

ಸುಂಟಿಕೊಪ್ಪ: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೂ ಅಭಾವ ತಲೆದೋರಿದ್ದು, ಜಲ ಜೀವನ್ ಯೋಜನೆಯಡಿ ಕಳಪೆ ಮಟ್ಟದ ಕಾಮಗಾರಿ ಪರಿಣಾಮ ಪೈಪ್‌ಗಳು ಅಲ್ಲಲ್ಲಿ ಒಡೆದು ಹೋಗಿ ಜನರು ಕುಡಿಯುವ ನೀರಿಗೆ ಹಾಹಾಕಾರ ಪಡುವಂತಾಗಿದೆ.
ಐಗೂರು ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಈಗಾಗಲೇ ಗ್ರಾಪಂನ 26 ಲಕ್ಷ ರೂ.ಗೂ ಅಧಿಕ ಹಣ ಹಿಂದಿನ ಪಿಡಿಒ ಹಾಗೂ ಸಿಬ್ಬಂದಿಯೊಬ್ಬರು ದುರ್ಬಳಕೆ ಆಗಿದ್ದು, ಈ ಬಗ್ಗೆ ಜಿಪಂನಿಂದ ತನಿಖೆ ನಡೆಸಲಾಗಿದೆ. ಸಿಇಒ ಸಹ ಹಣ ದುರುಪಯೋಗ ಮಾಡಿಕೊಂಡವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ. ಅಲ್ಲದೆ 11 ಜನ ಸದಸ್ಯರಿರುವ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕೆಲಸಗಳು ಗಣನೀಯವಾಗಿ ಕುಸಿದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸೋಮವಾರಪೇಟೆ ಮಡಿಕೇರಿ ರಾಜ್ಯ ಹೆದ್ದಾರಿಯಿಂದ ಐಗೂರು ಜಂಕ್ಷನ್‌ಗಾಗಿ ಯಡವಾರೆ, ಯಡವನಾಡು ತೆರಳುವ ರಸ್ತೆಯ ಬಳಿ ಐಗೂರು ನಾಲೆಗೆ 2019ರಲ್ಲಿ ಮಳೆ ಹಾನಿಗೆ ಪರಿಹಾರವಾಗಿ ಸರ್ಕಾರದಿಂದ ನಿರ್ಮಿಸಲಾದ ರಸ್ತೆ ತೀರಾ ಕಳಪೆ ಗುಣಮಟ್ಟದಿಂದ ಕೂಡಿದೆ. ಅವೈಜ್ಞಾನಿಕವಾಗಿ ನಾಲೆಯ ಮೋರಿ ಮೇಲೆ ಕಾಮಗಾರಿ ನಡೆಸಿರುವುದರಿಂದ ರಸ್ತೆ ತುಂಬ ಉಬ್ಬು, ತಗ್ಗುಗಳು ನಿರ್ಮಾಣಗೊಂಡಿವೆ. ಇದರಿಂದ ವಾಹನ ಚಾಲಕರು ರಸ್ತೆಯಲ್ಲಿ ಸರ್ಕಸ್ ಮಾಡಿಕೊಂಡೇ ವಾಹನ ಚಲಾಯಿಸುವಂತಾಗಿದೆ. ಗ್ರಾಮ ಪಂಚಾಯಿತಿಯವರು ಕನಿಷ್ಠ ಈ ಮೋರಿ ಕಾಮಗಾರಿಯನ್ನು ಸರಿಪಡಿಸಿ ಸಾರ್ವಜನಿಕರ ವಾಹನ ಸುಗಮವಾಗಿ ಸಂಚಾರಕ್ಕೆ ಅನುವುಮಾಡಿ ಕೊಡುತ್ತಿಲ್ಲ ಎಂದು ಕೀಚನ ಜೋಯಪ್ಪ, ಸುರೇಶ ತಿಳಿಸಿದ್ದಾರೆ.
ಜಲಜೀವನ್ ಯೊಜನೆಯಡಿ ಕಳಪೆ ಕಾಮಗಾರಿ ನಿರ್ವಹಿಸುವುದರಿಂದ ಹಳೇ ಪೈಪ್‌ಗಳಿಗೆ ಜೋಡಣೆ ಮಾಡಿ ಕಾಮಗಾರಿ ನಿರ್ವಹಿಸಿದ್ದರಿಂದ ಪೈಪ್‌ಗಳು ಅಲ್ಲಲ್ಲಿ ಒಡೆದು ಐಗೂರು, ಕಾಜೂರು,ಯಡವಾರೆ ನಿವಾಸಿಗಳು ಪರದಾಡುವಂತಾಗಿದೆ ಎಂದು ಗ್ರಾಮಸ್ಥರಾದ ಬಾಲಕೃಷ್ಣ, ಚಂದ್ರ,ಅನು ಹೇಳಿಕೆಯಲ್ಲಿ ಅಲವತ್ತುಕೊಂಡಿದ್ದಾರೆ.