ಅರ್ಹರಿಗೆ ತಲುಪಲಿ ಗ್ಯಾರಂಟಿ ಪ್ರಯೋಜನ

CTD GARANTI-----------
Published on

ಚಿತ್ರದುರ್ಗ: ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ, ಯುವನಿಧಿ ಹಾಗೂ ಅನ್ನಭಾಗ್ಯ ಗ್ಯಾರಂಟಿ ಯೋಜನೆಗಳು ಅರ್ಹರೆಲ್ಲರಿಗೂ ತಲುಪುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂದಲ್ಲಿ ಶುಕ್ರವಾರ ಗ್ಯಾರಂಟಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಗ್ಯಾರಂಟಿಗಳು ಅರ್ಹರಿಗೆ ತಲುಪದಿದ್ದಲ್ಲಿ, ಅದಕ್ಕೆ ಕಾರಣ ಕಂಡು ಹಿಡಿಯಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರಾ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ 3,85,484 ಫಲಾನುಭವಿಗಳಿಗೆ 2023 ರ ಆಗಸ್ಟ್‌ನಿಂದ 2024 ರ ಡಿಸೆಂಬರ್‌ವರೆಗೆ 76,77,98000 ರೂ.ಗಳನ್ನು ಫಲಾನುಭವಿಗಳ ಖಾತೆಗೆ ಜಮೆ ಆಗಿದೆ. 2025 ರ ಜನವರಿಯಿಂದ ಹಣ ಪಾವತಿ ಪ್ರಾರಂಭವಾಗಿದೆ ಎಂದರು.

ನೋಂದಣಿಯಾಗದ ಫಲಾನುಭವಿಗಳನ್ನು ನೋಂದಣಿಗಾಗಿ ಅಂಗನವಾಡಿ ಕಾರ‌್ಯಕರ್ತೆಯರ ಮೂಲಕ ಪ್ರತಿ ಗ್ರಾಮಗಳಲ್ಲಿ ಪ್ರಚಾರ ಮಾಡಿಸಬೇಕು. ಅರ್ಹರು ಯೋಜನೆಯಿಂದ ವಂಚಿತರಾಗದಂತೆ ಕ್ರಮ ವಹಿಸಬೇಕು ಎಂದು ಶಿವಣ್ಣ ಸೂಚಿಸಿದರು.

ಸಮಿತಿ ಸದಸ್ಯ ಆರ್.ಪ್ರಕಾಶ್ ಮಾತನಾಡಿ, ಚಿಕ್ಕಮಗಳೂರಲ್ಲಿ ಶೇ.100 ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿ ದೆ. ಅದರಂತೆ ನಮ್ಮ ಜಿಲ್ಲೆಯಲ್ಲೂ ಅನುಷ್ಠಾನವಾಗಬೇಕಿದೆ ಎಂದರು.

ಪ್ರಾಧಿಕಾರದ ಸದಸ್ಯ ಕಾರ‌್ಯದರ್ಶಿ ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಮಾತನಾಡಿ, ಗೃಹಲಕ್ಷ್ಮೀ ಯೋಜನೆ ಹಣದಿಂದ ಸ್ವಯಂ ಉದ್ಯೋಗ ನಡೆಸುತ್ತಿರುವ ಫಲಾನುಭವಿಗಳ ಯಶೋಗಾಥೆಗಳನ್ನು ಪ್ರಚುರ ಪಡಿಸಬೇಕೆಂದರು.

ಕೆಎಸ್‌ಆರ್‌ಟಿಸಿ ಡಿಸಿ ವೆಂಕಟೇಶ್ ಮಾತನಾಡಿ, ಶಕ್ತಿ ಯೋಜನೆಯಡಿ ಚಿತ್ರದುರ್ಗ ವಿಭಾಗದಿಂದ 2023 ರ ಜೂನ್‌ನಿಂದ 2025 ರ ಮೇ 4 ರವರೆಗೆ ನಗರ, ಸಾಮಾನ್ಯ ಹಾಗೂ ವೇಗದೂತ ಬಸ್‌ಗಳಲ್ಲಿ 4,36,09138 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿ ದ್ದಾರೆ. ಪ್ರಯಾಣ ದರದ ಮೊತ್ತ 177,33,69463 ರೂ. ಆಗಿದೆ. ನಿತ್ಯ ಸರಾಸರಿ 62837 ಮಹಿಳಾ ಪ್ರಯಾಣಿಕರು ಯೋಜನೆ ಸದು ಪಯೋಗ ಪಡೆದುಕೊಳ್ಳುತ್ತಿದ್ದು, ಚಿತ್ರದುರ್ಗ ವಿಭಾಗಕ್ಕೆ 25,55,287 ರೂ.ಆದಾಯ ಬಂದಿದೆ ಎಂದರು.

