

ತುಮಕೂರು: ಮಹಿಳೆಯರು ಈಗ ಅಭಿವೃದ್ಧಿಯತ್ತ ಸಾಗುತ್ತಿದ್ದು, ಅವರಲ್ಲಿ ಅನೇಕ ಪ್ರತಿಭೆಗಳಿವೆ. ಅದನ್ನು ಅವಕಾಶ ಮತ್ತು ವೇದಿಕೆ ಸಿಕ್ಕಾಗ ತೆರೆದಿಡುವ ಪ್ರಯತ್ನ ಮಾಡಬೇಕು. ಮಹಿಳೆಯರು ಯಾರ ಮೇಲೂ ಅವಲಂಬಿತರಾಗದೇ ಸ್ವಾವಲಂಬಿಯಾಗಿ ಬದುಕು ನಡೆಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಧೀಶೆ ನೂರುನ್ನೀಸಾ ತಿಳಿಸಿದರು.
ತುಮಕೂರಿನ ಅಕ್ಷಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಹೆಣ್ಣು ಎಷ್ಟೇ ಸಾಧನೇ ಮಾಡಿದರೂ ಮಹಿಳೆಯರ ಮೇಲಿನ ದೌರ್ಜನ್ಯ, ಭ್ರೂಣಹತ್ಯೆ, ಅತ್ಯಾಚಾರ, ವೇಶ್ಯಾವಾಟಿಕೆ, ಆಸಿಡ್ ದಾಳಿ, ವರದಕ್ಷಿಣೆ ಕಿರುಕುಳ ನಡೆಯುತ್ತಲೇ ಇದೆ ಎಂದು ಬೇಸರ ವ್ಯಕ್ತಪಡಿಸಿದರು. ಕೌಟುಂಬಿಕ ದೌರ್ಜನ್ಯಗಳನ್ನಾಗಲಿ, ಶಾಲಾ-&ಕಾಲೇಜಿಗಳಲ್ಲಿ ರ್ಯಾಗಿಂಗ್ನಂತಹ ಸಮಸ್ಯೆಗಳನ್ನಾಗಲಿ, ಬಸ್, ರೈಲು ಸೇರಿ ಸಾರ್ವಜನಿಕ ಪ್ರಯಾಣಗಳಲ್ಲಾಗಲಿ ಕಿರುಕುಳ ಸಹಿಸಿಕೊಂಡು ಶೋಷಣೆಗೆ ಒಳಗಾಗದೆ ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದರು.
ಹೆಣ್ಣು ಮಕ್ಕಳ ರಕ್ಷಣೆಗಾಗಿ ಇರುವ ಕಾನೂನುಗಳ ಬಗ್ಗೆ ವಿವರ ನೀಡಿದರು. ವೇದಗಳ ಕಾಲದಿಂದ ಹಿಡಿದು ಹಲವಾರು ವಚನಕಾರರು, ಕವಿಗಳು, ಸ್ತ್ರೀಯರ ಸಹನಾಶಕ್ತಿ, ತಾಳ್ಮೆ, ತ್ಯಾಗ, ಮುಂತಾದವುಗಳನ್ನು ತಮ್ಮದೇ ಆದ ರೀತಿಯಲ್ಲಿ ಬಣ್ಣಿಸಿದ್ದಾರೆ. ಪ್ರತಿ ಕುಟುಂಬದ ಜನರು ಮಹಿಳೆಯನ್ನು ಗೌರವಿಸಿದರೆ, ಪ್ರಪಂಚವೇ ಗೌರವಿಸಿದಂತಾಗುತ್ತದೆ ಎಂದರು.
ರೋಟರಿ ಕ್ಲಬ್ನ ಪ್ರಥಮ ಮಹಿಳಾ ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ ಮಾತನಾಡಿ, ಮಹಿಳೆಯರು ಶಕ್ತಿ ಸಾಮರ್ಥ್ಯ ಬಳಸಿಕೊಂಡು ಸಾಧನೆ ಮಾಡಿ ಆದರ್ಶ ಸಂಸಾರ, ಸಮಾಜ ಕಟ್ಟಲು ಮುಂದಾಗಬೇಕು ಎಂದರು. ಶ್ರೀ ಗುರುಕುಲ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಶ್ಮೀ ಮಧುಜೈನ್, ಮಹೇಶ್ ಪಿಯುಸಿ ಕಾಲೇಜಿನ ಪ್ರಾಂಶುಪಾಲ ವಿದ್ಯಾಪಟೇಲ್, ವಿದ್ಯಾನಿಧಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಪಂಕಜಾ.ಎನ್.ಡಿ. ಅವರನ್ನು ಸನ್ಮಾನಿಸಲಾಯಿತು. ಅಕ್ಷಯ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಲೋಹಿತೇಶ್ ಜಗಕುಮಾರ್, ಎಲೆಕ್ಟ್ರಾನಿಕ್ಸ್ ಆಂಡ್ ಕಮೂನಿಕೇಷನ್ ವಿಭಾಗದ ಮುುಖ್ಯಸ್ಥ ಡಾ.ನಾಗೇಂದ್ರ ಕುಮಾರ್ ಇದ್ದರು.