

ರಾಮನಗರ : ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಪಡೆದು ಅರ್ಹ ನಾಯಕನನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್.ಜೆ. ಮರುಳಸಿದ್ದಾರಾಧ್ಯ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮಾತನಾಡಿ, ಮತದಾನ ಎಲ್ಲರ ಹಕ್ಕು ಹಾಗೂ ಕರ್ತವ್ಯ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ನಿಸ್ವಾರ್ಥ ಹಾಗೂ ಉತ್ತಮ ಮನೋಭಾವ ಹೊಂದಿದವರನ್ನು ಯಾವುದೇ ಅಮಿಷಗಳಿಗೆ ಒಳಗಾಗದೇ ಆಯ್ಕೆ ಮಾಡಬೇಕು. ಪ್ರತಿಯೊಬ್ಬರೂ ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡಬೇಕು ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ಮಾತನಾಡಿ, ಸುಭದ್ರ ದೇಶ ನಿರ್ಮಾಣಕ್ಕೆ ಮತದಾನ ಶಕ್ತಿಯುತ.ಜಾತಿ ಮತ್ತು ಧರ್ಮ ಆಮಿಷಗಳಿಗೆ ಒಳಗಾಗದೇ ನಿರ್ಭೀತಿಯಿಂದ ಮತದಾನ ಮಾಡಬೇಕು. ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ.85-90ರಷ್ಟು ಮತದಾನವಾಗುತ್ತದೆ. ನಗರ ಪ್ರದೇಶದಲ್ಲಿ ಶೇ.65-70 ಮಾತ್ರ ಮತದಾನವಾಗುತ್ತದೆ. ನಗರ ಪ್ರದೇಶದ ಜನರು ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚು ಪಾಲ್ಗೊಳ್ಳಬೇಕು ಎಂದರು.
ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೇವಲ ಒಂದು ಮತದಿಂದ ವಿಜೇತರಾದವರನ್ನು ನೋಡಬಹುದಾಗಿದೆ. ಇಲ್ಲಿ ಒಂದು ಮತವೂ ಮುಖ್ಯವಾಗಿದೆ ಎನ್ನುವುದು ಹಲವಾರು ಬಾರಿ ಸಾಬೀತಾಗಿದೆ ಎಂದು ಹೇಳಿದರು.
ಪ್ರತಿವರ್ಷ ಮತದಾರರ ಪಟ್ಟಿಯಲ್ಲಿ 20-25 ಸಾವಿರ ಹೆಸರು ನೋಂದಣಿಯಾಗುತ್ತದೆ. ಇವರಲ್ಲಿ ಹೆಚ್ಚಿನವರು ಯುವಜನರಾಗಿದ್ದಾರೆ. ಐದು ವರ್ಷಕ್ಕೆ ಲೆಕ್ಕಾಚಾರ ಮಾಡಿದರೆ ಸುಮಾರು ಒಂದು ಲಕ್ಷದಷ್ಟು ಯುವ ಮತದಾರರು ಇರುತ್ತಾರೆ ಎಂದರು.
ಕಾನೂನು ಕಾಲೇಜಿನ ಪ್ರಾಧ್ಯಾಪಕ ಪ್ರದೀಪ್ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನ ರಚಿಸುವಾಗ ಭಾರತದ ಶೇ.90ರಷ್ಟು ಜನ ಕೃಷಿಕರಾಗಿದ್ದರು. ವಿದ್ಯಾವಂತರ ಸಂಖ್ಯೆ ಕಡಿಮೆ ಇತ್ತು. ಆದರೂ ಪ್ರತಿಯೊಬ್ಬರಿಗೂ ಮತದಾನ ಹಕ್ಕು ನೀಡಿ ಪ್ರಜಾಪ್ರಭುತ್ವ ಆಡಳಿತ ನೀಡಿದರು. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಮತದಾನ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಟಿ. ಜವರೆಗೌಡ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿಯನ್ನು ವಿತರಿಸಲಾಯಿತು. ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿದ್ದಲಿಂಗ ಪ್ರಭು, ಜಿಪಂ ಸಿಇಒ ಇಕ್ರಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ. ವೆಂಕಟಪ್ಪ, ಜಿಪಂ ಉಪ ಕಾರ್ಯದರ್ಶಿ ರಮೇಶ್, ತಹಸೀಲ್ದಾರ್ ವಿಜಯ್‌ಕುಮಾರ್ ಮತ್ತಿತರರು ಇದ್ದರು.