

ಚಿಂತಾಮಣಿ/ಚಿಕ್ಕಬಳ್ಳಾಪುರ: ಸಮಾಜದಲ್ಲಿನ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ಒದಗಿಸುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಪಾತ್ರ ಮಹತ್ತರವಾದುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ನಗರದಲ್ಲಿ ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ 3.37 ಕೋಟಿ ರೂ. ಅನುದಾನದಲ್ಲಿ ನಿರ್ಮಿಸಿರುವ 45 ಗೃಹಗಳ ಸಮುಚ್ಛಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಅನರ್ಹರು, ಪ್ರಭಾವಿಗಳು ಸಿಗುವ ಸವಲತ್ತುಗಳ ಮೇಲೆ ಹೆಚ್ಚಿನ ನಿಗಾ ವಹಿಸಿ ಸದ್ವಿನಿಯೋಗಪಡಿಸಿಕೊಳ್ಳುತ್ತಾರೆ. ಆದರೆ, ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಯು ತಿಳಿವಳಿಕೆ ಕೊರತೆಯಿಂದ ಮುಖ್ಯವಾಹಿನಿಗೆ ಬಂದು ನೆರವನ್ನು ಪಡೆದುಕೊಳ್ಳುವುದಿಲ್ಲ. ಇಂತಹವರನ್ನು ಪ್ರಮುಖವಾಗಿ ಗುರುತಿಸಬೇಕು. ಅಭಿವೃದ್ಧಿ ಹೊಂದಲು ಪ್ರೋತ್ಸಾಹಿಸಬೇಕಾಗಿದೆ ಎಂದರು.
ನಗರದ ಸ್ವಚ್ಛತೆಯನ್ನು ಕಾಪಾಡುವ ಪೌರ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಸಾಕಷ್ಟು ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ವಾಣಿಜ್ಯ ನಗರಿ ಚಿಂತಾಮಣಿಯು ಮೊದಲಿನಿಂದಲೂ ಅಭಿವೃದ್ಧಿಯಲ್ಲಿ ತ್ವರಿತ ಗತಿಯಲ್ಲಿ ಸಾಗುತ್ತಿದೆ. ಇದು ಮತ್ತಷ್ಟು ಸುಂದರ ನಗರವಾಗಿ ಹೆಸರನ್ನು ಗಳಿಸಬೇಕು ಎಂದರು.
ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮಾತನಾಡಿ, ಜನಪರ ಅಭಿವೃದ್ಧಿ ಕೆಲಸಗಳಿಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು. ಭಿನ್ನಾಭಿಪ್ರಾಯಗಳನ್ನು ಮರೆತು ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕಿ ಎಂ.ರೇಣುಕಾ, ತಹಸೀಲ್ದಾರ್ ಡಿ.ಹನುಮಂತರಾಯಪ್ಪ, ನಗರಸಭೆ ಅಧ್ಯಕ್ಷೆ ರೇಖಾ ಉಮೇಶ್ ಮತ್ತಿತರರು ಇದ್ದರು.
ಹಕ್ಕುಪತ್ರ ವಿತರಣೆ: ಚಿಂತಾಮಣಿ ನಗರಸಭೆಯ ಪೌರ ಕಾರ್ಮಿಕರಿಗೆ 45 ಗೃಹಗಳ ನಿರ್ಮಾಣ, 24 ವಾಣಿಜ್ಯ ಮಳಿಗೆಗಳು ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ 216 ಮಳಿಗೆಗಳ ವೆಂಡಿಂಗ್ ಜೋನ್ ಸೇರಿ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸಚಿವರು ಹಕ್ಕುಪತ್ರಗಳನ್ನು ವಿತರಿಸಿದರು.
ಅಭಿವೃದ್ಧಿ ಕೆಲಸಗಳ ಉದ್ಘಾಟನೆ: ಚಿಂತಾಮಣಿಯ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿನ ಕೆಂಪಮ್ಮ ಬಡಾವಣೆಯಲ್ಲಿ ಐಡಿಎಸ್‌ಎಂಟಿ ಯೋಜನೆಯಡಿ 68 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣವಾದ 24 ವಾಣಿಜ್ಯ ಮಳಿಗೆ ಸಂಕೀರ್ಣದ ಕಟ್ಟಡ, ನಗರದ ಕೆನರಾ ಬ್ಯಾಂಕ್ ರಸ್ತೆಯ ಮೀನು ಮಾರುಕಟ್ಟೆಯ ಹಾಗೂ ರಾಮಕುಂಟೆ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ಮುಂಭಾಗದಲ್ಲಿ 97 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಿಸಲಾದ ಬೀದಿ ಬದಿ ವ್ಯಾಪಾರಸ್ಥರ 216 ಶೆಲ್ಟರ್‌ಗಳ ಉದ್ಘಾಟನೆ ಮತ್ತು ನಗರದಲ್ಲಿನ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಸರ್ಕಾರಿ ಜಾಗ ಒತ್ತುವರಿ ವಿರುದ್ಧ ಹೋರಾಟ ಮಾಡಿ: ಚಿಂತಾಂಣಿ ನಗರದಲ್ಲಿ ಕೆಲವು ಬಲಾಡ್ಯರು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಸಚಿವರು, ಸರ್ಕಾರಿ ಆಸ್ತಿ ಸಾರ್ವಜನಿಕರಿಗೆ ಸೇರಿದ್ದು. ಅದು ಸರ್ಕಾರಕ್ಕೆ ಸೇರಬೇಕು. ಯಾರೇ ಆಗಲಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದರೆ ಅಂತವರ ವಿರುದ್ಧ ಹೋರಾಟ ರೂಪಿಸಿ, ವಿಧಾನಸೌಧ ಚಲೋ ಮಾಡಿ, ನಾನು ಬೆಂಬಲಿಸುತ್ತೇನೆ ಎಂದರು.