ಅವಳಿ ನಗರದಲ್ಲಿ ಮೂರು ದಿನಕ್ಕೊಮ್ಮೆ ನೀರಿಲ್ಲ

h16-Water 3
Published on

ಸಂತೋಷ ವೈದ್ಯ ಹುಬ್ಬಳ್ಳಿ

26 ಕೋಟಿ ರೂ. ಖರ್ಚು ಮಾಡಿ ಹೆಚ್ಚುವರಿಯಾಗಿ 40 ಎಂಎಲ್​ಡಿ (ನಿತ್ಯ ದಶಲಕ್ಷ ಲೀಟರ್) ನೀರು ಪಡೆದರೂ ಅವಳಿ ನಗರದ ಅರ್ಧದಷ್ಟು ವಾರ್ಡ್​ಗಳಿಗೆ ಪ್ರತಿ 3 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲು ಕರ್ನಾಟಕ ಜಲ ಮಂಡಳಿ ವಿಫಲವಾಗಿದೆ. ಮೊದಲಿನಂತೆ ಕೆಲ ಪ್ರದೇಶಗಳಿಗೆ ಈಗಲೂ 6-7 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ.

ಫೆ. 10ರಂದು ಅವಳಿ ನಗರಕ್ಕೆ ಪ್ರತಿ ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಮಾಡುವ ವ್ಯವಸ್ಥೆಗೆ ಚಾಲನೆ ನೀಡಲಾಗಿತ್ತು. ಜನಪ್ರತಿನಿಧಿಗಳು ಹಾಗೂ ಪ್ರಭುತ್ವ ಈ ಬಗ್ಗೆ ಬಹಳ ಹೆಮ್ಮೆ ಪಟ್ಟುಕೊಂಡಿತ್ತು. ಮೊದಲ ವಾರ ಎರಡು ಆವರ್ತನೆಯಲ್ಲಿ ಪ್ರತಿ 3 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗಿದೆ. ಬಳಿಕ ಮೊದಲಿದ್ದ ಸ್ಥಿತಿಗೆ ನೀರು ಪೂರೈಕೆ ವ್ಯವಸ್ಥೆ ತಲುಪಿದೆ.

ಹಾಗಾದರೆ ಹೆಚ್ಚುವರಿಯಾಗಿ ಪಡೆಯುತ್ತಿರುವ 40 ಎಂಎಲ್​ಡಿ ನೀರು ಎಲ್ಲಿಗೆ ಹೋಗುತ್ತಿದೆ? 26 ಕೋಟಿ ರೂ. ಖರ್ಚು ಮಾಡಿದ್ದು ವ್ಯರ್ಥವಾದಂತೆ ಎಂದು ನೀರು ಬಳಕೆದಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ 3 ದಿನಕ್ಕೊಮ್ಮೆ ನೀರು ಪೂರೈಕೆ ವ್ಯವಸ್ಥೆಗೆ ಚಾಲನೆ ನೀಡಿದ ಬಳಿಕ ಇಲ್ಲಿಯವರೆಗೆ ತುರ್ತು ಕಾಮಗಾರಿ ನಿಮಿತ್ತ 2 ಬಾರಿ (2 ದಿನಗಳು) ಅವಳಿ ನಗರದಲ್ಲಿ ನೀರು ಪೂರೈಕೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ನಿರಂತರ ನೀರು ಪೂರೈಕೆ ವ್ಯವಸ್ಥೆಯೂ ಬಂದ್ ಆಗಿತ್ತು. ನೀರು ಪೂರೈಕೆ ಪೈಪ್​ಲೈನ್ ದುರಸ್ತಿ ಕಾಮಗಾರಿ ನಡೆಸಿದ್ದೇವೆ ಎಂದು ಕರ್ನಾಟಕ ಜಲ ಮಂಡಳಿ ಈ ಕುರಿತು ಪ್ರಕಟಣೆ ನೀಡಿತ್ತು. ಪೂರೈಕೆ ವ್ಯವಸ್ಥೆ ಇನ್ನು ಸರಿಯಾಗಿಲ್ಲ ಎಂಬುದೇ ಇದರರ್ಥ. ಸರಬರಾಜಿನಲ್ಲಿ ವ್ಯತ್ಯಯವಾದಾಗಲೆಲ್ಲ ವಿದ್ಯುತ್ ವ್ಯತ್ಯಯ, ತುರ್ತು ಕಾಮಗಾರಿ ಇತ್ಯಾದಿ ಕಾರಣಗಳನ್ನು ಜಲ ಮಂಡಳಿ ಹೇಳುತ್ತ ಬಂದಿದೆ. 2016ರಲ್ಲಿ ನೀರಸಾಗರ ಜಲಾಶಯ ಬರಿದಾಗಿತ್ತು. ಇದರಿಂದ ಹಳೇ ಹುಬ್ಬಳ್ಳಿ ಭಾಗಕ್ಕೆ ಪ್ರತಿ 8-10 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಕಳೆದ ಆಗಸ್ಟ್​ನಲ್ಲಿ ಸುರಿದ ದಾಖಲೆ ಮಳೆಗೆ ನೀರಸಾಗರ ಜಲಾಶಯ ಭರ್ತಿಯಾಗಿ ಡಿಸೆಂಬರ್​ನಿಂದ ಅಲ್ಲಿಂದ 40 ಎಂಎಲ್​ಡಿ ನೀರು ಲಭ್ಯವಾಗುತ್ತಿದೆ. ಆದರೂ ಹಳೇ ಹುಬ್ಬಳ್ಳಿ ಭಾಗದ ಬಡಾವಣೆಗಳಿಗೆ ಪ್ರತಿ 5-6 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ.

