

ಧಾರವಾಡ, ಹುಬ್ಬಳ್ಳಿ: ಲಾಕ್ಡೌನ್ ಸಡಿಲಗೊಳಿಸಿ ಮಂಗಳವಾರದಿಂದಲೇ ರಾಜ್ಯದಲ್ಲಿ ಬಸ್ಗಳ ಸಂಚಾರಕ್ಕೆ ಅನುಮತಿ ನೀಡಿದ ಬೆನ್ನಲ್ಲೇ ನಗರದ ಬಸ್ ನಿಲ್ದಾಣಗಳಲ್ಲಿ ಸಿಬ್ಬಂದಿ ಸೋಮವಾರದಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ರಾಜ್ಯ ಸರ್ಕಾರದ ಆದೇಶ ಹೊರ ಬೀಳುತ್ತಿದ್ದಂತೆ ಹೊಸ ಬಸ್ ನಿಲ್ದಾಣ, ಉಪನಗರ ಹಾಗೂ ಸಿಟಿ ಬಸ್ ನಿಲ್ದಾಣಗಳಲ್ಲಿ ಮಾರ್ಕಿಂಗ್ ಸೇರಿ ಇನ್ನಿತರ ಅಗತ್ಯ ಸಿದ್ಧತೆ ಮಾಡಲಾಗುತ್ತಿದೆ. ಸಾಮಾನ್ಯ ದಿನಗಳಲ್ಲಿ ಉಪನಗರ ಹಾಗೂ ನಗರ ಪ್ರದೇಶಗಳಲ್ಲಿ 200ಕ್ಕೂ ಹೆಚ್ಚು ಬಸ್ಗಳು (ಶೆಡ್ಯೂಲ್) ಸಂಚಾರ ನಡೆಸುತ್ತಿದ್ದವು. ಆದರೆ, ಸದ್ಯದ ಪರಿಸ್ಥಿತಿ ಗಮನಿಸಿ ಕೇವಲ 60 ಬಸ್ಗಳ (ಶೆಡ್ಯೂಲ್) ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದೆ.
ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಮುಖ್ಯದ್ವಾರದ ಬಳಿಯೇ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಜತೆಗೆ ಸಂಸ್ಥೆ ಸಿಬ್ಬಂದಿಗೂ ಸ್ಕ್ರೀನಿಂಗ್ ನಡೆಸಿ ಸ್ಯಾನಿಟೈಸರ್ ಹಾಗೂ ಮಾಸ್ಕ್ಗಳನ್ನು ನೀಡಲಾಗುವುದು.
ಸದ್ಯ ಬೆಳಗ್ಗೆ 7 ರಿಂದ ಸಂಜೆ 7ಗಂಟೆವರೆಗೆ ಮಾತ್ರ ಬಸ್ಗಳ ಸಂಚಾರಕ್ಕೆ ನಿರ್ಧರಿಸಲಾಗಿದ್ದು, ಒಂದು ಬಸ್ನಲ್ಲಿ ಶೇ. 25ರಷ್ಟು ಜನರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲು ತೀರ್ವನಿಸಲಾಗಿದೆ.
ನಗರದ ಹೊಸ್ ಬಸ್ ನಿಲ್ದಾಣದಲ್ಲೂ ಎಲ್ಲ ಮುಂಜಾಗ್ರತೆ ಕ್ರಮಗಳ ಬಗ್ಗೆ ಸಿದ್ಧತೆ ನಡೆಸಲಾಗುತ್ತಿದೆ. ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯಲ್ಲಿ ಕರೊನಾ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣಕ್ಕೆ ಬೆಳಗಾವಿ ಜಿಲ್ಲೆಗೆ ಬಸ್ ಕಾರ್ಯಾಚರಣೆ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದಾಗ್ಯೂ ಅಧಿಕಾರಿಗಳು ಈ ಜಿಲ್ಲೆಗೆ ಬಸ್ಗಳನ್ನು ಕಾಯ್ದಿರಿಸಿದ್ದಾರೆ.
