

ಮೈಸೂರು: ಮುಂದಿನ ಒಂದೂವರೆ ವರ್ಷದಲ್ಲಿ ನನ್ನ ಸಂಸದ ಸ್ಥಾನದ ಅವಧಿ ಮುಕ್ತಾಯಗೊಳ್ಳಲಿದ್ದು, ಅಲ್ಲಿಗೆ ನಾನು ರಾಜಕೀಯದಿಂದ ನಿವೃತ್ತಿ ಅಗುತ್ತೇನೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಪುನರುಚ್ಚರಿಸಿದ್ದಾರೆ.
ಸಮಾನತೆ, ಸ್ವಾಭಿಮಾನ, ಸ್ವಾವಲಂಬನೆ ಪ್ರತಿಷ್ಠಾನ ಹಾಗೂ ಸಮಾನತೆ ಪ್ರಕಾಶನದಿಂದ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, 1977ರಲ್ಲಿ ಜನತಾ ಪಕ್ಷದಿಂದ ರಾಜಕೀಯ ಪ್ರವೇಶಿಸಿ, ಮೊದಲ ಬಾರಿಯೇ ಗೆಲುವು ಪಡೆದೆ. ಇದುವರೆಗೆ 14 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. 11ರಲ್ಲಿ ಗೆಲುವು ಸಾಧಿಸಿದ್ದೇನೆ. ಸಂಸದನಾಗಿ ಒಂದೂವರೆ ವರ್ಷ ಪೂರ್ಣಗೊಳಿಸಿದರೆ ನನ್ನ ರಾಜಕೀಯ ಜೀವನಕ್ಕೆ 50 ವರ್ಷಗಳಾಗುತ್ತದೆ. ಅಲ್ಲಿಗೆ ನಾನು ನಿವೃತ್ತಿಯಾಗುತ್ತೇನೆ ಎಂದರು.
ಮತಕ್ಕಾಗಿ ದಲಿತರ ಒಡೆಯುವ ಯತ್ನ
ಒಳಮೀಸಲಾತಿ ಮುನ್ನೆಲೆಗೆ ತರುವ ಮೂಲಕ ಮತಕ್ಕಾಗಿ ದಲಿತರನ್ನು ಒಡೆಯಲಾಗುತ್ತಿದೆ. ಇದು ಬ್ರಿಟಿಷರ ಒಡೆದಾಳುವ ನೀತಿಗಿಂತಲೂ ಅಪಾಯಕಾರಿ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಬೇಸರ ವ್ಯಕ್ತಪಡಿಸಿದರು.
ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಮತಕ್ಕಾಗಿ ಒಳಮೀಸಲಾತಿ ಚರ್ಚೆ ಮುನ್ನೆಲೆಗೆ ಬಂದಿದೆ. ಎಡಗೈ, ಬಲಗೈ ಎಂದು ಒಡಕುಂಟು ಮಾಡಲಾಗುತ್ತಿದೆ. ರಾಜಕಾರಣಿಗಳು ಮತಕ್ಕಾಗಿ ಬ್ರಿಟಿಷರಿಗಿಂತಲೂ ಅಪಾಯಕಾರಿಯಾಗಿ ದಲಿತರನ್ನು ಒಡೆಯುತ್ತಿದ್ದಾರೆ ಎಂದರು.
ಹಿಂದು ಧರ್ಮ ಒಪ್ಪಿಕೊಳ್ಳುವುದೆಂದರೆ ಅಸಮಾನತೆ ಒಪ್ಪಿಕೊಂಡಂತೆ. ದಲಿತರು ಶತಮಾನದಿಂದ ಶೋಷಣೆಗೆ ಒಳಗಾಗಿದ್ದಾರೆ. ಜಾತೀಯತೆ, ಅಸ್ಪಶ್ಯತೆ ಹೇಗೆ ನಮ್ಮನ್ನು ಕೊಲ್ಲುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಸ್ಪಶ್ಯತೆ ಮಾನಸಿಕ ಕಾಯಿಲೆಯಂತಿದ್ದು, ಅದರಿಂದ ಹೊರ ಬರಬೇಕು. ಶಾಂತಿ, ನೆಮ್ಮದಿ, ಸಹಬಾಳ್ವೆಗಾಗಿ ಅಂಬೇಡ್ಕರ್ ತೋರಿದ ಬುದ್ಧ ಮಾರ್ಗದಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.