕೊರತೆಯಿಂದ ರದ್ದಾದ ಹಿನ್ನೆಲೆಯಲ್ಲಿ ಅವಿಶ್ವಾಸ ಮತ ನಿರ್ಣಯ ತಿರಸ್ಕರಿಸಲಾಗಿದೆ ಎಂದು ಆರ್‌ಡಿಪಿಆರ್ ಇಲಾಖೆ ಪ್ರಾದೇಶಿಕ ಆಯುಕ್ತ ನವೀನ್‌ರಾಜ್‌ಸಿಂಗ್ ಘೋಷಿಸಿದರು.
ನವೀನ್‌ರಾಜ್‌ಸಿಂಗ್ ನೇತೃತ್ವದಲ್ಲಿ ಬೆಳಗ್ಗೆ 11ಕ್ಕೆ ಆರಂಭವಾದ ಸಭೆ ಕೋರಂ ಕೊರತೆಯಿಂದ ಆರಂಭವಾಗಲೇ ಇಲ್ಲ. ಅನಿವಾರ್ಯವಾಗಿ ಸಭೆ ಮುಗಿಸುವುದಾಗಿ ಘೋಷಿಸಿದಾಗ ಮತ್ತೊಂದು ಅವಕಾಶ ನೀಡುವಂತೆ ಸದಸ್ಯ ಮಹಾಲಿಂಗಪ್ಪ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಅವಿಶ್ವಾಸ ನಿರ್ಣಯ ಸಾಬೀತುಪಡಿಸಲು ಎರಡು ಅವಕಾಶ ನೀಡಿದರೂ ಸದಸ್ಯರು ಸಭೆಗೆ ಹಾಜರಾಗಿ ಮತ ಚಲಾಯಿಸಿಲ್ಲ. ಹಾಗಾಗಿ, ಮತ್ತೆ ಅವಕಾಶವಿಲ್ಲದಂತೆ ನಿರ್ಣಯ ತಿರಸ್ಕರಿಸಲಾಯಿತು. ಕಾಂಗ್ರೆಸ್ ಸದಸ್ಯರು ಸಭೆಗೆ ಹಾಜರಾಗದಂತೆ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ವಿಪ್ ನೀಡಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಯಾವ ಸದಸ್ಯರೂ ಸಭೆಗೆ ಹಾಜರಾಗಲಿಲ್ಲ.
ಕೆಂಚಮಾರಯ್ಯ ಹಾಗೂ ವೈ.ಸಿ.ಸಿದ್ದರಾಮಯ್ಯ ಜಿಪಂ ಅಂಗಳದಲ್ಲಿ ಕಾಣಿಸಿಕೊಂಡರು. ಆದರೆ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ ಸಭೆಗೆ ಕಡ್ಡಾಯವಾಗಿ ಹಾಜರಾಗಿ ಅವಿಶ್ವಾಸ ನಿರ್ಣಯದ ಪರವಾಗಿ ಮತಹಾಕಬೇಕು ಎಂದು ನೀಡಿದ್ದ ವಿಪ್‌ಗೂ ಜಗ್ಗದ ಬಿಜೆಪಿ ಸದಸ್ಯರು ಸಭೆಗೆ ಹಾಜರಾಗಲಿಲ್ಲ, ಸುರೇಶ್‌ಗೌಡ ಆಪ್ತ ವಲಯದಲ್ಲಿರುವ ಉಪಾಧ್ಯಕ್ಷೆ ಶಾರದಾ ಕೂಡ ಸಭೆಗೆ ಬರಲಿಲ್ಲ.
ಸಭೆ ಮುಕ್ತಾಯದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ಸದಸ್ಯ ಮಹಾಲಿಂಗಪ್ಪ, ಕೆಲವು ಸದಸ್ಯರಿಗೆ ಚೆಕ್ ಮೂಲಕ ಹಣ ನೀಡಿ ಕೊಂಡುಕೊಳ್ಳಲಾಗಿದೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿ ಕುದುರೆ ವ್ಯಾಪಾರ ನಡೆದಿದ್ದು ಈ ಬಗ್ಗೆ ದಾಖಲೆಗಳನ್ನು ನೀಡುತ್ತೇನೆ, ಸರ್ಕಾರ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ಕೆಲವು ತಿಂಗಳಿನಿಂದ ಅಧ್ಯಕ್ಷೆ ಎಂ.ಲತಾ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಪ್ರಹಸನಕ್ಕೆ ತೆರೆ ಬಿದ್ದಂತಾಗಿದೆ. ಜೆಡಿಎಸ್ ಪಕ್ಷದಿಂದ ಗೆದ್ದು ಸದಸ್ಯೆಯಾಗಿರುವ ಲತಾ ಈಗಾಗಲೇ ಕಾಂಗ್ರೆಸ್ ಸೇರಿರುವುದಾಗಿ ಘೋಷಿಸಿಕೊಂಡಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಯದೇ ಜಿಪಂ ಅಧಿಕಾರ ಕಾಂಗ್ರೆಸ್ ಪಾಲಾಗಿದೆ.
ಸುರೇಶ್‌ಗೌಡ ಸೂಚನೆಗೂ ಜಗ್ಗಲಿಲ್ಲ : ಜಿಪಂ ಅಧ್ಯಕ್ಷೆ ವಿರುದ್ಧ ಮಂಡನೆಯಾಗಿರುವ ಅವಿಶ್ವಾಸ ನಿರ್ಣಯ ಸಭೆಯಲ್ಲಿ ಕಡ್ಡಾಯವಾಗಿ ಹಾಜರಿದ್ದು ನಿರ್ಣಯದ ಪರವಾಗಿ ಮತ ಚಲಾಯಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ ತಮ್ಮ ಪಕ್ಷದ ಸದಸ್ಯರಿಗೆ ನೀಡಿದ್ದ ವಿಪ್‌ಗೆ ಸದಸ್ಯರು ಮನ್ನಣೆ ನೀಡಲಿಲ್ಲ, ಸಭೆಯಲ್ಲಿ ಬಿಜೆಪಿಯ ಬಹುತೇಕ ಸದಸ್ಯರು ಗೈರು ಹಾಜರಾಗಿ ಅಧ್ಯಕ್ಷೆ ಪರವಾದ ನಿಲುವು ತೆಗೆದುಕೊಂಡರು. ಬಿಜೆಪಿ ಸದಸ್ಯರಾದ ಮಹಾಲಿಂಗಪ್ಪ, ಯಶೋದಾ, ನರಸಿಂಹಮೂರ್ತಿ, ಜೆಡಿಎಸ್‌ನ ರಾಮಚಂದ್ರಪ್ಪ ಹಾಗೂ ರಾಮಕೃಷ್ಣ ಮಾತ್ರ ಸಭೆಯಲ್ಲಿ ಕಾಣಿಸಿಕೊಂಡರು.
ನನ್ನ ವಿರುದ್ಧದ ಅವಿಶ್ವಾಸ ನಿರ್ಣಯದ ವಿರುದ್ಧ ನನ್ನ ಗೆಲುವಿಗೆ ಸಹಕಾರ ನೀಡಿದ ಎಲ್ಲ ಸದಸ್ಯರು, ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಉಳಿದಿರುವ ಸಮಯದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಎಂ.ಲತಾ ಜಿಪಂ ಅಧ್ಯಕ್ಷೆ