ಹಳೇ ಬಸ್ ನಿಲ್ದಾಣ ಸಜ್ಜು
ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಿಗದಿತ ಸ್ಥಳದಲ್ಲಿ ಇಳಿಯುವ ಮುನ್ನ ಪ್ರತಿ ಪ್ರಯಾಣಿಕರ ಅಂತರ ಹೆಚ್ಚಿಗೆ ಇರಬೇಕು ಎಂದು ಕೆಲ ನಿಯಮಗಳನ್ನು ತೂಗು ಹಾಕಲಾಗಿದೆ. ಈಗಾಗಲೇ ಬಿಡಾರ ಹೂಡಿರುವ ಕೆಲ ಸಿಬ್ಬಂದಿ, ನಿಲ್ದಾಣಕ್ಕೆ ಬರುವ ಜನರಿಗೆ ಬಸ್ ಪ್ರಯಾಣದ ಕುರಿತು ಮಾಹಿತಿ ನೀಡುತ್ತಿದ್ದಾರೆ.
ಸದ್ಯ ಕಾರ್ಯಾಚರಣೆಗೆ 60 ಬಸ್ಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಗುಂಪು ಗುಂಪಾಗಿ ನಿಲ್ಲದೆ ಪರಸ್ಪರ ಅಂತರ ಕಾಪಾಡಲು ಸಹಕಾರಿಯಾಗಲು ಮಾರ್ಕಿಂಗ್ ಮಾಡಲಾಗುತ್ತಿದೆ. ಬಸ್ ಸಂಚಾರಕ್ಕೂ ಪೂರ್ವ ಹಾಗೂ ಸಂಚಾರ ಮುಗಿದ ಬಳಿಕ ಪ್ರತಿ ಬಸ್ಗೆ ಸಂಪೂರ್ಣ ಸ್ಯಾನಿಟೈಸರ್ ಮಾಡಲಾಗುವುದು. ಮೇಲಧಿಕಾರಿಗಳಿಂದ ಸಂಪೂರ್ಣ ಮಾರ್ಗಸೂಚಿ ಬರಬೇಕಿದೆ.
ಎಸ್.ಜಿ. ಬಿರಾದಾರ, ಗ್ರಾಮಾಂತರ ಡಿಪೊ ಮ್ಯಾನೇಜರ್.
ಬೇಂದ್ರೆ ಬಸ್ ಸಂಚಾರ ಇಲ್ಲ
ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ನಡುವೆ ಸಂಚರಿಸುವ ಖಾಸಗಿ ಒಡೆತನದ ಬೇಂದ್ರೆ ನಗರ ಸಾರಿಗೆ ಬಸ್ ಸಂಚಾರ ಮಂಗಳವಾರದಿಂದ ಆರಂಭಗೊಳ್ಳುವುದಿಲ್ಲ.
ಖಾಸಗಿ ಬಸ್ಗಳ ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿರುವುದು ಗೊತ್ತಾಗಿದೆ. ಆದರೆ, ಲಿಖಿತ ಆದೇಶ ಸಂಜೆಯಾದರೂ ಕೈ ಸೇರಿಲ್ಲ. ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಾಗಿರುವುದರಿಂದ ಇಷ್ಟು ಕಡಿಮೆ ಸಮಯದಲ್ಲಿ ಮಂಗಳವಾರದಿಂದ ಬಸ್ ಸಂಚಾರಕ್ಕೆ ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ. ಬೇರೆ ಬೇರೆ ಊರಿಗೆ ತೆರಳಿರುವ ನಮ್ಮ ಸಿಬ್ಬಂದಿ ಬಂದು ಸೇರಬೇಕಿದೆ. ಒಂದೆರಡು ದಿನ ವಿಳಂಬವಾಗಲಿದೆ ಎಂದು ಬೇಂದ್ರೆ ನಗರ ಸಾರಿಗೆ ಪಾಲುದಾರರೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.
EndFragment