

ಕೊಳ್ಳೇಗಾಲ: ನಾಟಿ ವೈದ್ಯಕೀಯದ ಹೆಸರಿನಲ್ಲಿ ಗಿಡ ಮೂಲಿಕೆಗಳ ಔಷಧ ತಯಾರಿಸಲು ಅಳಿವಿನಂಚಿನ ಪ್ರಾಣಿಗಳು ದಂಧೆಕೋರರ ಟಾರ್ಗೇಟ್ ಆಗಿ ಜೀವ ಕಳೆದುಕೊಳ್ಳುತ್ತಿವೆ.
ಅರಣ್ಯ ಹಾಗೂ ಕಾಡಂಚಿನ ಜಮೀನು ಪ್ರದೇಶದಲ್ಲಿ ಸಿಗುವ ಉಡ, ಚಿಪ್ಪು ಹಂದಿ (ಪ್ಯಾಂಗೋಲಿನ್), ಮಣ್ಣು ಮುಕ್ಕ ಹಾವುಗಳ ಸೆರೆ ಹಿಡಿದು ಮಾರಾಟ ಮಾಡುವ ಜಾಲ ದೊಡ್ಡದಾಗಿದೆ. ರಸ್ತೆ ಬದಿಯಲ್ಲಿ ಗಿಡ ಮೂಲಿಕೆ ಔಷಧ ನೀಡುತ್ತೇವೆಂದು ಟೆಂಟ್‌ಗಳನ್ನು ನಿರ್ಮಿಸಿಕೊಂಡು ವಾರಗಟ್ಟಲೆ ಉಳಿದುಕೊಳ್ಳುವ ವ್ಯಾಪಾರಿಗಳಿಗೂ ಈ ಪ್ರಕರಣ ನಂಟಿರುವುದು ಕೊಳ್ಳೇಗಾಲ ಸಿಐಡಿ ಪೊಲೀಸ್ ಅರಣ್ಯ ಸಂಚಾರ ದಳ ತನಿಖೆಯಲ್ಲಿ ಬಯಲಿಗೆ ಬಂದಿದೆ.
ಸ್ಥಳೀಯರಿಂದ ಉಡ, ಚಿಪ್ಪು ಹಂದಿ ಚಿಪ್ಪು, ಮಣ್ಣು ಮುಕ್ಕ ಹಾವು ಖರೀದಿಸಿ ತಮ್ಮ ಗಿಡ ಮೂಲಿಕೆ ಔಷಧಗಳ ತಯಾರಿಕೆಗೆ ಬಳಕೆ ಮಾಡಲಾಗುತ್ತಿರುವ ಬಗ್ಗೆ ತಿಳಿದ ಇಲಾಖೆ ಇಂತಹ ಪ್ರಕರಣಗಳ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದು ದಂಧೆಕೋರರನ್ನು ಬಂಧಿಸಿ ಜೈಲಿಗಟ್ಟಿದೆ.
ಪತ್ತೆಯಾದ ಪ್ರಕರಣಗಳೆಷ್ಟು?: 2022ರಲ್ಲಿ ಅರೇಪಾಳ್ಯದಲ್ಲಿ ಚಿಪ್ಪು ಹಂದಿ ಬೇಟೆಯಾಡಿ ಚಿಂಪು ಸಾಗಿಸುತ್ತಿದ್ದ ಒಬ್ಬನನ್ನು ಬಂಧಿಸಲಾಗಿದೆ. ಉತ್ತಂಬಳ್ಳಿ ಬಳಿ ಚಿಂಪು ಹಂದಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಹಿಡಿದು ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ. 2023 ಡಿಸೆಂಬರ್ ತಿಂಗಳಲ್ಲಿ ಜಾಗೇರಿ ಯಲ್ಲಿ 2 ಜೀವಂತ ಉಡ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. 2024 ಏಪ್ರಿಲ್‌ನಲ್ಲಿ ನರೀಪುರ ಬಳಿ 1 ಜೀವಂತ ಉಡ ಸಾಗಿಸುತ್ತಿದ್ದ ಒಬ್ಬನ ಬಂಧಿಸಿ ಕ್ರಮವಹಿಸಲಾಗಿದೆ. 2023 ರಲ್ಲಿ 2 ಮಣ್ಣು ಮುಕ್ಕ ಹಾವಿನ ಸಾಗಾಣೆ ಪ್ರಕರಣದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. 2024 ನವೆಂಬರ್ ತಿಂಗಳಲ್ಲಿ ರಾಮಪುರ ಬಳಿ 1 ಮಣ್ಣುಮುಕ್ಕ ಹಾವು ಮಾರಾಟಕ್ಕೆ ಸಾಗಿಸುತ್ತಿದ್ದ ಒಬ್ಬ ಬಂಧನಕ್ಕೆ ಒಳಗಾಗಿದ್ದಾನೆ. ಈ ವರ್ಷ 2 ಮಣ್ಣು ಮುಕ್ಕ ಹಾವು ಸಾಗಣೆ ಪ್ರಕರಣ ದಾಖಲಾಗಿದ್ದು ಮೂವರನ್ನು ಬಂಧಿಸಲಾಗಿದೆ.
