

ಹುಬ್ಬಳ್ಳಿ/ಧಾರವಾಡ: ಜನತಾ ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಬುಧವಾರ ಅವಳಿ ನಗರದಲ್ಲಿ ಬೆಳಗ್ಗೆ 6 ಗಂಟೆಯಿಂದ 10ರವರೆಗೆ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರು. ಜಿಲ್ಲಾಡಳಿತ ನಿಗದಿಪಡಿಸಿದ ಸಮಯ ಮುಗಿಯುತ್ತಿದ್ದಂತೆ ನಗರದಲ್ಲಿ ವಾಹನಗಳ ಸಂಚಾರ ಕಡಿಮೆಯಾಯಿತು. ಬುಧವಾರ ಬೆಳಗ್ಗೆಯೇ ಮಾರುಕಟ್ಟೆಗಳಿಗೆ ಆಗಮಿಸಿದ್ದ ಜನರು ತರಕಾರಿ, ಹಣ್ಣು, ಹೂವುಗಳ ಖರೀದಿಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲೂ ಕೆಲವರು ಮಾಸ್ಕ್ ಧರಿಸದೆ ಆಗಮಿಸಿದ್ದು ಸಾಮಾನ್ಯವಾಗಿತ್ತು. 9.30ರಿಂದಲೇ ಪೊಲೀಸರು ಮಾರುಕಟ್ಟೆಯಿಂದ ತೆರಳುವಂತೆ ಜನರಿಗೆ ಹಾಗೂ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಲು ಆರಂಭಿಸಿದ್ದರಿಂದ ಒಂದು ಗಂಟೆಯಲ್ಲಿ ಇಡೀ ಮಾರುಕಟ್ಟೆ ಖಾಲಿಯಾಗಿತ್ತು.
ಹುಬ್ಬಳ್ಳಿ ನಗರದ ಚನ್ನಮ್ಮ ವೃತ್ತ, ರೈಲ್ವೆ ನಿಲ್ದಾಣದ ಮುಂಭಾಗ, ಸಂಗೊಳ್ಳಿ ರಾಯಣ್ಣ, ಮರಾಠ ಗಲ್ಲಿ, ಧಾರವಾಡದ ವಿವಿಧೆಡೆ ಪೊಲೀಸರ ಸರ್ಪಗಾವಲಿತ್ತು. ವಾಹನಗಳನ್ನು ಅಲ್ಲಲ್ಲಿ ತಪಾಸಣೆ ನಡೆಸಿ, ಮಾಸ್ಕ್ ಧರಿಸುವಂತೆ ತಿಳಿ ಹೇಳಿದರು.
ಲಾಠಿ ರುಚಿ: 10 ಗಂಟೆಗೆ ಬಳಿಕ ಪೊಲೀಸರು ಅವಳಿ ನಗರದ ವಿವಿಧ ಕಡೆಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿ ವಾಹನಗಳ ತಪಾಸಣೆ ನಡೆಸಿದರು. ಅಗತ್ಯ ಕಾರ್ಯಗಳಿಗೆ ಓಡಾಟ ನಡೆಸುತ್ತಿರುವವರಿಗೆ ಸುಮ್ಮನೆ ಬಿಟ್ಟರೆ, ಅನಗತ್ಯ ಸಂಚಾರ ನಡೆಸುತ್ತಿರುವ ಜನರಿಗೆ ತಕ್ಕಪಾಠ ಕಲಿಸಿದರು.
ತವರಿಗೆ ಮರಳಿದ ಜನರು: 14 ದಿನಗಳವರೆಗೆ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡುವುದರಿಂದ ವಾಣಿಜ್ಯ ನಗರಿ ಸ್ತಬ್ಧವಾಗಿತ್ತು. ಬೇರೆ ಜಿಲ್ಲೆಗಳಿಂದ ಹುಬ್ಬಳ್ಳಿ ನಗರಕ್ಕೆ ಆಗಮಿಸಿದ್ದ ವಲಸಿಗರು, ಸಾಮಗ್ರಿಗಳ ಸಮೇತ ತಮ್ಮ ಊರಿಗೆ ಮರಳಿದರು. ಕೆಲವರು ರೈಲ್ವೆ ಮೂಲಕ ನಗರಕ್ಕೆ ಆಗಮಿಸಿದ್ದರು. ಅವರಿಗೆ ವಾಹನ, ಆಟೋ ಸಿಗದೇ ಇರುವುದರಿಂದ ತಮ್ಮ ಮನೆಗೆ ತೆರಳಲು ಪರದಾಡಿದರು. ಕೆಲ ಯುವಕರು ಅಗತ್ಯ ವಸ್ತು ಸಾಗಣೆಯ ಲಾರಿಗಳಲ್ಲಿ ಪ್ರಯಾಣಿಸಿದರು.
