

ಕಲಬುರಗಿ: ಅಲ್ಲಮನ ವಚನಗಳು ತುಂಬಾ ಸರಳ. ಅದನ್ನು ಅರ್ಥ ಮಾಡಿಕೊಳ್ಳಲು ಭಾಷೆ, ವ್ಯಾಕರಣ ಮುಖ್ಯ. ಪ್ರತಿ ಪದ ಬಿಡಿಸಿದಾಗ ಅಲ್ಲಮನ ವಚನಗಳನ್ನು ಅರ್ಥ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ಕನ್ನಡ ಸಾಹಿತ್ಯಕ್ಕೆ ಕಲ್ಯಾಣ ಕರ್ನಾಟಕದ ಸಾಹಿತ್ತಿಕ ಕೊಡುಗೆ ಎಂಬ ಎರಡು ದಿನದ ವಿಚಾರ ಸಂಕಿರಣ ಆಯೋಜಿಸುವುದರ ಜತೆಗೆ ಬೀದರ, ವಿಜಯಪುರ ಮತ್ತು ಕಲಬುರಗಿಯ ಉಪಭಾಷೆ ಪದಕೋಶ ಮಾಡಿಸಲಾಗುವುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಮಾತನಾಡಿ, ಆಲಯವನ್ನು ಬಯಲು ಮಾಡಬೇಕು. ಬಯಲನ್ನು ಆಲಯ ಮಾಡಬೇಕು ಆಧ್ಯಾತ್ಮದೊಳಗೂ ಸುಂದರವಾದ ಲೌಕಿಕ ಬದುಕು ಕಟ್ಟಿಕೊಳ್ಳಲು ವಚನಕಾರರು ಇಂದಿಗೂ ನಮಗೆ ಮಾದರಿಯಾಗಿದ್ದಾರೆ. ಆದರೆ ನಾವು ಅವರನ್ನು ಅರ್ಥ ಮಾಡಿಕೊಳ್ಳದೆ ಪ್ರತಿಯೊಬ್ಬ ವಚನಕಾರರನ್ನು ಜಾತಿ ಸೀಮಿತಗೊಳಿಸಿ ಸಮಾಜವನ್ನು ಹಾಳುಮಾಡುವ ಹುನ್ನಾರ ಮಾಡುತ್ತಿದ್ದೇವೆ ಇದು ಹೋಗಬೇಕು. ಶರಣರು ಮತ್ತು ವಚನಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಸಮ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಡಾ. ರಘುನಾಥ ಚ.ಹ.. ಡಾ. ವ್ಹಿ.ಜಿ. ಪೂಜಾರ, ಡಾ. ವಿಕ್ರಮ ವಿಸಾಜಿ, ಡಾ. ಶ್ರೀಶೈಲ ನಾಗರಾಳ, ಡಾ. ಸೂರ್ಯಕಾಂತ ಸುಜ್ಯಾತ್, ಪ್ರೊ. ಈಶ್ವರ ಇಂಗನ್, ಎಸ್.ಎಂ. ಪಟ್ಟಣಕರ್, ಡಾ. ಗವಿಸಿದ್ಧಪ ಪಾಟೀಲ, ಡಾ. ಜಯದೇವಿ ಗಾಯಕವಾಡ, ಮಹಿಪಾಲರಡ್ಡಿ ಮುನ್ನೂರ, ಪಲ್ಲವ ವೆಂಕಟೇಶ ಭಾಗವಹಿಸಿದ್ದರು.
ಡಾ. ಎಂ.ಬಿ. ಕಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸ್ವಾತಿ ವಚನ ಗಾಯನ ಮಾಡಿದರು. ಡಾ. ಸಿದ್ಧಲಿಂಗ ದಬ್ಬಾ ನಿರೂಪಣೆ ಮಾಡಿದರು. ಡಾ. ಶಿವಪುತ್ರ ಮಾವಿನ ವಂದಿಸಿದರು.