

ಎಂ.ನವೀನ್‌ಕುಮಾರ್ ಶಿರಾಳಕೊಪ್ಪ
ಪಟ್ಟಣದ ಹಿಂದು ರುದ್ರಭೂಮಿ ಅಭಿವೃದ್ಧಿಗೂ ಪುರಸಭೆ ಆಡಳಿತ ನಿರ್ಲಕ್ಷೃ ತೋರುತ್ತಿದೆ. ಕಳೆದೆರಡು ವರ್ಷಗಳಲ್ಲಿ ಸುಮಾರು 8 ಲಕ್ಷ ರೂ. ವೆಚ್ಚ ಮಾಡಿದ್ದರೂ ಶಾಶ್ವತ ಅಭಿವೃದ್ಧಿ ಆಗಿಲ್ಲ. ಸಾಲದೆಂಬಂತೆ ಇತ್ತೀಚೆಗೆ ಶವಸಂಸ್ಕಾರದ ಕಬ್ಬಿಣದ ಹಾಗೂ ಎರಕದ ಸಾಧನಗಳನ್ನು ಕಳ್ಳರು ಕಳವು ಮಾಡಿರುವುದು ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ.
ಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ಎರಡು ಸ್ಮಶಾನಗಳಿವೆ. ವೀರಶೈವ ಲಿಂಗಾಯತ ಸಮಾಜ, ಕಲಾಲ್ ಸಮಾಜ, ಮಂಚಿ ಬಳಗ, ಭೋವಿ ಸಮಾಜ, ಕ್ರಿಶ್ಚಿಯನ್ ಸಮುದಾಯದವರು ಪ್ರತ್ಯೇಕವಾಗಿ ಸ್ಮಶಾನ ಹೊಂದಿದ್ದಾರೆ. ಉಳಿದಂತೆ ಹಿಂದು ಸಮಾಜದ ಇತರ ಎಲ್ಲ ಜಾತಿ, ಸಮುದಾಯದವರು ಈ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸುತ್ತಾರೆ. ಸುಮಾರು ಒಂದು ಎಕರೆಗಿಂತ ಹೆಚ್ಚು ವ್ಯಾಪ್ತಿಯಿರುವ ಈ ಭೂಮಿಯನ್ನು 1960ಕ್ಕಿಂತ ಮೊದಲೇ ದಾನವಾಗಿ ನೀಡಲಾಗಿದೆ. ಈ ಸ್ಮಶಾನದಲ್ಲಿ ಕುಡಿಯುವ ನೀರಿನ ಟ್ಯಾಂಕ್ ವ್ಯವಸ್ಥೆ ಮಾಡಿದ್ದರೂ ನಿರ್ವಹಣೆ ಕೊರತೆ ಇದೆ. ಶವ ದಹನ ಮಂಟಪದ ಮೇಲ್ಛಾವಣಿ ಸೋರುತ್ತಿದೆ. ಇದರಿಂದ ಮಳೆಗಾಲದಲ್ಲಿ ತೊಂದರೆಯಾಗುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ದೊರೆತ ಅನುದಾನದಿಂದ ದೊರೆತ ಚಿತಾಗಾರದ ಯಂತ್ರ ಸ್ಥಳಾವಕಾಶದ ಕೊರತೆಯಿಂದ ಮೂಲೆ ಸೇರಿದೆ.
ಪುರಸಭೆಯಲ್ಲಿ ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಸ್ಮಶಾನದ ದುಸ್ಥಿತಿ ಬಗ್ಗೆ ಗಮನ ಸೆಳೆದಿದ್ದರು. ಭದ್ರತೆ ಕೊರತೆಯಿಂದ ರುದ್ರಭೂಮಿಯ ವಸ್ತುಗಳು ಕಳವಾಗುತ್ತಿವೆ. ಪುರಸಭೆ ಆಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಶಿರಾಳಕೊಪ್ಪದ ಈ ರುದ್ರಭೂಮಿ ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇದೀಗ ಸಮಾಜ ಸೇವಕರು, ಸಂಘಟನೆಗಳು ಹಾಗೂ ಪುರಸಭೆ ಒಟ್ಟಾಗಿ ಕಾರ್ಯಾಚರಣೆ ಕೈಗೊಂಡರೆ ಕಾಯಕಲ್ಪ ಸಾಧ್ಯ ಎಂಬುದು ಸ್ಥಳೀಯರ ಅಭಿಪ್ರಾಯ.