ಧಾರವಾಡ ಎಪಿಎಂಸಿಯಲ್ಲಿ ಸೂಕ್ತ ವ್ಯವಸ್ಥೆ
ಧಾರವಾಡ ಕೃಷಿ ಮಾರುಕಟ್ಟೆಯಲ್ಲಿ ಕಳೆದ ಕೆಲ ದಿನಗಳಿಂದ ಜಾತ್ರೆ ರೀತಿ ವ್ಯಾಪಾರ ನಡೆಸಲಾಗುತ್ತಿತ್ತು. ಹೀಗಾಗಿ ಮಾರುಕಟ್ಟೆಗೆ ಭೇಟಿ ನೀಡಿದ್ದ ಪಾಲಿಕೆ ಆಯುಕ್ತರು, ಪೊಲೀಸ್ ಅಧಿಕಾರಿಗಳು, ಸರ್ಕಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ವ್ಯಾಪಾರ-ವಹಿವಾಟು ನಡೆಸಬೇಕು ಎಂದು ಎಚ್ಚರಿಕೆ ನೀಡಿದ್ದರು. ಹೀಗಾಗಿ ಬುಧವಾರ ಬೆಳಗ್ಗೆಯಿಂದ ಸೂಕ್ತ ರೀತಿ ವ್ಯಾಪಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಬಸ್ಕಿ ಹೊಡೆಸಿದ ಪೊಲೀಸರು
ಜನತಾ ಕರ್ಫ್ಯೂ ವಿಧಿಸಿದ್ದರೂ ಧಾರವಾಡದಲ್ಲಿ ಕೆಲವರು ಬೈಕ್ ಮೇಲೆ ನಗರ ಸುತ್ತಾಟ ನಡೆಸಿದ್ದರು. ಇಂಥವರನ್ನು ತಡೆದು ವಿಚಾರಿಸಿದ ಪೊಲೀಸರು ಬಸ್ಕಿ ಹೊಡೆಸಿ, ಮನೆಯಿಂದ ಹೊರ ಬರದಂತೆ ತಿಳಿವಳಿಕೆ ಹೇಳುವ ಕೆಲಸ ಮಾಡುತ್ತಿದ್ದರು.
ತರಕಾರಿ ಮಾರ್ಕೆಟ್ನಲ್ಲಿ ಜನದಟ್ಟಣೆ
ಅಮರಗೋಳ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಬುಧವಾರವೂ ಜನರು ಖರೀದಿಗೆ ಮುಗಿಬಿದ್ದರು. ಪೊಲೀಸರು ಸ್ಥಳದಲ್ಲಿದ್ದು ಎಷ್ಟೇ ತಿಳಿವಳಿಕೆ ಹೇಳಿದರೂ ಜನ ಮಾತ್ರ ಕೆಲವೆಡೆ ಗುಂಪು ಸೇರಿದ್ದರು. ಕೇವಲ ನಾಲ್ಕು ತಾಸು ಅವಕಾಶ ಇದ್ದಿದ್ದರಿಂದ ಖರೀದಿ ಭರಾಟೆ ಜೋರಾಗಿತ್ತು. ಇಕ್ಕಟ್ಟಾಗಿದ್ದ ತರಕಾರಿ ಮಾರುಕಟ್ಟೆಯನ್ನು ಪಕ್ಕದ ರಸ್ತೆಗೆ ಸ್ಥಳಾಂತರ ಮಾಡಲಾಗಿದೆ. ಆದರೂ, ಮೂಲ ಮಾರುಕಟ್ಟೆಯಲ್ಲಿ ದಟ್ಟಣೆ ಕಡಿಮೆಯಾಗುತ್ತಿಲ್ಲ.
