ಅರ್ಹರಿಗೆ ಯೋಜನೆ ತಲುಪಿಸಿ

26 charan 4
ಚಾಮರಾಜನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಿ.ಪುಟ್ಟರಂಗಶೆಟ್ಟಿ, ಎನ್.ಮಹೇಶ್, ಚಾರುಲತಾ ಸೋಮಲ್, ಕೆ.ಎಂ.ಗಾಯತ್ರಿ, ಎಸ್.ಕಾತ್ಯಾಯಿನಿದೇವಿ, ಮತ್ತು ಇತರರು ಇದ್ದರು.
Published on

ಅಧಿಕಾರಿಗಳಿಗೆ ಸಂಸದ ವಿ.ಶ್ರೀನಿವಾಸಪ್ರಸಾದ್ ಖಡಕ್ ಸೂಚನೆ

ಚಾಮರಾಜನಗರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳು ಅರ್ಹರಿಗೆ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.


ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಲೀಡ್ ಬ್ಯಾಂಕ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕೃಷಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು. ಕೆಲವೇ ದಿನಗಳಲ್ಲಿ ಮತ್ತೊಂದು ಸಭೆ ನಡೆಸಲಿದ್ದು, ಪೂರ್ಣ ತಯಾರಿಯೊಂದಿಗೆ ಬರಬೇಕು. ಸಾಕಷ್ಟು ಇಲಾಖೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಈ ರೀತಿಯ ನಡವಳಿಕೆಯನ್ನು ಸಹಿಸುವುದಿಲ್ಲ ಎಂದು ಕಿಡಿಕಾರಿದರು.

ಕೋವಿಡ್ ಪರಿಹಾರ ತಾರತಮ್ಯ: ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದ 36 ಜನ ಮೃತಪಟ್ಟಿದ್ದರು. ಆದರೆ ಆರೋಗ್ಯಾಧಿಕಾರಿಗಳು 26 ಜನ ಮಾತ್ರ ಮೃತಪಟ್ಟಿದ್ದಾರೆ ಎಂದು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದ್ದು, ಅವರಿಗೂ ಸೂಕ್ತ ಪರಿಹಾರ ನೀಡಿಲ್ಲ. ಆ ದಿನ ಅಲ್ಲಿ ಏನೇನಾಯ್ತು ಎಂಬುದು ನನಗೆ ಗೊತ್ತು. ಈಗ ಅದನ್ನೆಲ್ಲ ಹೇಳುವುದು ಬೇಡ. ಬಡಕುಟುಂಬಗಳಿಗೆ ಪರಿಹಾರ ದೊರೆಯಬೇಕು. ಪರಿಹಾರ ಕೊಡಲು ಸರ್ಕಾರದ ಬಳಿ ದುಡ್ಡಿಲ್ಲವೇ ಎಂದು ಪ್ರಶ್ನಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ಮಾತನಾಡಿ, ಆಕ್ಸಿಜನ್ ದುರಂತದಿಂದ 26 ಜನ ಮೃತಪಟ್ಟಿದ್ದಾರೆ. 12 ಜನರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಉಳಿದವರಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು.

ಕೋವಿಡ್ ವ್ಯಾಕ್ಸಿನೇಷನ್ 10ನೇ ಸ್ಥಾನ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ಮಾತನಾಡಿ, ಜಿಲ್ಲೆಯಲ್ಲಿ 10 ಲಕ್ಷ ಜನಸಂಖ್ಯೆಯಿದ್ದು, 18 ವರ್ಷ ಮೇಲ್ಪಟ್ಟ 6.67 ಲಕ್ಷ ಜನರಿಗೆ ಕೋವಿಡ್ ವ್ಯಾಕ್ಸಿನೇಷನ್ ಹಾಕುವ ಮೂಲಕ ಜಿಲ್ಲೆ 10ನೇ ಸ್ಥಾನದಲ್ಲಿದೆ ಎಂದರು.
ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಣೆಗಾಗಿ ಜಿಲ್ಲಾದ್ಯಂತ 215 ಸಮುದಾಯ ಆರೋಗ್ಯಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು ನಿತ್ಯ ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಒಂದು ದಿನಕ್ಕೆ ಒಬ್ಬರು 10 ಕಾರ್ಡ್ ವಿತರಿಸಬೇಕೆಂದು ಗುರಿ ನಿಗದಿಪಡಿಸಲಾಗಿದೆ. ಜಿಲ್ಲೆಯ 6.62 ಲಕ್ಷ ಜನರಿಗೆ ಆಯುಷ್ಮಾನ್ ಕಾರ್ಡ್ ನೀಡಬೇಕಿದ್ದು ಈವರೆಗೆ 1.42 ಲಕ್ಷ ಕಾರ್ಡ್ ವಿತರಣೆಯಾಗಿದೆ ಎಂದರು. ಮಾರಕ ಕೋವಿಡ್ ಕಾಯಿಲೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲರೂ ತಪ್ಪದೇ ಲಸಿಕೆ ಹಾಕಿಸಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಶ್ರೀನಿವಸ ಪ್ರಸಾದ್ ಸೂಚನೆ ನೀಡಿದರು.

