ಅವಿರೋಧ ಆಯ್ಕೆಯಾಗುವ ಗ್ರಾಪಂಗೆ ₹ 1 ಲಕ್ಷ ಬಹುಮಾನ

Dr. Shailendra beldale
Published on

ಬೀದರ್: ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗುವ ಗ್ರಾಮ ಪಂಚಾಯಿತಿಗೆ ವೈಯಕ್ತಿಕವಾಗಿ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ (ಕೆಎಸ್ಐಐಡಿ) ನಿಗಮದ ಅಧ್ಯಕ್ಷರಾದ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಘೋಷಿಸಿದ್ದಾರೆ.

ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದ ಬಗದಲ್ ಗ್ರಾಮದಲ್ಲಿ ಶುಕ್ರವಾರ ಗ್ರಾಪಂ ಚುನಾವಣೆ ನಿಮಿತ್ತ ಬಿಜೆಪಿ ಹಮ್ಮಿಕೊಂಡ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ಒಂದು ಗ್ರಾಪಂನ ಎಲ್ಲ ಸ್ಥಾನಗಳಲ್ಲಿ ಅವಿರೋಧ ಆಯ್ಕೆ ನಡೆಯಬೇಕು. ಅಂಥ ಗ್ರಾಪಂಗೆ ರು.1 ಲಕ್ಷ ಬಹುಮಾನ ನೀಡುವೆ. ಅವಿರೋಧ ಆಯ್ಕೆಯಾಗುವ ಪಂಚಾಯಿತಿಗಳಿಗೆ ಸರ್ಕಾರ ಸಹ 50 ಲಕ್ಷ ರೂ. ಅನುದಾನ ನೀಡುವ ಘೋಷಣೆ ಮಾಡಿದೆ. ಹೀಗಾಗಿ ಅವಿರೋಧ ಆಯ್ಕೆಗೆ ಆದ್ಯತೆ ನೀಡಿ ಹಳ್ಳಿಗಳನ್ನು ಅಭಿವೃದ್ಧಿಪಡಿಸಿ ಎಂದು ಸಲಹೆ ನೀಡಿದರು.

ಗ್ರಾಪಂ ಚುನಾವಣೆ ಅತಿ ಮುಖ್ಯ. ಪಕ್ಷದ ಸಂಘಟನೆ ತಳಮಟ್ಟದಿಂದ ಬಲಪಡಿಸಲು ಹಾಗೂ ಮುಂದಿನ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಧ್ವಜ ಹಾರಿಸಲು ಇದು ಸೂಕ್ತ ವೇದಿಕೆ. ಹೀಗಾಗಿ ಪಕ್ಷದ ಮುಖಂಡರು, ಪದಾಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡಿ ತಮ್ಮ ತಮ್ಮ ಅಭ್ಯರ್ಥಿಗಳು, ನಿಷ್ಠಾವಂತ ಕಾರ್ಯಕರ್ತರನ್ನು ಕಣಕ್ಕಿಳಿಸಿ ಗೆಲ್ಲಿಸಲು ಶ್ರಮಿಸಬೇಕು. ಸಂಘಟಿತರಾಗಿ ಚುನಾವಣೆ ಎದುರಿಸಿ ಎಲ್ಲ ಗ್ರಾಪಂಗಳಲ್ಲೂ ಪಕ್ಷದ ಬೆಂಬಲಿತರು ಆಡಳಿತಕ್ಕೆ ಬರುವಂತೆ ನೋಡಿಕೊಳ್ಳಬೇಕು ಎಂದರು.

ಬೀದರ್ ದಕ್ಷಿಣ ಮಂಡಲ ಅಧ್ಯಕ್ಷ ರಾಜರೆಡ್ಡಿ ಶಾಬಾದ್, ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಪಾಟೀಲ್ ಸಿರಕಟನಳ್ಳಿ, ಪ್ರಮುಖರಾದ ಚಂದ್ರಯ್ಯ ಸ್ವಾಮಿ, ಧನರಾಜ, ಸುರೇಶ ಮಾಶೆಟ್ಟಿ, ರಾಜು ವಡ್ಡಿ, ಗುರುನಾಥ ಬಗದಲ್, ಘಾಳೆಪ್ಪ ಚಟ್ನಳ್ಳಿ, ರವಿ ಖಾಶೆಂಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net