ಅಲ್ಲಮಪ್ರಭು ಸಂಘಕ್ಕೆ ₹ 62.59 ಲಕ್ಷ ಲಾಭ

Allam Prabhu Bank
Published on

ಬೀದರ್: ಇಲ್ಲಿನ ಅಲ್ಲಮಪ್ರಭು ಪತ್ತಿನ ಸಹಕಾರ ಸಂಘ 2019-20ನೇ ಸಾಲಿನಲ್ಲಿ 62.59 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕುಶಾಲರಾವ್ ಪಾಟೀಲ್ ಖಾಜಾಪುರ ತಿಳಿಸಿದರು.

ನಗರದ ಬಸವ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಘದ 18ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಸದಸ್ಯರಿಗೆ ಶೇ.25 ರಷ್ಟು ಲಾಭಾಂಶ ಕೊಡಲು ನಿರ್ಧರಿಸಲಾಗಿದೆ. ಮಾರ್ಚ್ ಅಂತ್ಯಕ್ಕೆ ಸಂಘವು 11.54 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. 7.95 ಕೋಟಿ ರೂ. ವಿವಿಧ ರೀತಿಯ ಠೇವಣಿಗಳಿವೆ. ಕಾಯ್ದಿಟ್ಟ ಮತ್ತು ಇತರ ನಿಧಿಗಳ ಮೊತ್ತ 2.61 ಕೋಟಿ ರೂ. ಇದೆ. ಸದಸ್ಯರಿಗೆ 8.16 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ವಿವರಿಸಿದರು.

ಈಗಾಗಲೇ ಸಂಘಕ್ಕೆ 1200 ಚದರ ಅಡಿಯ ನಿವೇಶನ ಖರೀದಿಸಲಾಗಿದೆ. ಅದರ ಪಕ್ಕದಲ್ಲೇ ಖಾಲಿ ಇರುವ ಇನ್ನೊಂದು ನಿವೇಶನ ಖರೀದಿಸಿ ಸಂಘದ ಸುಸಜ್ಜಿತ ಸ್ವಂತ ಕಟ್ಟಡ ನಿರ್ಮಿಸಲು ಯೋಜಿಸಲಾಗಿದೆ. ಸಂಘದ ಆಡಿಟ್ ವೃಂದ ಬಿ' ದಿಂದಎ' ಗೆ ತರುವುದಕ್ಕೆ ಎಲ್ಲ ಪ್ರಯತ್ನ ನಡೆದಿವೆ ಎಂದು ಹೇಳಿದರು.

ಸಂಘದ ಸಿಇಒ ಶಿವಕುಮಾರ ಸ್ವಾಮಿ ವಾರ್ಷಿಕ ವರದಿ ಓದಿದರು. ಸದಸ್ಯ ಬಾಬುರಾವ ಪಾಟೀಲ್ ಮಾತನಾಡಿದರು. ನರ್ಸಿಂಗ್ ಹೋಮ್ ಅಸೋಸಿಯೇಷನ್ ಅಧ್ಯಕ್ಷ ಡಾ. ಸಿ.ಆನಂದರಾವ್, ಹಿರಿಯ ವಕೀಲ ಗಂಗಶೆಟ್ಟಿ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಸಂಜುಕುಮಾರ ಪಾಟೀಲ್, ನಿರ್ದೇಶಕರಾದ ರಾಜೇಂದ್ರಕುಮಾರ ಗಂದಗೆ, ವಿವೇಕಾನಂದ ಪಟ್ನೆ, ಅಶೋಕ ಶೀಲವಂತ, ಬಸವಕುಮಾರ ಪಾಟೀಲ್, ರಾಜಕುಮಾರ ಬುಡ್ಡನೋರ, ರಾಜಕುಮಾರ ಕಮಠಾಣೆ, ಪ್ರಕಾಶ ನಿಂಬೂರೆ, ಸುಮನ್ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net