ಚೀನಾಕ್ಕೆ ರವಾನೆ:
ಚಿಪ್ಪು ಹಂದಿಗಳ ಚಿಪ್ಪುಗಳ ಮಾರಾಟ ಜಾಲ ಚೀನಾವರೆಗೂ ಇದೆ ಎಂಬುದು ಇಲಾಖೆ ಮೂಲಗಳಿಂದ ತಿಳಿದು ಬಂದಿದೆ. ಈ ಪ್ರಾಣಿಯ ಮಾಂಸಕ್ಕೆ ಔಷಧ ಗುಣ ಹಾಗೂ ಕಾಮೋತ್ತೆಜಕ ಅಂಶವಿರುವ ಕಾರಣಕ್ಕೆ ಬೇಡಿಕೆ ಹೆಚ್ಚಿದ್ದು, ಕಳ್ಳ ಬೇಟೆ ಹಾಗೂ ಇತರ ದೇಶಗಳಿಗೆ ರವಾನೆ ಆಗುತ್ತಿದೆ. ಹಂದಿ ಚಿಪ್ಪನ್ನು ಪುಡಿ ಮಾಡಿ ಚೀನಾಗೆ ಸಾಗಿಸುವ ಜಾಲವಿದೆ. ಹಾಗಾಗಿ ಚಿಪ್ಪು ಹಂದಿಯ ಮೇಲೆ ದಂಧೆಕೋರರ ಕಣ್ಣು ಬಿದ್ದಿದೆ.
ಗಿಡಮೂಲಿಕೆ ವ್ಯಾಪಾರಿಗಳಿಗೆ ಮಾರಾಟ:
ರೋಗ ನಿರೋಧಕ ಶಕ್ತಿ ಹೆಚ್ಚಲು, ಲೈಂಗಿಕ ಆಸಕ್ತಿ ಹೊಂದಲು, ಆರೋಗ್ಯ ಸಮೃದ್ಧಿಯಾಗಲು ಇನ್ನೂ ಹಲವು ಆರೋಗ್ಯ ಸಮಸ್ಯೆಗೆ ಗಿಡಮೂಲಿಕೆಗಳಿಂದ ಪರಿಹಾರ ಸಿಗಲಿದೆ ಎಂದು ರಸ್ತೆ ಬದಿಯಲ್ಲಿ ವ್ಯಾಪಾರಕ್ಕೀಳಿಯುವವರಿಗೆ ಹಂದಿ ಚಿಪ್ಪು, ಮಣ್ಣು ಮುಕ್ಕ ಹಾವು ಹಾಗೂ ಉಡವನ್ನು ದಂಧೆ ಕೋರರು ಮಾರಾಟ ಮಾಡುವುದು ತನಿಖೆಯಿಂದ ತಿಳಿದಿದೆ.
ಮಣ್ಣು ಮುಕ್ಕ ಹಾವಿನ ದೇಹದಲ್ಲಿರುವ ಗ್ರೀಸ್ ಮಾದರಿ ಅಂಶಕ್ಕೆ ಔಷಧ ಗುಣವಿದೆ. ಇನ್ನು ಉಡ ಮಾಂಸ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುವ ಜತೆಗೆ ದೇಹ ಸದೃಢತೆ ಕಾಣಲಿದೆ ಎಂಬ ಕಾರಣಕ್ಕೆ ಇದರಿಂದ ಕೆಲವು ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿರುವುದನ್ನು ತಿಳಿದು ಇಲಾಖೆ ಗಿಡಮೂಲಿಕೆ ವ್ಯಾಪಾರಿಗಳ ಮೇಲೆ ಕಣ್ಣಿಟ್ಟಿದ್ದಾರೆ.
ತಂಡ ಕಾರ್ಯಾಚರಣೆ: ಕೊಳ್ಳೇಗಾಲ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಸಿಪಿಐ ವಿಜಯರಾಜ್, ಹೆಡ್‌ಕಾನ್‌ಸ್ಟೇಬಲ್, ರಾಮಚಂದ್ರ, ಬಸವರಾಜು, ಜಮೀಲ್ ಅಹಮದ್, ಸ್ವಾಮಿ, ಲತಾ ಹಾಗೂ ಕಾನ್‌ಸ್ಟೇಬಲ್ ಬಸವರಾಜು, ಚಾಲಕ ಪ್ರಭಾಕರ್ ಅರಣ್ಯ ಹಾಗೂ ವನ್ಯ ಜೀವಿ ಸಂಬಂಧಿಸಿದ ಅಪರಾಧ ಕೃತ್ಯಗಳನ್ನು ನಡೆಸುವ ದಂಧೆ ಕೋರರ ಪತ್ತೆ ಕಾರ್ಯಾಚರಣೆಯಲ್ಲಿದ್ದಾರೆ.
ಔಷಧಿ ಅಂಶವಿರುವ ಕಾರಣಕ್ಕೆ ಅಳವಂಚಿನ ಚಿಪ್ಪು ಹಂದಿ, ಉಡ ಹಾಗೂ ಮಣ್ಣು ಮುಕ್ಕ ಹಾವಿನ ಮಾರಾಟ ಮಾಡುವ ಪ್ರಕರಣದಲ್ಲಿ ದಂಧೆಕೋರರ ಮೇಲೆ ಕ್ರಮವಹಿಸಲಾಗಿದೆ. ರಸ್ತೆ ಬದಿಯ ಗಿಡಮೂಲಿಕೆಗಳ ವ್ಯಾಪಾರಿಗಳಿಗೆ ದಂಧೆಕೋರರು ಪ್ರಾಣಿಗಳು ಹಿಡಿದು ಮಾರಾಟ ಮಾಡುತ್ತಾರೆ. ಹಾಗಾಗಿ ಇಂತಹ ಜಾಲದ ಬಗ್ಗೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಹದ್ದಿನ ಕಣ್ಣಿಟ್ಟಿದೆ. ವಿಜಯರಾಜ್ ಪಿಎಸ್‌ಐ, ಸಿಐಡಿ ಪೊಲೀಸ್ ಅರಣ್ಯ ಸಂಚಾರ ದಳ, ಕೊಳ್ಳೇಗಾಲ.