ಚಿಲ್ಲರೆ ವ್ಯಾಪಾರ: ತರಕಾರಿ ಮೂಲ ಮಾರುಕಟ್ಟೆಯಲ್ಲಿ ಕೆಲವರು ಸಗಟು ತರಕಾರಿ ಖರೀದಿ ಮಾಡಿಕೊಂಡು ಅಲ್ಲಿಯೇ ಚಿಲ್ಲರೆ ವ್ಯಾಪಾರದಲ್ಲಿ ತೊಡಗುತ್ತಿರುವುದರಿಂದ ಜನದಟ್ಟಣೆ ಹೆಚ್ಚಾಗುತ್ತಿದೆ. ಪಕ್ಕದಲ್ಲಿ ದೊಡ್ಡ ರಸ್ತೆ ಇದೆ. ಅಲ್ಲಿ ಸಾಕಷ್ಟು ಜಾಗ ಇದೆ. ಆದರೂ, ಅದನ್ನು ಬಳಸಿಕೊಳ್ಳದ ಕೆಲ ವ್ಯಾಪಾರಸ್ಥರು ದಟ್ಟಣೆಗೆ ಕಾರಣವಾಗುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಡಿಸಿಪಿ ರಾಮರಾಜನ್ ಅವರು ಇದನ್ನು ಸ್ವತಃ ಗಮನಿಸಿದರು. ಬುಧವಾರ ಬೆಳಗ್ಗೆ ಮಾರ್ಕೆಟ್ ಪರಿಶೀಲನೆಗೆ ಬಂದಿದ್ದ ಅವರು, ನಾಳೆಯಿಂದ ಎಲ್ಲಿಯೂ ದಟ್ಟಣೆ ಉಂಟಾಗದಂತೆ ಕ್ರಮ ವಹಿಸಿ, ವ್ಯಾಪಾರ ಮಾಡುವವರ ಮಧ್ಯೆ ಪರಸ್ಪರ ಅಂತರ ಇರುವಂತೆ ಸ್ಥಳದ ವ್ಯವಸ್ಥೆ ಮಾಡಿ ಎಂದು ಪೊಲೀಸ್ ಹಾಗೂ ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿದರು.
ಲಸಿಕೆ ಪ್ರಕ್ರಿಯೆಗೆ ನೆಟ್ವರ್ಕ್ ಸಮಸ್ಯೆ
ಹುಬ್ಬಳ್ಳಿ: ನೆಟ್ವರ್ಕ್ ಸಮಸ್ಯೆಯಿಂದಾಗಿ ಇಲ್ಲಿನ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಹಾಕುವ ಪ್ರಕ್ರಿಯೆ ಸುಮಾರು ಒಂದು ತಾಸು ತಡವಾಗಿ ಪ್ರಾರಂಭಗೊಂಡಿತು.
ನಿತ್ಯ ಬೆಳಗ್ಗೆ 10 ಗಂಟೆಗೆ ಲಸಿಕೆ ಹಾಕುವ ಪ್ರಕ್ರಿಯೆ ಪ್ರಾರಂಭಗೊಳ್ಳುತ್ತದೆ. ಆದರೆ, ಬುಧವಾರ ಬೆಳಗ್ಗೆ ಲಸಿಕೆ ಹಾಕಿಸಿಕೊಳ್ಳುವವರ ಹೆಸರು ನೋಂದಾಯಿಸುವ ಕಂಪ್ಯೂಟರ್ನಲ್ಲಿ ನೆಟ್ವರ್ಕ್ ಸಮಸ್ಯೆ ಕಂಡುಬಂದಿತು. ಒಂದು ತಾಸು ಆದರೂ ಸಮಸ್ಯೆ ನಿವಾರಣೆಯಾಗಲಿಲ್ಲ. ಹೀಗಾಗಿ ಲಸಿಕೆ ಹಾಕಿಸಿಕೊಳ್ಳಲು ಬಂದವರು ಆಸ್ಪತ್ರೆಯ ಹೊರಗೆ ಕಾಯುತ್ತ ನಿಂತಿರುವುದು ಕಂಡಿತು.