ಪೌತಿ ಖಾತೆ ವಿಳಂಬ: ರೈತರಿಗೆ ಪೌತಿ ಖಾತೆ ಮಾಡಿಕೊಡಲು ಅರಣ್ಯ ಇಲಾಖೆಯವರು ವಿಳಂಬ ಮಾಡುತ್ತಿದ್ದಾರೆ. ಕಾನೂನು ಸಹ ಅಧಿಕಾರಿಗಳ ಪರವಾಗಿದೆ ಎನ್ನುತ್ತಾರೆ. ಚಾಮರಾಜನಗರ ತಾಲೂಕಿನ ಪುಣಜೂರು ವ್ಯಾಪ್ತಿಯಲ್ಲಿ ಈ ಪ್ರಕರಣ ಹೆಚ್ಚಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಸಭೆಯ ಗಮನಕ್ಕೆ ತಂದರು. ನನ್ನ ಕ್ಷೇತ್ರದಲ್ಲಿ ಬಗರ್ ಹುಕುಂ ಸಾಗುವಳಿ ಹಕ್ಕುಪತ್ರ ನೀಡಲಾಗಿದೆ. ಹಕ್ಕುಪತ್ರ ಕೊಟ್ಟ ಮೇಲೆ ಖಾತೆ ಮಾಡಿಲ್ಲ. ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ಅಧಿಕಾರಿಗಳು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು. ಅಲ್ಲದೆ ಅರಣ್ಯ ಹಕ್ಕು ಕಾಯ್ದೆಯಡಿ ಗಿರಿಜನರಿಗೆ ಹಕ್ಕುಪತ್ರ ನೀಡಲಾಗಿದೆ. ಆದರೆ, ಖಾತೆ ಆಗಿಲ್ಲ. ಇದರಿಂದ ಸರ್ಕಾರದ ಸವಲತ್ತು ಈ ರೈತರಿಗೆ ಸಿಗುತ್ತಿಲ್ಲ ಎಂದು ದೂರಿದರು. ಇದಕ್ಕೆ ದನಿಗೂಡಿಸಿದ ಕೊಳ್ಳೆಗಾಲ ಶಾಸಕ ಎನ್.ಮಹೇಶ್, ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲೂ ಇದೇ ರೀತಿಯ ಸಮಸ್ಯೆಯಾಗುತ್ತಿದೆ. ಪಿಎಂ ಕಿಸಾನ್ ಯೋಜನೆ ಜಾರಿಯಾಗಿ ಮೂರು ವರ್ಷ ಕಳೆದಿದೆ. ಇನ್ನೂ ನಿರೀಕ್ಷಿತ ಗುರಿ ತಲುಪಿಲ್ಲ ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್ ಮಾತನಾಡಿ, ಪೌತಿ ಖಾತೆ ವಿಳಂಬವಾಗುತ್ತಿರುವ ಕುರಿತು ಮಾಹಿತಿ ಪಡೆದು ಸಮಸ್ಯೆ ಬಗೆಹರಿಸಲಾಗುವುದು. ಪೌತಿ ಖಾತೆಯಿಂದಾಗಿ ಕುಟುಂಬದ ಒಬ್ಬ ವ್ಯಕ್ತಿಯ ಹೆಸರಲ್ಲಿ ಆರ್‌ಟಿಸಿ ಬರುತ್ತಿಲ್ಲ. ಇದರಿಂದ ರೈತರ ಹೆಸರು ನೋಂದಣಿಯಾಗಿಲ್ಲ ಎಂದರು.

