ಅರ್ಹತಾ ಕಟ್‍ಆಫ್ ಅಂಕ ಶೇ.15ಕ್ಕೆ ಇಳಿಸಿ

Somnath Mudhool
Published on

ಬೀದರ್: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ 1,492 ಹುದ್ದೆಗಳನ್ನು ಮೆರಿಟ್ ಆಧಾರದಲ್ಲಿ ಭರ್ತಿ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಈ ಕುರಿತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್ (ವಿದ್ಯುತ್/ಸಿವಿಲ್) ಹಾಗೂ ಕಿರಿಯ ಸಹಾಯಕ ಹುದ್ದೆಗಳಿಗೆ ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ ಕನಿಷ್ಠ ಶೇ 35 ರಷ್ಟು ಅಂಕ ಗಳಿಸಿದವರು ಮಾತ್ರ ಅರ್ಹರು ಎನ್ನುವ ಷರತ್ತು ವಿಧಿಸಿರುವ ಕಾರಣ ಪರೀಕ್ಷೆಗೆ ಹಗಲಿರುಳು ತಯಾರಿ ನಡೆಸಿದ ಬಡ, ದೀನ, ದಲಿತ ಅಭ್ಯರ್ಥಿಗಳು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಈಚೆಗೆ ಪ್ರಕಟಿಸಿದ ಸಹಾಯಕ ಎಂಜಿನಿಯರ್‍ಗಳ 505 ಹುದ್ದೆಗಳ ಪಟ್ಟಿಯಲ್ಲಿ 501 ಅಭ್ಯರ್ಥಿಗಳು ಮಾತ್ರ ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ.
ಹಿಂದೆ ವಿದ್ಯುತ್ ಕಂಪನಿಗಳ ಹುದ್ದೆ ಭರ್ತಿಗೆ ಯಾವುದೇ ಪರೀಕ್ಷೆ ಇರಲಿಲ್ಲ. ಕಾರಣ, ಶೇ 35 ರಷ್ಟು ಅಂಕದ ಷರತ್ತು ರದ್ದುಪಡಿಸಬೇಕು. ಅರ್ಹತಾ ಕಟ್‍ಆಫ್ ಅಂಕ ಶೇ 15 ಕ್ಕೆ ಇಳಿಸಬೇಕು. ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೀಸಲಾತಿ ಅನ್ವಯ ಮೆರಿಟ್ ಪಟ್ಟಿ ಸಿದ್ಧಪಡಿಸಿ, ಅದರ ಆಧಾರದಲ್ಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಈ ಮೂಲಕ ಬಡ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net