

ಚಾಮರಾಜನಗರ: ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಒಳ ಮೀಸಲಾತಿ ವರ್ಗೀಕರಣದಲ್ಲಿ ಶೋಷಿತ ಸಮಾಜವಾಗಿರುವ 59 ಜಾತಿಗಳಿಗೆ ಅನ್ಯಾಯವಾಗಿದ್ದು, ಇದನ್ನು ಸರಿಪಡಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲು ಕೇಂದ್ರದ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರಿಗೆ ಕರ್ನಾಟಕ ರಾಜ್ಯ ಅಲೆಮಾರಿ ಅಸ್ಪಶ್ಯ ಮಹಾ ಒಕ್ಕೂಟದಿಂದ ಪೋಸ್ಟ್ ಕಾರ್ಡ್ ಚಳುವಳಿ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಅಲೆಮಾರಿ ಅಸ್ಪಶ್ಯ ಮಹಾ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ರಾಜೇಂದ್ರಕುಮಾರ್ ಮಾತನಾಡಿ, ಅಲೆಮಾರಿ ಸಮುದಾಯಕ್ಕೆ ಸೇರಿರುವ 59 ಜಾತಿಗಳಿಗೂ ಸಹ ನ್ಯಾಯ ಕಲ್ಪಿಸಬೇಕೆಂಬ ಒತ್ತಾಯ ಮಾಡಿ ಪೋಸ್ಟ್ ಕಾರ್ಡ್ ಚಳವಳಿಯನ್ನು ರಾಜ್ಯಾದ್ಯಂತ ಒಕ್ಕೂಟದಿಂದ ಆಯೋಜನೆ ಮಾಡಲಾಗಿದೆ. ಸಮುದಾಯದ ಮುಖಂಡರು ಪ್ರತಿ ಗ್ರಾಮಗಳಲ್ಲಿರುವ ನಮ್ಮ ಬಂಧುಗಳಿಗೆ ಪೋಸ್ಟ್ ಕಾರ್ಡುಗಳನ್ನು ನೀಡಿ, ತಮ್ಮ ನಿವೇದನೆಯನ್ನು ಬರೆದು ಸಾಮೂಹಿಕವಾಗಿ ರಾಹುಲ್ ಗಾಂಧಿ ಅವರ ವಿಳಾಸಕ್ಕೆ ಕಳುಹಿಸಿಕೊಡುವಂತೆ ತಿಳಿಸಿದರು.
ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಅಸ್ಪಶ್ಯ ಜಾತಿಗೆ ಸೇರಿದ 59 ಅಲೆ ಮಾರಿ ಸಮಾಜಗಳಿಗೆ ಭಾರಿ ಅನ್ಯಾಯವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿಕೊಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ವರ್ಗೀಕರಣದಲ್ಲಿ ನಮ್ಮ ಅಲೆಮಾರಿ ಸಮಾಜವನ್ನು ಹೊರಗಿಡಲಾಗಿದೆ. ಅಲೆಮಾರಿ ಹಾಗು ಅಸ್ಪ ಶ್ಯ ಜನಾಂಗಕ್ಕೆ ಸೇರಿದ 59 ಜಾತಿಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ದೂರಿದರು.
ಅಲೆಮಾರಿ ಅಸ್ಪಶ್ಯ ಮಹಾಒಕ್ಕೂಟದ ಮನವಿ ಮೇರೆಗೆ ಕೇಂದ್ರ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲು ಅ. 2 ರಂದು ಸಮಯ ನೀಡಿದ್ದು, ಅಂದು ಒಕ್ಕೂಟದ ಪ್ರಮುಖ ಪದಾಧಿಕಾರಿಗಳು ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿ ನಮ್ಮ ಮನವಿಯನ್ನು ಸಲ್ಲಿಸುತ್ತೇವೆ ಎಂದರು.
ಸಭೆಯಲ್ಲಿ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಡ್ಯ ರಾಜಣ್ಣ, ಜಿಲ್ಲಾಧ್ಯಕ್ಷ ಉಲ್ಲಾಸ್, ಉಪಾಧ್ಯಕ್ಷ ರೇವಣ್ಣ, ಪ್ರಧಾನ ಕಾರ್ಯದರ್ಶಿ ಆರ್.ರೇವಣ್ಣ, ಹಂದಿ ಜೋಗಿ ಸಂಘದ ಉಪಾಧ್ಯಕ್ಷ ನಾಗಸುಂದರ, ಮುಖಂಡರಾದ ರಾಜು, ಗೋವಿಂದು, ಚಂದ್ರು, ರಾಜು, ಮಹದೇವ್ ಹಾಗೂ ಇತರರು ಭಾಗವಹಿಸಿದ್ದರು.