

ಹುಬ್ಬಳ್ಳಿ: ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ತಮಗೆ ಅಲೆಮಾರಿ ಸಮುದಾಯಕ್ಕೆ ನೀಡುವಂಥ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹುಬ್ಬಳ್ಳಿಯ ಕಂಜಾರ ಬಾಟ್ ಹಾಗೂ ಚಪ್ಪರಬಂದ್ ಸಮುದಾಯದ ನಿವಾಸಿಗಳು ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯ ಸೆಟ್ಲ್ಮೆಂಟ್ ಪ್ರದೇಶದ ಕಂಜಾರ ಬಾಟ್ ಹಾಗೂ ಚಪ್ಪರಬಂದ್ ಕಾಲನಿಗಳಿಗೆ ಮಂಗಳವಾರ ಭೇಟಿ ನೀಡಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಅವರ ಸಮ್ಮುಖದಲ್ಲಿ ಈ ಆಗ್ರಹ ವ್ಯಕ್ತವಾಗಿದೆ.
ಆಯೋಗದ ಅಧ್ಯಕ್ಷರು ಸದಸ್ಯರ ಜತೆಗೂಡಿ ನಿವಾಸಿಗಳ ಸಭೆ ನಡೆಸಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕೈಗೊಂಡರು.
‘ಸಮುದಾಯದ ಜನರ ಅಭಿಪ್ರಾಯ ಹಾಗೂ ಸಮೀಕ್ಷೆಯ ಅಂಶಗಳ ಆಧಾರದ ಮೇಲೆ ಕಂಜಾರ ಬಾಟ್ ಹಾಗೂ ಚಪ್ಪರಬಂದ್ ಸಮುದಾಯಗಳನ್ನು ಅಲೆಮಾರಿ ಸಮುದಾಯಕ್ಕೆ ಸೇರಿಸುವ ಕುರಿತು ಮಾಹಿತಿ ಸಂಗ್ರಹಿಸಿ ಶೀಘ್ರದಲ್ಲಿಯೇ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಯಪ್ರಕಾಶ ಹೆಗ್ಡೆ ಭರವಸೆ ನೀಡಿದರು.
ಆಯೋಗದ ಸದಸ್ಯರಾದ ಕಲ್ಯಾಣಕುಮಾರ ಎಚ್.ಎಸ್., ರಾಜಶೇಖರ ಬಿ. ಎಸ್. ಮತ್ತು ಅರುಣಕುಮಾರ ಇದ್ದರು. ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆಯುತ್ತಿರುವ ಉಣಕಲ್ನಲ್ಲಿರುವ ಅನಾಥ ಮತ್ತು ಬುದ್ಧಿಮಾಂದ್ಯ ಬಾಲಕಿಯರ ಬಾಲಮಂದಿರಕ್ಕೆ ಭೇಟಿ ನೀಡಿ ಸೌಲಭ್ಯಗಳನ್ನು ಪರಿಶೀಲಿಸಿದರು. ಅಲ್ಲಿನ ಮಕ್ಕಳ ಕಲಿಕೆ, ಊಟ ಉಪಚಾರಗಳ ಕುರಿತು ಮಾಹಿತಿ ಪಡೆದರು. ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಜ್ಜಪ್ಪ ಸೊಗಲದ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಮಲಾ ಬೈಲೂರ, ಇತರರು ಇದ್ದರು.