

ಹಗರಿಬೊಮ್ಮನಹಳ್ಳಿ: ಅಗ್ನಿ ಅವಘಡ ತಡೆಗಟ್ಟುವುದು ಇಲಾಖೆಯೊಂದಿಗೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಮುಖ್ಯ ಶಿಕ್ಷಕ ಎಚ್.ಎ.ರಂಗನಾಥ ಹೇಳಿದರು.
ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಅಗ್ನಿ ಅವಘಡ ತಡೆಗಟ್ಟುವುದು ಮತ್ತು ಸುರಕ್ಷತಾ ಜಾಗೃತಿ ಸಮಗ್ರ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತರಬೇತಿಯಿಂದ ವಿದ್ಯಾರ್ಥಿಗಳಲ್ಲಿ ಸುರಕ್ಷತೆಯ ಅರಿವು ಮೂಡುವುದರೊಂದಿಗೆ ಜೀವನ ಕೌಶಲ್ಯಕ್ಕೂ ಸಹಾಯಕವಾಗುತ್ತದೆ ಎಂದರು.
ಶಿಕ್ಷಕ ಎಸ್.ಎಂ.ಶಿವಶಂಕ್ರಯ್ಯ ಮಾತನಾಡಿ, ತುರ್ತು ಪರಿಸ್ಥಿತಿಯಲ್ಲಿ ಸಿದ್ಧತೆ ಮತ್ತು ನೆರವಿಗಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಯಲ್ಲಿ ಅಗ್ನಿ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವುದು ಪ್ರಾತ್ಯಕ್ಷಿಕೆ ಉದ್ದೇಶವಾಗಿದೆ ಎಂದರು.
ಶಿಕ್ಷಕ ನಾಗರಾಜ ಅಗ್ನಿ ಅವಘಡಗಳಿಗೆ ಕಾರಣವಾಗುವ ಪ್ರಮುಖ ಅಂಶಗಳನ್ನು ವಿವರಿಸಿದರು. ಅಗ್ನಿಯ ತೀವ್ರತೆಯನ್ನು ಪ್ರಾಥಮಿಕ ಹಂತದಲ್ಲಿ ನಿಯಂತ್ರಿಸದಿದ್ದರೆ ವೇಗವಾಗಿ ವ್ಯಾಪಿಸಿ ದೊಡ್ಡ ನಷ್ಟವನ್ನುಂಟು ಮಾಡಬಹುದು ಎಂದರು.
ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅಗ್ನಿಶಾಮಕ ಸಾಧನಗಳನ್ನು ಬಳಸುವ ಪ್ರಾಯೋಗಿಕ ತರಬೇತಿ ನೀಡಲಾಯಿತು. ಶಿಕ್ಷಕಿಯರಾದ ಭುವನೇಶ್ವರಿ, ವಂದನಾ, ರೇಣುಕಾ, ಕೊಟ್ರಮ್ಮ, ಸಹನಾ, ಸಿಂಧು, ಮುಂತಾದವರು ಇದ್ದರು.