

ಹುಬ್ಬಳ್ಳಿ: ಸಾಮಾಜಿಕ ಹಕ್ಕುಗಳಿಂದ ವಂಚಿತರಾಗಿರುವ ಕ್ಷೇತ್ರದ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಈ ಸಮುದಾಯಗಳು ಮುನ್ನೆಲೆಗೆ ಬರಬೇಕು. ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದುವರಿಯಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಹಳೇ ಹುಬ್ಬಳ್ಳಿ ಶಿವಶಂಕರ ಕಾಲನಿಯ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದವರ ಉನ್ನತಿಗೆ ಹಿಂದುಳಿದ ವರ್ಗ ಇಲಾಖೆಯ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ ಹಾಗೂ ದೇವರಾಜ ಅರಸು ಕಲ್ಪನೆಯಂತೆ ಎಲ್ಲ ಸಮುದಾಯಗಳು ಪ್ರಾತಿನಿಧ್ಯ ಹೊಂದಬೇಕು. ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಬಂದಾಗಲೇ ದೇಶದ ಅಭಿವೃದ್ಧಿಯಾಗುತ್ತದೆ ಎಂದರು.
ವಿಸ್ತರಣಾಧಿಕಾರಿ ಸುರೇಶ ಗುರಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದುಳಿದ ವರ್ಗಗಳ ಇಲಾಖೆಯಿಂದ 40 ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳನ್ನು ಗುರುತಿಸಲಾಗಿದೆ. ಇಲಾಖೆಯಡಿ 2007ರಲ್ಲಿ ಪ್ರತ್ಯೇಕ ಕೋಶ ಆರಂಭಿಸಿ ಆರ್ಥಿಕವಾಗಿ ಹಿಂದುಳಿದವರಿಗೆ ಯೋಜನೆ ರೂಪಿಸಲಾಗಿದೆ ಎಂದರು.
ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹದೇವ ಮಳಲಿ, ಶಿಶು ಅಭಿವೃದ್ಧಿ ಅಧಿಕಾರಿ ಸುಧಾ ಹೊಸಮನಿ ಅವರು ವಿವಿಧ ಯೋಜನೆಗಳ ಕುರಿತು ಉಪನ್ಯಾಸ ನೀಡಿದರು.
ಪಾಲಿಕೆ ಮಾಜಿ ಸದಸ್ಯ ದಶರಥ ವಾಲಿ, ಮುಖಂಡರಾದ ಜಯರಾಜ ಡೊಂಗ್ರಿ, ಕೃಷ್ಣಾ ಕಾನನ್, ಧರ್ಮರಾಜ ಪೂಜಾರ, ನಾಗೇಶ ಕಟ್ಟಿಮನಿ, ಪರುಶುರಾಮ ದೊಡ್ಡಮನಿ ಇತರರು ಇದ್ದರು.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಿ.ವಿ. ಕರವಿಮಠ ಸ್ವಾಗತಿಸಿದರು. ಮಹೇಶ ಅಂಗಡಿ ಪ್ರಾರ್ಥಿಸಿದರು. ಇಂದುಧರ ಮುತ್ತಳ್ಳಿ ನಿರೂಪಿಸಿದರು.