

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿ ಜೀವನ ಪರೀಕ್ಷೆಯ ಕಾಲ. ಈ ಸಮಯದಲ್ಲಿ ವಿದ್ಯಾರ್ಥಿ ಸ್ಪಂದಿಸುವುದರ ಮೇಲೆ ಆತನ ಜೀವನ ನಿರ್ಧಾರವಾಗುತ್ತದೆ. ಸಾಧನೆಗೆ ಬಡತನ, ವಯಸ್ಸಿನ ನಿಬರ್ಂಧವಿಲ್ಲ. ಕಲಿಕೆ ಸಮಯದಲ್ಲಿ ಮೋಜು, ಮಸ್ತಿ ಮನೋರಂಜನೆಗೆ ಆದ್ಯತೆ ನೀಡದೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಉನ್ನತ ಸ್ಥಾನಕ್ಕೇರಬೇಕು ಎಂದು ಶ್ರೀ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ನಗರದ ವಿದ್ಯಾಗಿರಿಯ ಜೆಎಸ್‌ಎಸ್‌ನ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿ ಸಂಘಗಳ ಹಾಗೂ ಕ್ರೀಡಾ ಚಟುವಟಿಕೆಗೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಪ್ರಾಮಾಣಿಕ ಜೀವನ ನಡೆಸಿಕೊಂಡು ಬದುಕನ್ನು ಕಟ್ಟಿಕೊಳ್ಳಿ. ಬಡತನ ಎನ್ನುವುದು ಆರ್ಥಿಕ ಸಮಸ್ಯೆಗೆ ಹೊರತು ಸಾಧನೆಗಲ್ಲ. ವಿದ್ಯಾವಂತರಾದ ನಾವು ಕೆಲವೊಮ್ಮೆ ಪ್ರಾಣಿಗಳಿಗಿಂತ ಕೀಳಾಗಿ ವರ್ತಿಸುತ್ತೇವೆ. ಪ್ರಾಣಿಗಳಿಂದ ಮಾನವ ಕಲಿಯುವುದು ಸಾಕಷ್ಟಿದೆ. ಆಸೆ-ಆವೇಶಗಳಿಗೆ ಬಲಿಯಾಗದೆ ನಿಯತ್ತಿನ ಜೀವನ ನಿಮ್ಮದಾಗಬೇಕು. ಭಾರತ ಎನ್ನುವುದು ಒಂದು ದೇಶದ ಹೆಸರಾಗದೆ ಪ್ರತಿಯೊಬ್ಬರೂ ಭಾರತೀಯರು ಎನ್ನುವಂತಾಗಬೇಕು. ವಿದ್ಯಾವಂತರ ನಾಡಿನಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿರುವುದು ಕಳವಳಕಾರಿ ವಿಷಯ. ತಂದೆ-ತಾಯಿಯನ್ನು ಗೌರವಿಸಿರಿ ಅವರನ್ನು ಆರೈಕೆ ಮಾಡದಿದ್ದರೆ, ಎಂತಹ ವಿದ್ಯೆ ಪಡೆದರೂ ಆತ ಅವಿದ್ಯಾವಂತ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಅಜಿತ ಪ್ರಸಾದ ಮಾತನಾಡಿ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಂದ ವಿದ್ಯಾಭ್ಯಾಸಕ್ಕಾಗಿ ಸಂಸ್ಥೆಗೆ ಆಗಮಿಸುತ್ತಾರೆ. ಕ್ರೀಡೆ ಹಾಗೂ ಪಠ್ಯಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ಸಂಸ್ಥೆ ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದೆ ಎಂದರು.
ಡಾ. ನಾಗಚಂದ್ರ, ಡಾ. ಸೂರಜ್ ಜೈನ್, ಜಿನೇಂದ್ರ ಕುಂದಗೋಳ, ವಿವೇಕ ಲಕ್ಷ್ಮೇಶ್ವರ, ಎನ್.ಎಲ್. ಪುಡಕಲಕಟ್ಟಿ, ಡಾ. ಆರ್.ವಿ. ಚಿಟಗುಪ್ಪಿ ಇತರರು ಇದ್ದರು. ರೋಷಿಣಿ.ಎಂ. ಸ್ವಾಗತಿಸಿದರು. ಪ್ರದೀಪ ನಾಯಕ ಮತ್ತು ರಾಣಿ ಯು.ಟಿ ನಿರೂಪಿಸಿದರು. ಅದಿತಿ ಹುಕ್ಕೇರಿಕರ ವಂದಿಸಿದರು.