ಸಮಿತಿ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ ಮಾತನಾಡಿ, ಫಲಾನುಭವಿಗಳೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ತಿಳಿಸಬೇಕೆಂದು ವೆಂಕಟೇಶ್‌ಗೆ ಸೂಚಿಸಿದರು.

ಚಿತ್ರದುರ್ಗ-ದಾವಣಗೆರೆ ಹಾಗೂ ಮುಂದಕ್ಕೆ ಕಾರ್ಯಾಚರಣೆ ಮಾಡುವ ಎಲ್ಲ ವೇಗದೂತ ಬಸ್‌ಗಳು ಕಡ್ಡಾಯವಾಗಿ ಭರಮಸಾಗರದ ಸರ್ವೀಸ್ ರಸ್ತೆಗೆ ತೆರಳುವಂತೆ ಮಾಡಿ, ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಸದಸ್ಯ ಟಿ.ನಿರಂಜನ್ ಸಲಹೆ ನೀಡಿದರು.

ಜಿಲ್ಲೆಯ 5312 ಪದವಿ ಹಾಗೂ 103 ಡಿಪ್ಲೊಮಾ ಫಲಾನುಭವಿಗಳು ಸೇರಿದಂತೆ 5415 ನಿರುದ್ಯೋಗಿಗಳು ಯುವನಿಧಿ ಸೌಲಭ್ಯ ಪಡೆದಿರುತ್ತಾರೆ. 2024ರ ಜನವರಿಯಿಂದ 2025ರ ಫೆಬ್ರವರಿ ಅಂತ್ಯದವರೆಗೆ ರೂ.10,0495500 ರೂ.ಗಳನ್ನು ನಿರುದ್ಯೋಗಿಗಳ ಖಾ ತೆಗೆ ಡಿಬಿಟಿ ಮಾಡಲಾಗಿದೆ ಎಂದು ಉದ್ಯೋಗಾಧಿಕಾರಿ ರವೀಂದ್ರ ತಿಳಿಸಿದರು.

ಕಳೆದ ಫೆಬ್ರವರಿಯಿಂದ ಅನ್ನಭಾಗ್ಯ ಯೋಜನೆಯಡಿ ನೇರ ನಗದು ವರ್ಗಾವಣೆ ಬದಲಿಗೆ ಹೆಚ್ಚುವರಿಯಾಗಿ 5 ಕೆ.ಜಿ.ಅಕ್ಕಿಯನ್ನು ವಿತ ರಿಸಲಾಗುತ್ತ್ತಿದೆ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್ ತಿಳಿಸಿದರು. ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾ ನ್ಯಗಳನ್ನು ಜಿಲ್ಲಾ, ತಾಲೂಕು ಸಮಿತಿಯವರ ಸಮ್ಮುಖದಲ್ಲಿ ವಿತರಿಸಬೇಕೆಂದು ಶಿವಣ್ಣ ತಿಳಿಸಿದರು.

ಮೇ 15 ರಂದು ಜಿಲ್ಲಾ ಕೇಂದ್ರ ಹಾಗೂ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸಮಿತಿಯವರ ಸಮ್ಮುಖದಲ್ಲಿ ವಿತರಿಸುವುದಾಗಿ ಮಧುಸೂದನ್ ಹೇಳಿದರು.

ಸಮಿತಿ ಸದಸ್ಯರಾದ ಅಬ್ದುಲ್ಲಾ ಶಾವಲಿ, ಟಿ.ಕೃಷ್ಣಮೂರ್ತಿ, ಹೇಮಂತ್ ಯಾದವ್, ಮಹಮ್ಮದ್ ಇಸ್ಮಾಯಿಲ್, ಶಿವಕುಮಾರ್, ಎಲ್.ಇಂದಿರಾ, ಜಿಪಂ ಸಿಇಪಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net