ಕೊನೆಗೆ ಆಸ್ಪತ್ರೆಯ ಸಿಬ್ಬಂದಿ ತಮ್ಮ ಮೊಬೈಲ್ಪೋನ್ಗಳಲ್ಲಿ ಲಸಿಕೆ ಹಾಕುವವರ ಹೆಸರು ನೋಂದಾಯಿಸಿಕೊಂಡು, ಲಸಿಕೆ ಹಾಕುವುದನ್ನು ಮುಂದುವರಿಸಿದರು.
ಒಂದೇ ಹಾಸಿಗೆಯಲ್ಲಿ ಇಬ್ಬರಿಗೆ ವೆಂಟಿಲೇಟರ್?
ಹುಬ್ಬಳ್ಳಿ: ಒಂದೇ ಬೆಡ್ ಮೇಲೆ ಇಬ್ಬರು ಸಾಮಾನ್ಯ ರೋಗಿಗಳಿಗೆ ವೆಂಟಿಲೇಟರ್ ಹಚ್ಚಿ ಚಿಕಿತ್ಸೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದು ಇಲ್ಲಿಯ ಕಿಮ್್ಸ ಹಳೆಯ ಕಟ್ಟಡದ ತುರ್ತು ಚಿಕಿತ್ಸಾ ವಿಭಾಗದಲ್ಲಿ ನಡೆದಿದ್ದು ಎನ್ನಲಾಗುತ್ತಿದೆ.
ಇಬ್ಬರು ರೋಗಿಗಳನ್ನು ಒಂದೇ ಬೆಡ್ ಮೇಲೆ ಮಲಗಿಸಿ ಆಕ್ಸಿಜನ್ ಕಿಟ್ ಹಚ್ಚುವುದು ವೈದ್ಯಕೀಯ ನಿಯಮಗಳ ಪ್ರಕಾರ ಸೂಕ್ತವಾದುದಲ್ಲ ಎಂಬ ಅಭಿಪ್ರಾಯವಿದೆ. ಆದರೆ, ವೈರಲ್ ಆಗಿರುವ ವಿಡಿಯೋ ತುಣುಕಿನ ಕುರಿತು ಪ್ರತಿಕ್ರಿಯಿಸಿರುವ ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ‘ಅದು ನಮ್ಮ ಆಸ್ಪತ್ರೆಯಲ್ಲೇ ನಡೆದ ದೃಶ್ಯವೇ ಅಥವಾ ಬೇರೆ ಯಾವುದೋ ಆಸ್ಪತ್ರೆಯದ್ದೋ ಎನ್ನುವುದು ಖಚಿತವಾಗಿಲ್ಲ. ಪರಿಶೀಲನೆ ನಡೆಸಲಾಗುತ್ತಿದೆ’ ಎಂದಿದ್ದಾರೆ.
ಹೆಚ್ಚಿನ ಬೆಲೆಗೆ ಮಾರಿದರೆ ಜೋಕೆ
ಸಂಶಿ: ಕರೊನಾ ಎರಡನೇ ಅಲೆಯಿಂದ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮಗಳ ಕುರಿತಾಗಿ ಬುಧವಾರ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಟಾಸ್ಕ್ಫೋರ್ಸ್ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಪಿಡಿಒ ಹಾಗೂ ಗ್ರಾಪಂ ಸದಸ್ಯರು, ಕರೊನಾ ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆ ಸರ್ಕಾರ 14 ದಿನಗಳ ಜನತಾ ಕರ್ಫ್ಯೂ ಘೊಷಿಸಿದೆ. ಇಂತಹ ಸಂದಿಗ್ಧ ಸಮಯದಲ್ಲಿ ವ್ಯಾಪಾರಸ್ಥರು ಅಗತ್ಯ ದಿನಸಿ ವಸ್ತುಗಳನ್ನು ಯೋಗ್ಯ ಬೆಲೆಗೆ ಮಾರಾಟ ಮಾಡಬೇಕು. ಹೆಚ್ಚಿನ ಹಣ ವಸೂಲಿ ಬಗೆಗೆ ಈಗಾಗಲೇ ಜನರಿಂದ ದೂರು ಕೇಳಿ ಬಂದಿವೆ. ಅಂಥವರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. ಟಾಸ್ಕ್ಫೋರ್ಸ್ ಸಮಿತಿ ರಚಿಸಿದ್ದು, ಕರೊನಾ ನಿಯಂತ್ರಿಸುವಲ್ಲಿ ಸಮಿತಿ ಕಾರ್ಯ ನಿರ್ವಹಿಸಲಿದೆ’ ಎಂದು ಈ ವೇಳೆ ಮಾಹಿತಿ ನೀಡಿದರು. ಗ್ರಾಪಂ ಅಧ್ಯಕ್ಷೆ ಮಂಜುಳಾ ಪಾಳೇದ, ಉಪಾಧ್ಯಕ್ಷ ಶಂಕ್ರಪ್ಪ ಬ್ಯಾಹಟ್ಟಿ ಸದಸ್ಯರಾದ ರಾಜು ಪುಟ್ಟಣ್ಣವರ, ಬಸವರಾಜ ನಾಯ್ಕರ, ಹರೀಶ ಲಕ್ಷ್ಮೇಶ್ವರ, ಫಕೀರೇಶ ಪಶುಪತಿಹಾಳ, ರವಿ ಸಾಳುಂಕೆ, ದೇವಪ್ಪ ಮುರೋಪಂತರ, ರೇಖಾ ಕರಿಶಣ್ಣವರ, ಗಿರೀಶಗೌಡ ಪಾಟೀಲ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು,ಟಾಸ್ಕ್ಫೋರ್ಸ್ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.
ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪೂರೈಕೆ
ಧಾರವಾಡ: ಜಿಲ್ಲೆಯಲ್ಲಿ ಕರೋನಾ ವೈರಸ್ ಹರಡುವಿಕೆ ನಿಯಂತ್ರಿಸಲು ಹಾಗೂ ಕೋವಿಡ್- 19ಕ್ಕೆ ತುತ್ತಾದ ರೋಗಿಗೆ ಸುಲಭ ಮತ್ತು ಅಡೆತಡೆ ಇಲ್ಲದೆ ತುರ್ತಾಗಿ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪೂರೈಕೆ ನಿರಂತರವಾಗಿಸಲು ಜಿಲ್ಲೆಯಲ್ಲಿನ ಖಾಸಗಿ ಆಸ್ಪತ್ರೆಗಳಿಗೆ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪೂರೈಕೆ ವ್ಯವಸ್ಥೆ ನಿಯಂತ್ರಿಸಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ಟಾಸ್ಕಫೋರ್ಸ್ ರಚಿಸಿ ಆದೇಶಿಸಿದ್ದಾರೆ. ಧಾರವಾಡ ವೃತ್ತದ ಔಷಧ ಸಹಾಯಕ ನಿಯಂತ್ರಣಾಧಿಕಾರಿ (ಡ್ರಗ್ ಕಂಟ್ರೋಲರ್) ಮಲ್ಲಿಕಾರ್ಜುನ ಕೆ.ಎಸ್, ಧಾರವಾಡ (ಪೂರ್ವ) ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲ್ವತ್ವಾಡಮಠ, ಧಾರವಾಡ(ಪಶ್ಚಿಮ) ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ. ಶಂಕರಪ್ಪ, ಪ್ರಾದೇಶಿಕ ಸಾರಿಗೆ ಕಚೇರಿಗಳ ಹಿರಿಯ ಮೋಟಾರು ವಾಹನ ನಿರೀಕ್ಷಕರು ಹಾಗೂ ಮೋಟಾರು ವಾಹನ ನಿರೀಕ್ಷಕ ಸಿಬ್ಬಂದಿ ಒಳಗೊಂಡ ಟಾಸ್ಕಪೋರ್ಸ್ ರಚಿಸಲಾಗಿದೆ. ತ್ವರಿತ ಹಾಗೂ ತಡೆರಹಿತ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪೂರೈಕೆಯನ್ನು ಕಮಿಟಿಯಿಂದ ನಿರ್ವಹಿಸುತ್ತಿದ್ದು, ನವನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ನಿರಂತರ ಕಾರ್ಯ ನಿರ್ವಹಿಸುವ ಸಹಾಯವಾಣಿ ಸ್ಥಾಪಿಸಲಾಗಿದೆ. ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಅಗತ್ಯವಿರುವ ಖಾಸಗಿ ಆಸ್ಪತ್ರೆಯವರು ಮತ್ತು ಜನರು ಸಹಾಯವಾಣಿ (0836-2233925, 94498 64025)ಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.