

ಸೋಮವಾರಪೇಟೆ: ಸರ್ಕಾರದ ಎಲ್ಲ್ಲ ಯೋಜನೆಗಳು ಅರ್ಹ ರೈತರಿಗೆ ತಲುಪುವಂತಾಗಬೇಕೆಂದು ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಹೇಳಿದರು.
ತಾಲೂಕಿನ ಬೇಳೂರು ಪಂಚಾಯಿತಿ ವ್ಯಾಪ್ತಿಯ ಬಳಗುಂದ ಗ್ರಾಮದ ಸಸ್ಯಕ್ಷೇತ್ರದಲ್ಲಿ ಸೋಮವಾರ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯ ಪುನಶ್ಚೇತನ ಯೋಜನೆಯಡಿ ರೈತರಿಗೆ ಕಾಳುಮೆಣಸು ಮತ್ತು ಕಿತ್ತಳೆ ಗಿಡಗಳನ್ನು ವಿತರಿಸಿ ಅವರು ಮಾತನಾಡಿದರು.
ಸಸ್ಯಕ್ಷೇತ್ರದಿಂದ ವಿತರಣೆ ಆಗುತ್ತಿರುವ ಯೋಜನೆಗಳು ಮೊದಲು ಸಣ್ಣ ರೈತರಿಗೆ ತಲುಪುವಂತಾಗಬೇಕು. ಒಮ್ಮೆ ವಿತರಣೆ ಮಾಡಿದವರಿಗೆ ಐದು ವರ್ಷದವರೆಗೆ ವಿತರಣೆ ಮಾಡಬಾರದು. ಸರ್ಕಾರದ ಎಲ್ಲ ಯೋಜನೆಗಳು ಪ್ರತಿಯೊಬ್ಬ ರೈತ ಫಲಾನುಭವಿಗಳಿಗೂ ದೊರಕಬೇಕು. ಮೆಣಸು, ಕಿತ್ತಳೆ ಹಾಗೂ ಅಡಕೆ ಸಸ್ಯಗಳು ರೈತರಿಗೆ ಹೆಚ್ಚಿನ ಉಪಯೋಗಕ್ಕೆ ಬರುತ್ತಿರುವುದರಿಂದ ಮುಂದಿನ ಸಾಲಿನಿಂದ ಹೆಚ್ಚು ಗಿಡಗಳನ್ನು ಬೆಳೆದು ವಿತರಿಸಲು ಇಲಾಖೆ ಕ್ರಮಕೈಗೊಳ್ಳಬೇಕು. ಇದಕ್ಕೆ ಬೇಕಾದ ಅನುದಾನದ ವ್ಯವಸ್ಥೆ ಮಾಡಿಕೊಡಲಾಗುವುದು. ರೈತರು ಮಣ್ಣಿನ ಗುಣಮಟ್ಟದ ಕಡೆಗೂ ಹೆಚ್ಚಿನ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ, ಉಪಾಧ್ಯಕ್ಷ ಕೆ.ಪಿ.ಸುದರ್ಶನ್, ಸದಸ್ಯೆ ಪುಷ್ಪಾವತಿ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಯೋಗೇಶ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಡಾ.ಮಂಜುನಾಥ್ ಜೆ.ಶೆಟ್ಟಿ, ಪ್ರಮುಖರಾದ ಕೆ.ಎಂ.ಲೋಕೇಶ್, ಬಿ.ಬಿ.ಸತೀಶ್ ಮತ್ತಿತರರು ಇದ್ದರು.