ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಅಗತ್ಯ ನಿಧಿ

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಅಗತ್ಯ ನಿಧಿ
Published on

ಅರಸೀಕೆರೆ : ಅಲ್ಪಸಂಖ್ಯಾತ ಸಮುದಾಯದ ಕಲ್ಯಾಣಕ್ಕೆ ಸಂಸದರ ನಿಧಿಯಿಂದ ಅಗತ್ಯ ಅನುದಾನ ನೀಡುವುದಾಗಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ಜೆಡಿಎಸ್ ಮುಖಂಡ ಇ.ಕೆ.ರಿಯಾಜ್ ನಿವಾಸದ ಬಳಿ ಮಂಗಳವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಹಾಸನ,ಹೊಳೆನರಸೀಪುರ ಸೇರಿ ಹಲವೆಡೆ ಭವ್ಯ ಮಸೀದಿಗಳನ್ನು ನಿರ್ಮಿಸಲು ಎಲ್ಲ ರೀತಿಯ ನೆರವು ನೀಡಲಾಗಿದೆ. ಶಾಸಕರಿಗೆಈಗಾಗಲೇ ಪ್ರತಿ ಬಾರಿ 90 ಲಕ್ಷದಿಂದ 1 ಕೋಟಿ ರೂ.ಗಳವರೆಗೆ ಅನುದಾನ ನೀಡಿದ್ದೇನೆ. ಅದೇ ಮಾದರಿಯಲ್ಲಿ ನಗರದ ಮಸೀದಿಗಳ ಅಭಿವೃದ್ಧಿಗೂ ಸಂಸದರ ನಿಧಿಯಿಂದ ಅಗತ್ಯ ನೆರವು ಒದಗಿಸಲಿದ್ದೇನೆ. ಅಲ್ಪಸಂಖ್ಯಾತರ ಕಲ್ಯಾಣವೇ ಪಕ್ಷದ ಮೊದಲ ಆದ್ಯತೆಯಾಗಿದ್ದುಯಾರೊಬ್ಬರೂ ಅತಂಕಪಡುವ ಅಗತ್ಯವಿಲ್ಲ.ನನ್ನ ಕಾರ್ಯ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಅಹವಾಲು ಆಲಿಸಲಾಗುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಳಗೊಂಡಂತೆ ಎಲ್ಲರೂ ಕಾರ್ಯತತ್ಪರರಾಗಿದ್ದು ನಿಮ್ಮೆಲ್ಲರ ಆಶಿರ್ವಾದವಿರಲಿ ಎಂದರು.

ವಕ್ಪ್ ಬೋರ್ಡ್ ಜಿಲ್ಲಾಧ್ಯಕ್ಷ ಸಯ್ಯದ್ ಸಿಕಂದರ್, ಮುಖಂಡ ಇ.ಕೆ.ರಿಯಾಜ್‌ಖಾನ್, ಏಜಾಜ್ ಖಾನ್, ನಯಾಜ್ ಖಾನ್, ತಾಜ್ ಪಾಷಾ, ಮೀರ್ ಮಹಮೂದ್, ತಾಪಂ ಮಾಜಿ ಸದಸ್ಯರಾದ ಹೊಸೂರ್ ಗಂಗಾಧರ್,ಶೇಖರ್‌ನಾಯ್ಕ ವೇದಿಕೆಯಲ್ಲಿದ್ದರು.

ಗೈರು- ತೆನೆ ಇಳಿಸಿ ಕೈ ಹಿಡಿಯಲು ಮುಂದಾಗಿದ್ದಾರೆ ಎನ್ನುವ ಗುಸು ಗುಸು ಹಬ್ಬಿರುವ ಬೆನ್ನಲ್ಲೇ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಮತ್ತವರ ಬೆಂಬಲಿಗರು ಸಂಸದ ಪ್ರಜ್ವಲ್ ರೇವಣ್ಣ ಜತೆ ಕಾಣಿಸಿಕೊಳ್ಳದೇ ಕಾರ್ಯಕ್ರಮಕ್ಕೆ ಗೈರಾಗಿರುವುದು ಚರ್ಚೆಗೆ ಗ್ರಾಸವಾಗಿದೆ.ಮತ್ತೊಂದೆಡೆ ಕಾಂಗ್ರೆಸ್ ಮುಖಂಡರಾದ ಬಾಣಾವರ ಅಶೋಕ್, ತೊಂಡಿಗನಹಳ್ಳಿ ಕೃಷ್ಣಮೂರ್ತಿ,ಹರವೇಗೌಡ ಸೇರಿ ಕೆಲ ಕುರುಬ ಸಮುದಾಯದ ಮುಖಂಡರು ಬಾಣಾವರ ಗ್ರಾಮದ ಮಸೀದಿ, ಮಂದಿರಗಳಿಗೆ ಅನುದಾನ ನೀಡುವಂತೆ ಕೋರಿ ಸಂಸದರಿಗೆ ಮನವಿ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.

27ಎಆರ್‌ಎಸ್1ಇಪಿ-ಕಾರ್ಯಕರ್ತರ ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಪಾಲ್ಗೊಂಡು ಮಾತನಾಡಿದರು. ಸಯ್ಯದ್ ಸಿಕಂದರ್,ಮುಖಂಡ ಇ.ಕೆ.ರಿಯಾಜ್‌ಖಾನ್,ಏಜಾಜ್ ಖಾನ್, ನಯಾಜ್ ಖಾನ್,ತಾಜ್ ಪಾಷಾ,ಮೀರ್ ಮಹಮೂದ್ ಇತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net