ಅವಸರದ ಸಮೀಕ್ಷೆಯಿಂದ ನ್ಯಾಯ ಸಿಗದು

Pressmeet
Published on

ಚಿತ್ರದುರ್ಗ: ಅಲೆಮಾರಿ, ಅರೆ ಅಲೆಮಾರಿ ಸಮುದಾಯದವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ನೋಡಿ ಸಮೀಕ್ಷೆ ನಡೆಸಬೇಕು. ಅವಸರದಿಂದ ನಡೆದರೆ, ಸಾಮಾಜಿಕ ನ್ಯಾಯ ಸಿಗದು ಎಂದು ರಾಜ್ಯ ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯಗಳ ಒಕ್ಕೂಟದ ಗೌರವಾಧ್ಯಕ್ಷ ಕೆ. ರವೀಂದ್ರಶೆಟ್ಟಿ ಉಳಿದೊಟ್ಟು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜು. 28ರಿಂದ ಆ. 2ರವರೆಗೆ ಸಮುದಾಯದ ಸಮೀಕ್ಷೆ ನಡೆಸಿದರೆ, ಪರಿಪೂರ್ಣ ಮಾಹಿತಿ ಸಿಗುವುದಿಲ್ಲ. ಕನಿಷ್ಠ ಒಂದು ತಿಂಗಳಾದರೂ ಕೈಗೊಳ್ಳಬೇಕು. ಅತ್ಯಂತ ಶೋಚನೀಯ ಸ್ಥಿತಿಯಲ್ಲಿರುವ ಸಮುದಾಯಕ್ಕೆ ನ್ಯಾಯ ಸಿಗಬೇಕು ಎಂದರು.

ನಮ್ಮಲ್ಲಿ ಒಟ್ಟು 46 ಜಾತಿಗಳಿವೆ. ಸಮಾಜದ ಮುಖ್ಯವಾಹಿನಿಗೆ ಬಂದು ಸ್ವಾಭಿಮಾನದ ಬದುಕು ನಡೆಸುವ ಅಗತ್ಯವಿದ್ದು, ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಅನೇಕ ಬಾರಿ ಪ್ರತಿಭಟನೆ ನಡೆಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ ಎಂದು ಬೇಸರಿಸಿದರು.

ರಾಜ್ಯದಲ್ಲಿ 90 ಲಕ್ಷದಷ್ಟು ಜನಸಂಖ್ಯೆ ಇದ್ದು, ಈ ನಿಖರ ಮಾಹಿತಿ ರಾಜ್ಯ ಸರ್ಕಾರ ಪಡೆಯಲು ಪ್ರತಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮೀಣ ಭಾಗಗಳಿಗೆ ಅಧಿಕಾರಿಗಳು ತೆರಳಿ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಓ. ಪ್ರತಾಪ್‌ಜೋಗಿ ಮಾತನಾಡಿ, ಶಿಕ್ಷಣದಿಂದ ಸಮುದಾಯದವರು ವಂಚಿತರಾಗಿದ್ದಾರೆ. ಪಾಲಕರಿಲ್ಲದ ಗೋಸಾಯಿ ಸಮುದಾಯದ ವಿದ್ಯಾರ್ಥಿಯೊಬ್ಬನಿಗೆ ಹೊಳಲ್ಕೆರೆಯ ಅಲೆಮಾರಿ ಮತ್ತು ಅರೆಅಲೆಮಾರಿ ವಸತಿ ಶಾಲೆಯಲ್ಲಿ ಪ್ರವೇಶ ನೀಡುತ್ತಿಲ್ಲ. ಈ ಸಂಬಂಧ ಎಸಿಗೂ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್. ಲಕ್ಷ್ಮೀಕಾಂತ್, ಮಂಜುಳಾ, ರಾಮುಗೋಸಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net