ಅವಧಿಯೊಳಗೆ ಪುರಸಭೆಗೆ ಕಂದಾಯ ಪಾವತಿಸಿ

kdr e kata
ಕಡೂರಿನ ಏಳೂರು ಬೀರಲಿಂಗೇಶ್ವರ ದೇವಸ್ಥಾನದ ಆವರಣದ ಬಳಿ ಪುರಸಭೆಯಿಂದ ಆಯೋಜಿಸಿದ್ದ ನಮ್ಮ ನಡೆ ಸಾರ್ವಜನಿಕರ ಕಡೆ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಇ -ಖಾತೆ ಪತ್ರ ವಿತರಿಸಿದರು. ತೋಟದಮನೆ ಮೋಹನ್‌ಕುಮಾರ್, ಈರಳ್ಳಿ ರಮೇಶ್, ಯತಿರಾಜ್, ಮಂಜುನಾಥ್ ಮತ್ತಿತರರಿದ್ದರು.
Published on

ಕಡೂರು: ಪಟ್ಟಣದ ನಾಗರಿಕರು ಆಸ್ತಿಗೆ ಸಂಬಂಧಿಸಿದ ಕಂದಾಯವನ್ನು ಪುರಸಭೆಗೆ ನಿಗದಿತ ಅವಧಿಯೊಳಗೆ ಪಾವತಿಸಿ ಭದ್ರಪಡಿಸಿಕೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಪಟ್ಟಣದ 3, 4, 5ನೇ ವಾರ್ಡ್ ವ್ಯಾಪ್ತಿಯಲ್ಲಿ ಗುರುವಾರ ಏಳೂರು ಬೀರಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಏರ್ಪಡಿಸಿದ್ದ ನಮ್ಮ ನಡೆ ಸಾರ್ವಜನಿಕರ ಕಡೆ ಹಾಗೂ ಇ-ಖಾತಾ ಅಭಿಯಾನದ ಎರಡನೇ ಹಂತದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪುರಸಭೆಗೆ ಕಂದಾಯವೇ ಮೂಲ ಆದಾಯವಾಗಿದೆ. ಜನತೆ 20 ವರ್ಷಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪಾವತಿಸದೆ ಇದ್ದಂತಹ ಕಂದಾಯವನ್ನು ಈ ಬಾರಿ ಸರಿಯಾದ ಸಮಯಕ್ಕೆ ಪಾವತಿಸುತ್ತಿದ್ದು, ನಮ್ಮ ಆಡಳಿತವು ಅಷ್ಟೇ ಮುತುವರ್ಜಿಯಿಂದ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದರು.

ಬಹುತೇಕ ಮೂರು ಮತ್ತು ನಾಲ್ಕನೇ ವಾರ್ಡ್ ವ್ಯಾಪ್ತಿಯಲ್ಲಿ ಶೇ.60ರಷ್ಟು ಇ-ಸ್ವತ್ತಿನ ಸಮಸ್ಯೆ ಕಾಡುತ್ತಿದೆ. ಇಂದಿಗೂ ಇ-ಸ್ವತ್ತು ದಾಖಲೆ ಮಾಡಿಸಿಕೊಳ್ಳಲು ನಿರಾಸಕ್ತಿ ತೋರುತ್ತಿದ್ದಾರೆ. ಸರ್ಕಾರ ಮುಂದಿನ ದಿನಗಳಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ರೂಪಿಸುತ್ತವೆ. ಇದಕ್ಕಾಗಿಯೇ ಪುರಸಭೆ ಆಡಳಿತವು ನಮ್ಮ ನಡೆ ಸಾರ್ವಜನಿಕರ ಕಡೆ ಎಂಬ ಅಭಿಯಾನ ಹಾಕಿಕೊಂಡು ನಿಮ್ಮ ಮನೆಯ ಮುಂದೆ ಬಂದಿದೆ. ಇ-ಸ್ವತ್ತು, ಮತ್ತಿತರ ಸಮಸ್ಯೆಗಳನ್ನು ಪರಿಹರಿಸಿಕೊಂಡು ವಾಸದ ಮನೆಗೆ ಸೂಕ್ತ ಭದ್ರತೆ ಕಾಪಾಡಿಕೊಳ್ಳಲು, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದರು.

ಪುರಸಭೆ ವ್ಯಾಪ್ತಿಯ ಯಾವುದೇ ವಾರ್ಡ್‌ಗಳಲ್ಲಿ ಮೂಲ ಸೌಕರ್ಯದ ಕೊರತೆ ಇದ್ದರೆ ಸಂಬಂಧಿಸಿದ ಸದಸ್ಯರ ಮೂಲಕ ಮಾಹಿತಿ ನೀಡಿದರೆ ಸಮಸ್ಯೆಗೆ ಕೂಡಲೆ ಪರಿಹಾರ ಒದಗಿಸಲಾಗುತ್ತದೆ. ಪುರಸಭೆ ಆಡಳಿತವು ಕಂದಾಯ ವಸೂಲಾತಿಗಾಗಿ ಅಭಿಯಾನದ ಮೂಲಕ ಮಾಡಿರುವ ಪ್ರಚಾರದಲ್ಲಿ ನಾಗರಿಕರು ವಾಣಿಜ್ಯ, ಮನೆ, ನಿವೇಶನಗಳ ಕಂದಾಯ ಪಾವತಿಗೆ ಕಚೇರಿಯಲ್ಲಿ ಸರತಿ ಸಾಲಿನಲ್ಲಿ ನಿಂತು ಕಂದಾಯ ಪಾವತಿಸುತ್ತಿರುವುದು ಉತ್ತಮ ಬೆಳವಣಿಗೆಗೆ ಸಾಕ್ಷಿ. ಇದರಿಂದ ಸರ್ಕಾರದ ಶೇ.5ರಷ್ಟು ರಿಯಾಯಿತಿ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಯಕ್ಕೆ ಸರಿಯಾಗಿ ಕಂದಾಯ ಪಾವತಿಸಿದ ಸಾರ್ವಜನಿಕರಿಗೆ ಅಭಿನಂದಿಸಲಾಗುತ್ತದೆ ಎಂದರು.

ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ಈರಳ್ಳಿ ರಮೇಶ್, ತೋಟದಮನೆ ಮೋಹನ್, ಯತಿರಾಜ್, ಮೋಹನ್, ಸೈಯ್ಯದ್ ಇಕ್ಬಾಲ್, ಸಂದೇಶ್‌ಕುಮಾರ್, ಮುಖಂಡ ಪಂಗ್ಲಿ ಮಂಜುನಾಥ್, ನಾಮ ನಿರ್ದೇಶಿತ ಸದಸ್ಯರಾದ ವಿನಯ್ ದಂಡಾವತಿ, ದೇವೇಂದ್ರ, ಹರೀಶ್, ಕೃಷ್ಣಪ್ಪ, ಖಾದರ್, ಮುಖ್ಯಾಧಿಕಾರಿ ಮಂಜುನಾಥ್, ವ್ಯವಸ್ಥಾಪಕ ತಿಮ್ಮಯ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net