ಗಿರಿಜನ ಅಭಿವೃದ್ಧಿ ವಿಸ್ತರಣಾಧಿಕಾರಿ ಶಿವನಾಗ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆಯಡಿ ಜಿಲ್ಲೆಯಲ್ಲಿ 2059 ಹಕ್ಕುಪತ್ರ ನೀಡಲಾಗಿದೆ. 918 ಗಿರಿಜನರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಣಿಯಾಗಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿ.ಪುಟ್ಟರಂಗಶೆಟ್ಟಿ, 2059 ಗಿರಿಜನರಿಗೆ ಹಕ್ಕುಪತ್ರ ನೀಡಿದ್ದರೂ 918 ಗಿರಿಜನರು ಮಾತ್ರ ನೋಂದಣಿಯಾಗಿದ್ದಾರೆ. ಉಳಿದವರು ಯಾಕೆ ನೋಂದಣಿಯಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಹೆದ್ದಾರಿ ಅಧಿಕಾರಿಗೆ ತರಾಟೆ: ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತೀವ್ರ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಮಲ್ಲಿಕಾರ್ಜುನ ಅವರನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಸೂಚಿಸಿದರು. ನಂಜನಗೂಡು-ಗುಂಡ್ಲುಪೇಟೆ ರಸ್ತೆ ತೀರಾ ಕಳಪೆಯಾಗಿದೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಸಭೆಯ ಗಮನಕ್ಕೆ ತಂದರು.

ಉಸ್ತುವಾರಿ ಸಚಿವರ ಹೆಸರು ಕೆಡಿಸದಿರಿ: ಅಂಬೇಡ್ಕರ್ ಅಭಿವೃದ್ಧಿ ನಿಗಮದ ಐರಾವತ ಯೋಜನೆಯಡಿ ತಾಂಡಾ ನಿವಾಸಿಗಳಿಗೆ ಪರಿಹಾರದ ಚೆಕ್ ಕೊಡಿಸಿ ವಾಪಸ್ ಪಡೆದಿದ್ದೀರಿ. ನಾನು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಫಲಾನುಭವಿಗಳಿಗೆ ಚೆಕ್ ನೀಡಿದ್ದೇವೆ. ಅವರಿಂದ ಚೆಕ್ ವಾಪಸ್ ಪಡೆದರೆ ಏನರ್ಥ? ಅದರಲ್ಲಿ ದುಡ್ಡಿಲ್ಲ ಎಂಬುದನ್ನು ಮೊದಲೇ ಖಚಿತಪಡಿಸಿಕೊಳ್ಳಬೇಕಿತ್ತಲ್ಲವೇ? ಉಸ್ತುವಾರಿ ಸಚಿವರ ಹೆಸರು ಕೆಡಿಸಲು ಹೀಗೆ ಮಾಡಿದ್ರಾ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ವಿರುದ್ಧ ವಾಗ್ದಾಳಿ ನಡೆಸಿದರು.
ನಿಗಮ ವ್ಯವಸ್ಥಾಪಕ ಮಾತನಾಡಿ, ತಲಾ 10 ಲಕ್ಷ ರೂ. ಮೊತ್ತದ ಚೆಕ್ ಅದಾಗಿತ್ತು. ಆದರೆ, ಪರಿಹಾರ ಮೊತ್ತದಲ್ಲಿ ವ್ಯತ್ಯಾಸ ಆಗಿರುವುದರಿಂದ ವಾಪಸ್ ಮಾಡಲಾಗಿದೆ. ಈ ಹಿಂದಿನ ಅಧಿಕಾರಿ ಮಾಡಿರುವ ಕೆಲಸ ಅದು, ಆದರೆ ಅವರೀಗ ನಿವೃತ್ತಿಯಾಗಿದ್ದಾರೆ ಎಂದು ಸಮಜಾಯಿಸಿ ನೀಡಲು ಮುಂದಾದರು. ಆಗ ಮಧ್ಯ ಪ್ರವೇಶಿಸಿದ ಶಾಸಕ ಎನ್.ಮಹೇಶ್, ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಮಲೆ ಮಹದೇಶ್ವರ ವನ್ಯಜೀವಿ ಧಾಮದ ಡಿಸಿಎಫ್ ಸಂತೋಷ್ ಕುಮಾರ್, ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷ ಗಿರೀಶ್, ಕೊಳ್ಳೇಗಾಲ ನಗರಸಭೆ ಅಧ್ಯಕ್ಷೆ ಆರ್. ಸುಶೀಲಾ, ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಮಲ್ಲೇಶಪ್ಪ, ಲೋಕೇಶ್, ನಾಗೇಶ್, ಸರಸ್ವತಿ, ಬೇಗೂರು ಗ್ರಾಪಂ ಅಧ್ಯಕ್ಷೆ ಇಂದಿರಾ, ಅಗತಗೌಡನಹಳ್ಳಿ ಗ್ರಾಪಂ ಅಧ್ಯಕ್ಷೆ ಸೌಭಾಗ್ಯ, ನಂಜದೇವನಪುರ ಗ್ರಾಪಂ ಅಧ್ಯಕ್ಷೆ ಮೇಘಶ್ರೀ, ಕುಂತೂರು ಗ್ರಾಪಂ ಅಧ್ಯಕ್ಷ ಶಿವಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net