

ಹುಣಸೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಅಲಿಮ್‌ಕೋ(ಎಎಲ್‌ಐಎಂಸಿಒ) ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ತಾಲೂಕಿನ 258ಕ್ಕೂ ಹೆಚ್ಚು ಅಂಗವಿಕಲ ಮಕ್ಕಳು ತಪಾಸಣೆಗೊಳಪಟ್ಟರು.
ನಗರದ ಗುರುಭವನದಲ್ಲಿ ಶುಕ್ರವಾರ ಸಮನ್ವಯ ಶಿಕ್ಷಣ ಯೋಜನೆಯಡಿ ಆಯೋಜಿಸಿದ್ದ ಶಿಬಿರದಲ್ಲಿ ಅಂಗವಿಕಲ ಮಕ್ಕಳಿಗೆ ತಪಾಸಣೆಯೊಂದಿಗೆ ಅಗತ್ಯ ಸಾಧನ ಸಲಕರಣೆಗಳನ್ನು ವಿತರಿಸಲು ಕ್ರಮವಹಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್ ಮಾತನಾಡಿ, ತಾಲೂಕಿನಲ್ಲಿ ಒಟ್ಟು 409 ಅಂಗವಿಕಲ ಮಕ್ಕಳನ್ನು ಗುರುತಿಸಲಾಗಿದೆ. 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಸಾಧನ ಸಲಕರಣೆಗಳ ಅವಶ್ಯಕತೆ ಹೊಂದಿರುವ ಮಕ್ಕಳಿಗೆ ಉಚಿತವಾಗಿ ನೀಡಲಾಗುವುದು. ದೈಹಿಕ ಅಥವಾ ಮಾನಸಿಕ ದೌರ್ಬಲ್ಯವನ್ನು ಹೊಂದಿರುವ ಮಕ್ಕಳಿಗೆ ಪಾಲಕರು ಮತ್ತು ಸಮಾಜ ಕರುಣೆ ತೋರುವುದಕ್ಕಿಂತಲೂ ಹೆಚ್ಚಾಗಿ ಅವಕಾಶಗ ಮತ್ತು ಅನುಕೂಲ ಒದಗಿಸಿಕೊಡಬೇಕಾದ ಅಗತ್ಯವಿದೆ ಎಂದರು.
ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ(ಬಿಐಇಆರ್‌ಟಿ)ತ್ರಿನೇಶ್ ಮಾಹಿತಿ ನೀಡಿ, 409 ವಿದ್ಯಾರ್ಥಿಗಳ ಪೈಕಿ ಪಾರ್ಶ್ವವಾಯು ಪೀಡಿತರು, ಬುದ್ಧಿಮಾಂದ್ಯತೆ, ಬಹುವಿಕಲತೆ, ಶ್ರವಣದೋಷ, ದೈಹಿಕ ದೋಷ ಮತ್ತು ಪೂರ್ಣಅಂಧತ್ವ ಹೊಂದಿರುವ 248 ವಿದ್ಯಾರ್ಥಿಗಳಿಗೆ ನಗರದ ಸಾರ್ವಜನಿಕ ಆಸ್ಪತ್ರೆ, ರಾಷ್ಟ್ರೀಯ ಬಾಲಸ್ವಾಸ್ಥ್ಯ ಯೋಜನೆ(ಆರ್‌ಬಿಎಸ್‌ಕೆ) ಜೆಎಸ್‌ಎಸ್ ಆಸ್ಪತ್ರೆ ಮತ್ತು ಮೈಸೂರು ಮೇಟಗಳ್ಳಿಯ ಶ್ರವಣದೋಷ ಆಸ್ಪತ್ರೆ ಸಹಕಾರದೊಂದಿಗೆ ತಪಾಸಣೆ ನಡೆಸಲಾಗುತ್ತಿದೆ. ಅಲ್ಲದೆ ಅಲಿಮ್‌ಕೋ ಸಂಸ್ಥೆ ಅಗತ್ಯ ಸಲಕರಣೆಗಳನ್ನು ಉಚಿತವಾಗಿ ಒದಗಿಸಲಿದೆ ಎಂದರು.
ಶಿಬಿರದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮಹದೇವಸ್ವಾಮಿ, ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಕಣ್ಣಿನ ತಜ್ಞ ಡಾ.ಶಿವಪ್ರಸಾದ್, ಬಿಐಇಆರ್‌ಟಿಗಳಾದ ಪ್ರಭಾಕರ್, ಸೋಮಶೇಖರ್,ವೀರಭದ್ರಪ್ಪ ಹಾಜರಿದ್ದರು.