ಸದ್ಯದ ನೀರು ಪೂರೈಕೆ ಸ್ಥಿತಿ: *ಹುಬ್ಬಳ್ಳಿ ಎಸ್.ಎಂ. ಕೃಷ್ಣಾನಗರ, ಈಶ್ವರನಗರ, ಕಲ್ಮೇಶ್ವರ ನಗರ, ಜನ್ನತ್​ನಗರ, ಟಿಪ್ಪುನಗರ, ಬೀರಬಂದ ಓಣಿ, ಬಾಗಾರಪೇಟ, ಜಂಗ್ಲಿಪೇಟ, ಸದಾಶಿವನಗರ ಪ್ರದೇಶಗಳಿಗೆ ಪ್ರತಿ 5 ಅಥವಾ 6 ದಿನಕ್ಕೊಮ್ಮೆ ನೀರು ಪೂರೈಕೆ. * ?ಹುಬ್ಬಳ್ಳಿ ಗುಡ್ಸ್​ಶೆಡ್ ರಸ್ತೆ, ಕುಲಕರ್ಣಿಹಕ್ಕಲ, ಶಂಕರ ಚಾಳ ಪ್ರತಿ 6 ದಿನಕ್ಕೊಮ್ಮೆ. *ಹುಬ್ಬಳ್ಳಿ ಗಿರಣಿಚಾಳ, ಜವಳಿಸಾಲ, ಅಮರಗೋಳ, ನವನಗರ ಪ್ರತಿ 7 ದಿನಕ್ಕೊಮೆ. * ಹುಬ್ಬಳ್ಳಿ ಗೋಕುಲ ರಸ್ತೆ ಸಿಲ್ವರ್ ಟೌನ್ 5 ದಿನಕ್ಕೊಮ್ಮೆ* ? ಧಾರವಾಡ ಕಮಲಾಪುರ 6 ದಿನಕ್ಕೊಮ್ಮೆ* ಧಾರವಾಡ ಹೊಸ ಬಸ್ ನಿಲ್ದಾಣದ ಹಿಂಭಾಗ ಮೂಕಾಂಬಿಕಾ ನಗರ 5 ದಿನಕ್ಕೊಮ್ಮೆ*ಧಾರವಾಡ ಯುಬಿ ಹಿಲ್ಸ್, ಡಿ.ಸಿ. ಕಾಂಪೌಂಡ್, ಹುಬ್ಬಳ್ಳಿ ವಿದ್ಯಾನಗರ, ಲೋಕಪ್ಪನಹಕ್ಕಲ್, ಜಯನಗರ, ಗೋಕುಲ ರಸ್ತೆ ಕೋಟಿಲಿಂಗನಗರ 3 ದಿನಕ್ಕೊಮ್ಮೆ* ? ಹುಬ್ಬಳ್ಳಿ ಲೋಹಿಯಾನಗರ, ಜೆ.ಪಿ. ನಗರ, ಪದ್ಮರಾಜನಗರಕ್ಕೆ 3 ಅಥವಾ 4 ದಿನಕ್ಕೊಮ್ಮೆ

ಹು-ಧಾ ಅವಳಿ ನಗರದ ಶೇ. 25ರಷ್ಟು ಪ್ರದೇಶಗಳಿಗೆ ನಿರಂತರ ನೀರು, ಶೇ. 55ರಷ್ಟು ಪ್ರದೇಶಗಳಿಗೆ ಪ್ರತಿ 3 ದಿನಕ್ಕೊಮ್ಮೆ ಹಾಗೂ ಶೇ. 20ರಷ್ಟು ಪ್ರದೇಶಗಳಿಗೆ ಪ್ರತಿ 4 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಮುಂದಿನ 10 ದಿನದೊಳಗೆ ಎಲ್ಲರಿಗೂ (ನಿರಂತರ ನೀರು ಬಿಟ್ಟು) ಪ್ರತಿ 3 ದಿನಕ್ಕೊಮ್ಮೆ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. | ಎಚ್.ಎಸ್. ರಾಜಗೋಪಾಲ ಇಇ ಕರ್ನಾಟಕ ಜಲ ಮಂಡಳಿ

ಗೂಡ್ಸ್​ಶೆಡ್ ರಸ್ತೆ, ಶಂಕರ ಚಾಳ ಬಡಾವಣೆಯಲ್ಲಿ ಮೊದಲಿನಂತೆ 6 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರತಿ 3 ದಿನಕ್ಕೊಮ್ಮೆ ಅಲ್ಲ. | ಆರ್. ರಾಧಾಕೃಷ್ಣನ್ ಸ್ಥಳೀಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net