

ಮೂಡಿಗೆರೆ: ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಪಟ್ಟಣದ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ. ವಿವಿಧ ವಾರ್ಡುಗಳ ಸಿಮೆಂಟ್ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಿಸಲಾಗುವುದು ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು.
ಪಪಂ 6ನೇ ವಾರ್ಡ್‌ನಲ್ಲಿ ಸೋಮವಾರ ಸಿಮೆಂಟ್ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪಟ್ಟಣದ 5 ವಾರ್ಡ್‌ಗಳಲ್ಲಿ ರಸ್ತೆ ಮತ್ತು ಬಾಕ್ಸ್ ಚರಂಡಿ ಅಭಿವೃದ್ಧಿಪಡಿಸಲಾಗುವುದು. ಉಳಿದ 6 ವಾರ್ಡ್‌ಗಳ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣಕ್ಕೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಅನುದಾನಕ್ಕಾಗಿ ಬೇಡಿಕೆ ಇಡಲಾಗಿದೆ. ಸದ್ಯದಲ್ಲೇ ಅನುದಾನ ಬಿಡುಗಡೆಯಾಗಲಿದೆ. ನಂತರ ಎಲ್ಲ ವಾರ್ಡ್‌ಗಳ ಕಾಮಗಾರಿ ತ್ವರಿಗತಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಪ.ಜಾತಿ ಮತ್ತು ಪ.ಪಂಗಡಗಳ ಉಪಯೋಜನೆಯಲ್ಲಿ 1.50 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಕಳಸ, ಆವತಿ, ಅಂಬಳೆ, ಗೋಣಿಬೀಡು, ಬಣಕಲ್, ಬಾಳೂರು, ಕಸಬಾ, ಆಲ್ದೂರು ಹೋಬಳಿಗಳ 11 ಕಡೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು. ದಾರದಹಳ್ಳಿ ಮುಖ್ಯಕೇಂದ್ರದಿಂದ ಕೆಸವಳಲು ಕಾಲನಿಗೆ ತೆರಳುವ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಉಳಿದ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು. ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರೊದಗಿಸಲು ಅಮೃತ್ ಯೋಜನೆಯಲ್ಲಿ 19 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಪಟ್ಟಣದ ಎಲ್ಲ ಬಡಾವಣೆಗಳಲ್ಲಿ ಪೈಪ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. 50 ಲಕ್ಷ ಲೀಟರ್ ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಸದ್ಯದಲ್ಲೇ ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರು ಒದಗಿಸಲಾಗುವುದು ಎಂದು ತಿಳಿಸಿದರು.
ಪಪಂ ಅಧ್ಯಕ್ಷೆ ಗೀತಾ ರಂಜನ್ ಅಜಿತ್‌ಕುಮಾರ್, ಉಪಾಧ್ಯಕ್ಷ ಹೊಸಕೆರೆ ರಮೇಶ್, ಸದಸ್ಯರಾದ ಕೆ.ವೆಂಕಟೇಶ್, ಖುಷಿದಾಭಾನು, ಬಿ.ಕೆ.ಜಯಮ್ಮ, ಸಿ.ಬಿ.ಶಂಕರ್, ಅಜ್ಮಲ್, ಜದಿದ್ ಜುಮ್ಮಾ ಮಸೀದಿ ಕಾರ್ಯದರ್ಶಿ ವಾಜಿದ್ ಹುಸೇನ್ ಇತರರಿದ್ದರು.