ಅಲ್ಪಸಂಖ್ಯಾತರು ಹೆಚ್ಚು ವಾಸಿಸುವ ಸ್ಥಳಗಳಲ್ಲಿ ಅಂಗನವಾಡಿ ಕೇಂದ್ರ ಸ್ಥಾಪಿಸಿ ; ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಸೂಚನೆ

28TMK_Alpasankyatha
Published on

ತುಮಕೂರು : ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಜಿಪಂ ಸಭಾಂಗಣದಲ್ಲಿ ಗುರುವಾರ ಅಲ್ಪಸಂಖ್ಯಾತರ ಸಮುದಾಯಗಳ ಕುಂದು ಕೊರತೆ ಸಭೆ ನಡೆಸಿದರು.

ವಿದ್ಯಾರ್ಥಿ ವೇತನ ಬಿಡುಗಡೆಯಾಗದಿರುವುದು, ಸ್ಮಶಾನಕ್ಕೆ ಜಾಗದ ಸಮಸ್ಯೆ, ಗಂಗಾ ಕಲ್ಯಾಣ ಯೋಜನೆಯ ಸಮಸ್ಯೆಗಳು, ಬಸದಿ ಬೆಟ್ಟದ ಅಭಿವೃದ್ಧಿ ಮತ್ತಿತರರ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ಸಮುದಾಯದ ಮುಖಂಡರು ಅಧ್ಯಕ್ಷರ ಗಮನ ಸೆಳೆದರು.

ನಗರದ ಪಿ.ಎಚ್.ಕಾಲನಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಸರ್ಕಾರಿ ಶಾಲೆ ನಡೆಯುತ್ತಿದ್ದು, 300 ಬಾಲಕಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರ್ಕಾರದಿಂದ ಮೂಲ ಸೌಲಭ್ಯವುಳ್ಳ ಕಟ್ಟಡ ನಿರ್ಮಾಣ ಮಾಡುವಂತೆ ಮನವಿ ಮಾಡಿದ ಮನವಿಗೆ ಪ್ರತಿಕ್ರಿಯಿಸಿ, ಶಿಕ್ಷಣ ಇಲಾಖೆ ಆಯುಕ್ತರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಅಬ್ದುಲ್ ಅಜೀಮ್ ಭರವಸೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಲ್ಪಸಂಖ್ಯಾತರು ಹೆಚ್ಚು ವಾಸಿಸುವ ಸ್ಥಳಗಳಲ್ಲಿ ಅಂಗನವಾಡಿ ಕೇಂದ್ರ ಸ್ಥಾಪಿಸಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆಯಾಗಬೇಕು, ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಅಂಗನವಾಡಿ ಶಿಕ್ಷಣ ಮುಗಿದ ಬಳಿಕ ಶಾಲೆಗೆ ಎಷ್ಟು ಮಕ್ಕಳು ಸೇರಿದ್ದಾರೆಂಬ ಮಾಹಿತಿಯನ್ನು ಶಿಕ್ಷಣ ಇಲಾಖೆಯಿಂದ ಪಡೆದುಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜು ಅವರಿಗೆ ಸೂಚಿಸಿದರು.

ವಕ್ಫ್ ಆಸ್ತಿ ರಕ್ಷಣೆ ಹಾಗೂ ಅಲ್ಪಸಂಖ್ಯಾತರ ಯೋಜನೆಗಳ ಅನುದಾನದ ಅನುಷ್ಠಾನಕ್ಕೆ ಎಲ್ಲ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುವಂತೆ ಸೂಚಿಸಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯಡಿ ಅಲ್ಪಸಂಖ್ಯಾತ ಪ್ರದೇಶವನ್ನೂ ಅಭಿವೃದ್ಧಿ ಪಡಿಸುವುದಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್‌ಗೆ ಸೂಚಿಸಿದರು.

ಸಭೆಗೂ ಪೂರ್ವದಲ್ಲಿ ಮೆಳೆಕೋಟೆ ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಅಧ್ಯಕ್ಷ ಅಬ್ದುಲ್ ಅಜೀಮ್ ಭೇಟಿ ನೀಡಿ ಪರಿಶೀಲಿಸಿದರು. ಆಯೋಗದ ಸದಸ್ಯರಾದ ಪಿ.ಎಸ್.ನಿಸಾರ್ ಅಹ್ಮದ್, ವಕ್ಫ್ ಮಂಡಳಿ ಅಧ್ಯಕ್ಷ ಮುಸ್ತಾಕ್ ಅಹ್ಮದ್, ಕ್ರಿಶ್ಚಿಯನ್ ಸಮುದಾಯದ ಜೆಫಿನ್ ಜಾಯ್, ಜೈನ್ ಸಮುದಾಯದ ಶೀತಲ್ ಕುಮಾರ್ ಇದ್ದರು.

ವಕ್ಫ್ ಅಸ್ತಿಯೆಂದು ನೋಟಿಫಿಕೇಷನ್ ಆಗಿ ಒತ್ತುವರಿಯಾಗಿರುವ ವಕ್ಫ್ ಅಸ್ತಿ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸಭೆಯಲ್ಲಿ ಸೂಚಿಸಲಾಗಿದ್ದು, ಸರ್ಕಾರಕ್ಕೂ ಮನವಿ ಮಾಡಲಾಗಿದೆ. ಒತ್ತುವರಿಯಾಗಿರುವ ವಕ್ಫ್ ಆಸ್ತಿ ವಕ್ಫ್ ಬೋರ್ಡ್‌ಗೆ ವಾಪಾಸುವಂತೆ ಕ್ರಮ ಕೈಗೊಳ್ಳಲಾಗಿದೆ. ಅಲ್ಪಸಂಖ್ಯಾತರಿಗಾಗಿ ಪ್ರಾರ್ಥನಾ ಮೈದಾನ ಅಭಿವೃದ್ಧಿ ಪಡಿಸಲು ಅ ರಾಬು ಹಾಗೂ ಸಿಎ ನಿವೇಶನಗಳನ್ನು ಒದಗಿಸಲು ಆಧ್ಯತೆ ನೀಡಲು ಮನವಿ ಮಾಡಲಾಗಿದೆ. ಅಬ್ದುಲ್ ಅಜೀಮ್ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net