ಸ್ನೇಹಿತರ ತಂಡದಿಂದ ಸ್ವಚ್ಛತೆ
ದಾನಿಗಳ ನೆರವಿನಿಂದ ಸ್ಮಶಾನದ ಮುಂದೆ ತಗಡಿನ ಶೀಟ್ ನಿರ್ಮಾಣ, ನೀರಿನ ಪೈಪ್‌ಲೈನ್ ಅಳವಡಿಕೆಯನ್ನು ನಾಗರಿಕರೇ ಮಾಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ಬಾಲಾಜಿ ನಾಯಕ್ ಹಾಗೂ ಅವರ ಸ್ನೇಹಿತರ ತಂಡ ಸ್ಮಶಾನ ಸ್ವಚ್ಛಗೊಳಿಸಿ, ಅಡಕೆ ಹಾಗೂ ಹಣ್ಣಿನ ಸಸಿಗಳನ್ನು ನೆಡುವ ಮೂಲಕ ಅಭಿವೃದ್ಧಿಪಡಿಸಿದ್ದಾರೆ. ಆದರೆ ನಿರ್ವಹಣೆ ಕೊರತೆಯಿಂದ ಸಸಿಗಳು ಒಣಗಿ ಹಾಳಾಗಿವೆ.
ನನ್ನ ತಂದೆ ಸ್ಮರಣಾರ್ಥವಾಗಿ ಹಿಂದು ಸ್ಮಶಾನದ ಅಭಿವೃದ್ಧಿಗಾಗಿ ವೈಯಕ್ತಿಕವಾಗಿ ಸುಮಾರು 3 ಲಕ್ಷ ರೂ. ವಿನಿಯೋಗಿಸಿದ್ದೇನೆ. ಮುಂದಿನ ದಿನಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುತ್ತೇನೆ.
ಮಹೇಂದ್ರಕುಮಾರ್ ಜೈನ್, ಸಮಾಜ ಸೇವಕ
ಗಿಡ, ಕಳೆಗಳಿಂದ ತುಂಬಿದ್ದ ಸ್ಮಶಾನವನ್ನು ಸ್ನೇಹಿತರ ಸಹಕಾರದಿಂದ ಸ್ವಚ್ಛಗೊಳಿಸಿ ಹಲವಾರು ಹಣ್ಣಿನ ಗಿಡಗಳನ್ನು ನೆಟ್ಟಿದ್ದೆವು. ಮುಂದಿನ ದಿನಗಳಲ್ಲಿ ಮತ್ತೆ ಗಿಡಗಳನ್ನು ನೆಟ್ಟು ಪಾಲನೆ-ಪೋಷಣೆ ಮಾಡುತ್ತೇವೆ.
ಬಾಲಾಜಿ ನಾಯಕ್, ಸಾಮಾಜಿಕ ಕಾರ್ಯಕರ್ತ
ಮೃತರ ಗೌರವ ಕಾಪಾಡುವುದು ಎಲ್ಲರ ಕರ್ತವ್ಯ. ಸ್ಮಶಾನ ಅಭಿವೃದ್ಧಿ ಕೇವಲ ಪುರಸಭೆಯ ಕೆಲಸವಲ್ಲ. ಇದು ಎಲ್ಲರ ಜವಾಬ್ದಾರಿ. ಸ್ಮಶಾನಕ್ಕೆ ಕಾಯಕಲ್ಪ ನೀಡುವ ಅಗತ್ಯ ಇದೆ. ಹಿಂದು ಸಮಾಜದ ಎಲ್ಲ ಜಾತಿಗಳನ್ನು ಒಳಗೊಂಡ ನಿರ್ವಹಣಾ ಸಮಿತಿಯನ್ನು ರಚಿಸುವ ಉದ್ದೇಶವಿದೆ.
ನಾಗರಾಜ್, ವಿಶ್ವಕರ್ಮ ಸಮಾಜದ ಅಧ್ಯಕ್ಷ
ಸ್ಮಶಾನದಲ್ಲಿ ನಡೆದ ಕಳ್ಳತನ ಮತ್ತು ಸೌಲಭ್ಯ ಕೊರತೆ ಉಂಟಾಗಿರುವುದು ಪುರಸಭೆಯ ಗಮನಕ್ಕೆ ಬಂದಿದೆ. ಸಿಸಿ ಕ್ಯಾಮರಾ ಅಳವಡಿಕೆ, ಹೊಸ ಗೇಟ್ ನಿರ್ಮಾಣ ಹಾಗೂ ಸ್ಮಶಾನದ ಮೇಲ್ಛಾವಣಿ ದುರಸ್ತಿ ಕಾಮಗಾರಿ ನಿರ್ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮಮತಾ ನಿಂಗಪ್ಪ, ಪುರಸಭೆ ಅಧ್ಯಕ್ಷೆ
ಕಳ್ಳತನ ಮತ್ತು ಅನನುಕೂಲಗಳ ಕುರಿತು ಮಾಹಿತಿ ದೊರೆತಿದೆ. ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸ್ಮಶಾನ ಅಭಿವೃದ್ಧಿಯ ಪ್ರಸ್ತಾವನೆಗೆ ಈಗಾಗಲೇ ಚಾಲನೆ ದೊರೆತಿದೆ.
ಪರುಶುರಾಮ್, ಪುರಸಭೆ ಮುಖ್ಯಾಧಿಕಾರಿ