ಅಳ್ಳೊಳ್ಳಿಯಲ್ಲಿ ರಂಗ ಶಿಕ್ಷಣ ಕೇಂದ್ರ ಆರಂಭಿಸಿ

klb1
ಚಿತ್ತಾಪುರ ತಾಲೂಕಿನ ಅಳ್ಳೊಳ್ಳಿಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀ ನಾಗಪ್ಪಯ್ಯ ಸ್ವಾಮೀಜಿ, ಪ್ರಭಾಕರ ಜೋಶಿ, ಮಹಿಪಾಲರಡ್ಡಿ ಮುನ್ನೂರು, ಸಂಜೀವ ಸಿರನೂರಕರ್ ಇದ್ದರು.
Published on

ಚಿತ್ತಾಪುರ: ಅಳ್ಳೊಳ್ಳಿ ಅಯ್ಯಪ್ಪಯ್ಯ ಮಹಾತ್ಮ ಪೀಠವು ರಂಗಭೂಮಿ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದೆ. ನೂರಾರು ಕಲಾವಿದರನ್ನು ಸೃಷ್ಟಿಸಿದ್ದು, 400ಕ್ಕೂ ಅಧಿಕ ನಾಟಕಗಳಿಗೆ ಸಂಗೀತ ಸೇವೆ ಸಲ್ಲಿಸಿದೆ. 900 ನಾಟಕ ಪ್ರದರ್ಶನಗಳನ್ನು ನೀಡಿದೆ. ಇಂತಹ ನೆಲದಲ್ಲಿ ಕನ್ನಡ ವಿಶ್ವವಿದ್ಯಾಲಯ ರಂಗ ಶಿಕ್ಷಣ ಕೇಂದ್ರ ಸ್ಥಾಪಿಸಬೇಕು ಎಂದು ಕಲಬುರಗಿ ರಂಗಾಯಣ ನಿಕಟಪೂರ್ವ ನಿರ್ದೇಶಕ ಪ್ರಭಾಕರ ಜೋಶಿ ಒತ್ತಾಯಿಸಿದರು.
ಅಳ್ಳೊಳ್ಳಿ ಗದ್ದುಗೆ ಮಠದ ಮಹಾತ್ಮ ಪೀಠದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ `ರಂಗಕಲೆ ಮತ್ತು ಸಂಗೀತ ಕ್ಷೇತ್ರಕ್ಕೆ ಚಿತ್ತಾಪುರ ತಾಲೂಕಿನ ಕೊಡುಗೆ' ವಿಷಯದ ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣದ ಪ್ರಥಮ ಗೋಷ್ಠಿಯಲ್ಲಿ ರಂಗ ಪರಂಪರೆ ಕುರಿತು ಉಪನ್ಯಾಸ ನೀಡಿದರು.

ಗ್ರಾಮೀಣ ರಂಗ ಪರಂಪರೆಗೆ ಅಳ್ಳೊಳ್ಳಿ ಮಹಾತ್ಮ ಪೀಠದ ಕೊಡುಗೆ ಅನನ್ಯವಾಗಿದೆ. ಇಲ್ಲಿಯ ಶ್ರೀ ನಾಗಪ್ಪಯ್ಯ ಸ್ವಾಮಿಗಳು ರಂಗ ತಪಸ್ವಿಗಳಾಗಿದ್ದಾರೆ. ಆದರೆ ಶ್ರೀಮಠದ ರಂಗಭೂಮಿ ಕೊಡುಗೆಯನ್ನು ಸರ್ಕಾರ ಗುರುತಿಸದಿರುವುದು ಬೇಸರ ಮೂಡಿಸಿದೆ. ಹಂಪಿ ಕನ್ನಡ ವಿವಿ ಮಠದ ರಂಗಕಲೆ, ಪರಂಪರೆ ಗುರುತಿಸಿ, ಗ್ರಾಮೀಣ ಭಾಗದಲ್ಲಿ ಶ್ರೇಷ್ಠ ಕಾರ್ಯಕ್ರಮ ಮಾಡುತ್ತಿರುವದು ಶ್ಲಾಘನೀಯ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರಡ್ಡಿ ಮುನ್ನೂರ್- ರಂಗ ಪ್ರಯೋಗಗಳು ಮತ್ತು ರಂಗ ತಾಂತ್ರಿಕತೆ, ಕಲಬುರಗಿಯ ರಾಜೇಂದ್ರ ಬಡಿಗೇರ- ರಂಗ ಪರಂಪರೆ ಚಾರಿತ್ರಿಕ ನೋಟ, ಚಿಂತಕ ಸಂಜೀವ ಸಿರನೂರಕರ್- ಸಂಗೀತ ಪರಂಪರೆ ಚಾರಿತ್ರಿಕ ನೋಟ, ಕಲಾವಿದ ಶಿವಣ್ಣ ಹಿಟ್ಟಿನ್- ರಂಗ ಸಂಗೀತ ಹಾಗೂ ಹಿಂದುಸ್ತಾನಿ ಸಂಗೀತ ಪರಂಪರೆ, ಬೆಳಗುಂಪಿಯ ಕಾಶಿನಾಥ ಬೆಳಗುಂಪಿ- ರಂಗ ಸಂಗೀತಗಾರರು ಮತ್ತು ಸಂಗೀತದ ವೈವಿದ್ಯತೆ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಶ್ರೀ ನಾಗಪ್ಪಯ್ಯ ಸ್ವಾಮೀಜಿ, ಶ್ರೀ ಸಿರಸಪ್ಪಯ್ಯ ಸ್ವಾಮೀಜಿ, ಹಂಪಿ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ, ನಾಟಕ ವಿಭಾಗದ ಸಂಚಾಲಕ ಡಾ.ವೀರೇಶ ಬಡಿಗೇರ, ಕಸಾಪ ತಾಲೂಕು ಅಧ್ಯಕ್ಷ ವೀರೇಂದ್ರ ಕೊಲ್ಲೂರ, ವಿಚಾರ ಸಂಕಿರಣ ನಿರ್ದೇಶಕ ನರಸಿಂಗರಾವ ಹೇಮನೂರ, ಪ್ರಮುಖರಾದ ಕಾಶಿನಾಥ ಬಿರಾದಾರ, ಬಾಬು ಕಾಶಿ, ಚಂದರ್ ಚವ್ಹಾಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net